ರಾಹುಲ್ ಗಾಂಧಿ ನವೆಂಬರ್ 1 ರಂದು ದೆಹಲಿಯಲ್ಲಿ ಹಮ್ಮಿಕೊಂಡಿರುವ ಬೃಹತ್ ರ್‍ಯಾಲಿಗೆ ಬಿಜೆಪಿಯಿಂದ ಭಾರಿ ವಿರೋಧ ವ್ಯಕ್ತವಾಗಿದೆ. ಅಲ್ಲದೇ ಬಿಜೆಪಿ ಹೂಡಿದ ಬ್ರಹ್ಮಾಸ್ತ್ರದಲ್ಲಿ ಕಾಂಗ್ರೆಸ್‌ ಪಾರಾಗುತ್ತಾ? ಎನ್ನುವುದೇ ಪ್ರಶ್ನೆ ಈಗ.

ಬೆಂಗಳೂರು: ನವೆಂಬರ್ 1 ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ ಬೃಹತ್ ರ್ಯಾಲಿ ನಡೆಸಲು ನಿರ್ಧರಿಸಿರುವ ಬೆನ್ನಲ್ಲೇ, ಈ ಪ್ರತಿಭಟನೆಗೆ ತೀವ್ರ ರಾಜಕೀಯ ತಿರುವು ಸಿಕ್ಕಿದೆ. 'ಚುನಾವಣಾ ಅಕ್ರಮ' ಹಾಗೂ 'ಮತ ಕಳ್ಳತನ' ಆರೋಪಿಸಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಇಂಡಿಯಾ ಮೈತ್ರಿಕೂಟದ ಪರವಾಗಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಈ ರ್ಯಾಲಿಗೆ ಕರೆ ನೀಡಿದ್ದರು. ಆದರೆ, ಈ ಪ್ರತಿಭಟನೆಯ ದಿನಾಂಕವನ್ನೇ ಅಸ್ತ್ರವಾಗಿಸಿಕೊಂಡಿರುವ ಬಿಜೆಪಿ, ಕಾಂಗ್ರೆಸ್ ವಿರುದ್ಧ '1984ರ ಸಿಖ್ ಹ*ಕಾಂಡ'ದ ಬ್ರಹ್ಮಾಸ್ತ್ರ ಪ್ರಯೋಗಿಸಿದ್ದು, ಕೈ ಪಡೆ ತೀವ್ರ ಇರಸುಮುರುಸಿಗೆ ಈಡಾಗಿದೆ.

ಸಿಖ್ಖರ ಗಾಯಕ್ಕೆ ಉಪ್ಪು ಸವರುವ ಯತ್ನ; ಬಿಜೆಪಿ ವಾಗ್ದಾಳಿ!

ನವೆಂಬರ್ 1 ರ ದಿನಾಂಕವನ್ನು ಕಾಂಗ್ರೆಸ್ ಉದ್ದೇಶಪೂರ್ವಕವಾಗಿ ಆಯ್ಕೆ ಮಾಡಿಕೊಂಡಿದೆ ಎಂದು ಬಿಜೆಪಿ ನಾಯಕ ಹಾಗೂ ವಕ್ತಾರ ರವಿಶಂಕರ್ ಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನವೆಂಬರ್ 1 ಸಿಖ್ ಸಮುದಾಯದ ಆಳವಾದ ಗಾಯಗಳಿಗೆ ಕಾರಣವಾದ ಭೀಕರ ದಿನ. ಅಂದು ದೆಹಲಿಯಲ್ಲಿ ಗಲಭೆ ಎಬ್ಬಿಸುವ ಮೂಲಕ ರಾಹುಲ್ ಗಾಂಧಿ ಸಿಖ್ಖರ ಗಾಯಗಳಿಗೆ ಉಪ್ಪು ಸವರಲು ಹೊರಟಿದ್ದೀರಾ? ಈ ದಿನದಂದೇ ರ್ಯಾಲಿ ನಡೆಸಲು ಏಕಿಷ್ಟು ಒತ್ತಾಯ ಮಾಡುತ್ತಿದ್ದೀರಿ? ಇದರ ಮೂಲಕ ಯಾವ ಅವ್ಯವಸ್ಥೆ ಹಾಗೂ ಅರಾಜಕತೆಯನ್ನು ಸೃಷ್ಟಿಸಲು ಹೊರಟಿದ್ದೀರಿ? ಎಂದು ಅವರು ಕಟುವಾಗಿ ಪ್ರಶ್ನಿಸಿದ್ದಾರೆ.

ದೀಪಾವಳಿ ಸೀಸನ್‌; ವ್ಯಾಪಾರಿಗಳ ವಿರೋಧ!

ಒಂದೆಡೆ ದೀಪಾವಳಿ ಹಾಗೂ ಧಂತೇರಸ್‌ ಹಬ್ಬದ ಸನ್ನಿಹಿತದಲ್ಲೇ ಈ ಬೃಹತ್ ರ್‍ಯಾಲಿ ನಡೆಸುತ್ತಿರುವುದರಿಂದ ತಮ್ಮ ವ್ಯಾಪಾರ-ವಹಿವಾಟಿಗೆ ತೀವ್ರ ತೋಂದರೆಯಾಗಲಿದೆ ಎಂದು ದೆಹಲಿ ವ್ಯಾಪಾರಿಗಳು ಪ್ರತಿಭಟನೆಯನ್ನು ಮುಂದೂಡುವಂತೆ ಮನವಿ ಮಾಡಿದ್ದಾರೆ. ಇದರ ಬೆನ್ನಲ್ಲೇ ಬಿಜೆಪಿ ಬಿಜೆಪಿ 1984ರ ಸಿಖ್ ವಿರೋಧಿ ಹಿಂಸಾಚಾರದ ಆಂಗಲ್ ತಂದಿರುವುದು ಕಾಂಗ್ರೆಸ್‌ಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಏನಿದು ನವೆಂಬರ್ 1 ರ ಭೀಕರ ಇತಿಹಾಸ?

ಅಕ್ಟೋಬರ್ 31, 1984 ರಂದು ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರ ಹ*ಯ ನಂತರ, ನವೆಂಬರ್ 1 ರಿಂದ ದೆಹಲಿ ಸೇರಿ ದೇಶಾದ್ಯಂತ ಸಿಖ್ಖರ ವಿರುದ್ಧ ಭೀಕರ ಹಿಂಸಾಚಾರ ಭುಗಿಲೆದ್ದಿತ್ತು. ನ.01 ಮತ್ತು 2 ರಂದು ನಡೆದ ಅಮಾನವೀಯ ದಾಳಿಗಳಲ್ಲಿ ಸಿಖ್ಖರ ಮನೆ, ಅಂಗಡಿಗಳನ್ನು ದೋಚಿ, ಜನರನ್ನು ಮನೆಗಳಿಂದ ಹೊರಗೆಳೆದು ಅಮಾನವೀಯವಾಗಿ ನಡೆಸಿಕೊಳ್ಳಲಾಯಿತು. ಕೇಂದ್ರ ಗೃಹ ಸಚಿವಾಲಯದ ಅಧಿಕೃತ ಅಂಕಿಅಂಶಗಳ ಪ್ರಕಾರ ಈ ಹಿಂಸಾಚಾರದಲ್ಲಿ ದೇಶಾದ್ಯಂತ 3,325 ಜನರು ದಾರುಣವಾಗಿ ಹತ್ಯೆಗೊಳಗಾಗಿದ್ದರು.

ನಾನಾವತಿ ಆಯೋಗದ ವರದಿ ಮತ್ತು ರಾಜಕೀಯ ತಾಪತ್ರಯ!

ಈ ಹಿಂಸಾಚಾರದ ತನಿಖೆಗೆ ರಚನೆಯಾಗಿದ್ದ ನ್ಯಾಯಮೂರ್ತಿ ಜಿ.ಟಿ. ನಾನಾವತಿ ಆಯೋಗವು 2005 ರಲ್ಲಿ ಸಲ್ಲಿಸಿದ ವರದಿಯಲ್ಲಿ, ಸಿಖ್ ವಿರೋಧಿ ದಂಗೆಯಲ್ಲಿ ಸ್ಥಳೀಯ ನಾಯಕರು ಹಾಗೂ ಕೆಲವು ಕಾಂಗ್ರೆಸ್ ಕಾರ್ಯಕರ್ತರ ಪಾತ್ರವಿತ್ತು ಎಂದು ಗಂಭೀರ ಆರೋಪ ಮಾಡಿತ್ತು. ಹೀಗಿರುವಾಗ, ಅದೇ ನವೆಂಬರ್ 1 ರಂದು ಕಾಂಗ್ರೆಸ್ ರ್ಯಾಲಿ ಹಮ್ಮಿಕೊಂಡಿರುವುದು ಸಿಖ್ ಸಮುದಾಯದ ಭಾವನೆಗಳನ್ನು ಬಗೆಯುವ ಯತ್ನ ಎಂದು ಬಿಜೆಪಿ ಆರೋಪಿಸಿದೆ.

ಬಿಜೆಪಿಯ ಮಹಾ ತಿರಗೇಟು!

ಚುನಾವಣಾ ಆಯೋಗದ ವಿರುದ್ಧ ದಾಳಿ ನಡೆಸಿ ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ಲಾನ್ ಮಾಡಿದ್ದ ರಾಹುಲ್ ಗಾಂಧಿಗೆ, ಬಿಜೆಪಿ ಈಗ 1984ರ ಇತಿಹಾಸದ ಕನ್ನಡಿ ಹಿಡಿದು ತಿರುಗೇಟು ನೀಡಿದೆ. ವ್ಯಾಪಾರಿಗಳ ಅಸಮಾಧಾನ ಮತ್ತು ಸಿಖ್ ಸಮುದಾಯದ ಭಾವನಾತ್ಮಕ ವಿಚಾರ ಮುನ್ನೆಲೆಗೆ ಬಂದಿರುವುದರಿಂದ ನವೆಂಬರ್ 1 ರ ರ್ಯಾಲಿಯ ಸುತ್ತ ರಾಜಕೀಯ ಕಾವು ತೀವ್ರಗೊಂಡಿದೆ.