ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ರಾಜೀನಾಮೆಗೆ ಆಗ್ರಹಿಸಿ ನವದೆಹಲಿಯಲ್ಲಿ ವಿದ್ಯಾರ್ಥಿಗಳು ಹಾಗೂ ಮುಂಬೈನಲ್ಲಿ ಠಾಕ್ರೆ ಬಣದಿಂದ ಬೃಹತ್ ಪ್ರತಿಭಟನೆ ನಡೆಯುತ್ತಿದೆ. ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅಕ್ರಮ ಆರೋಪಿಸಿ ಅಕ್ಟೋಬರ್ 7ರಂದು ಇಂಡಿಯಾ ಮೈತ್ರಿಕೂಟ ಕೂಡ ಚುನಾವಣಾ ಆಯೋಗದ ಕಚೇರಿ ಎದುರು ಪ್ರತಿಭಟನೆ ನಡೆಸಲು ನಿರ್ಧರಿಸಿದೆ.

ನವದೆಹಲಿ: ಚುನಾವಣಾ ಆಯೋಗದ ನಿರ್ಧಾರಗಳನ್ನು ಏಕಪಕ್ಷೀಯವಾಗಿ ತೆಗೆದುಕೊಂಡ ಆರೋಪ ಹೊತ್ತಿರುವ ಸಿಇಸಿ ಜ್ಞಾನೇಶ್‌ ಕುಮಾರ್‌ ಅವರ ರಾಜೀನಾಮೆಗೆ ಆಗ್ರಹಿಸಿ ಅಖಿಲ ಭಾರತ ವಿದ್ಯಾರ್ಥಿ ಸಂಘ (ಎಐಎಸ್‌ಎ) 3ನೇ ದಿನವಾದ ಭಾನುವಾರವೂ ಪ್ರತಿಭಟನೆ ಮುಂದುವರಿಸಿದೆ. ಈ ವೇಳೆ ಪ್ರತಿಭಟನಾಕಾರರನ್ನು ಜಂತರ್‌ ಮಂತರ್‌ ಪ್ರವೇಶಿಸದಂತೆ ತಡೆದ ಪೊಲೀಸರೊಂದಿಗೆ ಘರ್ಷಣೆ ಆಗಿದೆ.

ಅಶೋಕ್‌ ರಸ್ತೆಯಲ್ಲಿರುವ ಆಂಧ್ರ ಭವನ ಸರ್ಕಲ್‌ನಿಂದ ಹೊರಟ ರ್‍ಯಾಲಿಯು ಘೋಷಣೆಗಳನ್ನು ಕೂಗುತ್ತಾ ಜಂತರ್‌ ಮಂತರ್‌ ತಲುಪಿತು. ಆದರೆ ಅಲ್ಲಿ ಅದಾಗಲೇ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದ್ದವು. ಸಂಘದ ಅಧ್ಯಕ್ಷೆ ನೇಹಾ ಬೋರಾ ಸೇರಿ ಇತರರು ಅವನ್ನು ದಾಟಿ ಜಂತರ್‌ ಮಂತರ್‌ ಪ್ರವೇಶಿಸಲು ಯತ್ನಿಸಿದಾಗ ಪೊಲೀಸರು ತಡೆದಿದ್ದಾರೆ. ಈ ವೇಳೆ ಅವರೊಂದಿಗೆ ನೂಕಾಟ ನಡೆದಿದೆ.

ಶನಿವಾರ ನಡೆದ ಇಂಥ ಯತ್ನದ ವೇಳೆ 150 ಹಾಗೂ ಮೊದಲ ದಿನವಾದ ಶುಕ್ರವಾರ 500ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ನೇಹಾ ವಶಕ್ಕೆ- ವಿವಾದ:

ಪ್ರತಿಭಟನ ವೇಳೆ ವಿದ್ಯಾರ್ಥಿ ನಾಯಕಿ ನೇಹಾ ಬೋರಾ ಅವರನ್ನು ದೆಹಲಿ ಪೊಲೀಸರು ಅಧಿಕೃತ ನಂಬರ್ ಪ್ಲೇಟ್ ಇಲ್ಲದ ಖಾಸಗಿ ವಾಹನದಲ್ಲಿ ಅಜ್ಞಾತ ಸ್ಥಳಕ್ಕೆ ಕರೆದೊಯ್ದರು ಎಂದು ಎಐಎಸ್ಎ ಸದಸ್ಯರು ಆರೋಪಿಸಿದ್ದಾರೆ.

ಜ್ಞಾನೇಶ್‌ ಕುಮಾರ್‌ ರಾಜೀನಾಮೆ ನೀಡಬೇಕು: ಉದ್ದವ್‌

ಮುಂಬೈ: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಯಲ್ಲಿ (ಎಸ್‌ಐಆರ್‌) ಭಾರೀ ಅಕ್ರಮಗಳು ನಡೆದಿದೆ ಎಂದು ಆರೋಪಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಅವರ ರಾಜೀನಾಮೆಗೆ ಒತ್ತಾಯಿಸಿ ಮುಂಬೈನಲ್ಲಿ ಉದ್ದವ್‌ ಠಾಕ್ರೆ ಬಣದ ಶಿವಸೇನೆ ಹಾಗೂ ರಾಜ್‌ ಠಾಕ್ರೆ ನೇತೃತ್ವದ ಎಂಎನ್‌ಎಸ್‌ನಿಂದ ಭಾನುವಾರ ಬೃಹತ್‌ ರ್‍ಯಾಲಿ ನಡೆಯಿತು.

ಈ ವೇಳೆ ಮಾತನಾಡಿದ ಉದ್ದವ್‌ ಠಾಕ್ರೆ, ಜ್ಞಾನೇಶ್‌ ಕುಮಾರ್‌ ಅವರು ಆಡಳಿತಾರೂಢ ಬಿಜೆಪಿ ಪಾಲಿನ ಆಯುಧವಾಗಿ ಕೆಲಸ ಮಾಡುತ್ತಿದ್ದಾರೆ. ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಇದೇ ವೇಳೆ. ದೇಶದಲ್ಲಿ ಭವಿಷ್ಯದಲ್ಲಿ ಚುನಾವಣೆಗಳನ್ನು ಬ್ಯಾಲೆಟ್‌ ಮೂಲಕ ನಡೆಸಬೇಕು ಮತ್ತು ಮಹಾರಾಷ್ಟ್ರದಲ್ಲಿ ಎಸ್‌ಐಆರ್‌ ಪ್ರಕ್ರಿಯೆಯನ್ನು ರದ್ದು ಮಾಡಬೇಕು ಎಂದು ರಾಜ್‌ ಠಾಕ್ರೆ ಆಗ್ರಹಿಸಿದರು.

ಕೇಂದ್ರದ ಬಳಿ ಮಾಹಿತಿ ಇದೆಯೇ?’

‘ಎಸ್‌ಐಆರ್‌ ಅಕ್ರಮ ಬಾಂಗ್ಲಾನಿವಾಸಿಗಳನ್ನು ತೆಗೆದು ಹಾಕುವುದೇ ಆಗಿದ್ದರೆ ಎಷ್ಟು ಮಂದಿ ಬಾಂಗ್ಲಾನಿವಾಸಿಗಳು ದೇಶದಲ್ಲಿ ಪತ್ತೆಯಾಗಿದ್ದಾರೆ ಎಂಬ ಬಗ್ಗೆ ಕೇಂದ್ರದ ಬಳಿ ಮಾಹಿತಿ ಇದೆಯೇ?’ ಎಂದು ಪ್ರಶ್ನಿಸಿದ ಠಾಕ್ರೆ, ‘ಮಹಾರಾಷ್ಟ್ರದಲ್ಲಿ ಚುನಾವಣಾ ಆಯೋಗವು 2 ಕೋಟಿ ಮತದಾರರ ಹೆಸರು ಡಿಲೀಟ್‌ ಮಾಡಿದೆ. ಪಶ್ಟಿಮ ಬಂಗಾಳದಲ್ಲಿ 30 ಲಕ್ಷ ಹಾಗೂ ತಮಿಳುನಾಡಿನಲ್ಲಿ 70 ಲಕ್ಷ ಮತದಾರರ ಹೆಸರು ಡಿಲೀಟ್‌ ಮಾಡಿದೆ?’ ಎಂದು ಆರೋಪಿಸಿದರು.

ಅ.7ಕ್ಕೆ ಚು.ಆಯೋಗ ಕಚೇರಿ ಮುಂದೆ ಇಂಡಿಯಾ ಕೂಟ ಪ್ರತಿಭಟನೆ

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ರಾಜೀನಾಮೆಗೆ ಆಗ್ರಹಿಸಿ ಅ.7ರಂದು ಕಾಂಗ್ರೆಸ್‌ ಸೇರಿದಂತೆ ಇಂಡಿಯಾ ಮೈತ್ರಿಕೂಟದ ನಾಯಕರು ದೆಹಲಿಯಲ್ಲಿರುವ ಚುನಾವಣಾ ಕಚೇರಿ ಮುಂದೆ ಪ್ರತಿಭಟನೆ ನಡೆಸಲಿದ್ದಾರೆ.

ಭಾನುವಾರ ಕಾಂಗ್ರೆಸ್‌, ಆರ್‌ಜೆಡಿ, ಎನ್‌ಸಿಪಿ ಸೇರಿದಂತೆ ಇಂಡಿಯಾ ಕೂಟದ ವಿವಿಧ ಪಕ್ಷದ ನಾಯಕರು ಭಾಗವಹಿಸಿದ್ದ ಸಭೆಯಲ್ಲಿ ಈ ಬಗ್ಗೆ ಸರ್ವಾನುಮತದಿಂದ ನಿರ್ಧಾರ ಕೈಗೊಳ್ಳಲಾಯಿತು. ಬುಧವಾರದ ಪ್ರತಿಭಟನೆಯು ‘ದೆಹಲಿ ಮತದಾರರ ಹಕ್ಕುಗಳು, ನ್ಯಾಯಯುತ ಚುನಾವಣೆಗಳು ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆ ರಕ್ಷಣೆ’ ಎನ್ನುವ ಧ್ಯೇಯದೊಂದಿಗೆ ನಡೆಯಲಿದೆ ಎಂದು ಕಾಂಗ್ರೆಸ್‌ ತಿಳಿಸಿದೆ.

ಇದನ್ನೂ ಓದಿ: Bengaluru ಕೋಟಿ ಕೋಟಿ ಅನುದಾನವಿದ್ದರೂ ಮೈಸೂರು ರಸ್ತೆಯ ಈ ಸೇತುವೆಗೇಕೆ ಕಠೋರ ಶಾಪ?