ದಿಲ್ಲಿ ಲಾಕ್‌ಡೌನ್‌ ಇದ್ದರೂ ನಿಲ್ಲದ ರೈತರ ಹೋರಾಟ| ಹರ್ಯಾಣದಲ್ಲಿನ ಚಳವಳಿ 200ನೇ ದಿನಕ್ಕೆ| ಪ್ರತಿಭಟನಾನಿರತರಿಗೆ ಕೋವಿಡ್‌ ಭೀತಿ

ನವದೆಹಲಿ/ಬಠಿಂಡಾ(ಏ.20): ದೇಶಾದ್ಯಂತ ಕೊರೋನಾ ಎರಡನೇ ಅಲೆಯ ಬಾಧೆ ತೀವ್ರವಾಗಿದ್ದರೂ, ಕೃಷಿ ಮಸೂದೆ ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟ ಮಾತ್ರ ನಿಂತಿಲ್ಲ. ದೆಹಲಿಯಲ್ಲಿ 6 ದಿನಗಳ ಲಾಕ್‌ಡೌನ್‌ ಘೋಷಣೆ ಮಾಡಿದ್ದರೂ, ಚಳವಳಿಯನ್ನು ಮುಂದುವರಿಸುವುದಾಗಿ ರೈತ ನಾಯಕರು ಹೇಳಿಕೊಂಡಿದ್ದಾರೆ.

ಮತ್ತೊಂದೆಡೆ, ಕಾಯ್ದೆ ವಿರುದ್ಧ ಹರಾರ‍ಯಣದಲ್ಲಿ ನಡೆಯುತ್ತಿರುವ ಹೋರಾಟ 200 ದಿನಗಳನ್ನು ಪೂರೈಸಿದ್ದು, ಅಲ್ಲಿನ ರೈತರು ಕೂಡ ಪ್ರತಿಭಟನೆಯನ್ನು ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಇದರಿಂದಾಗಿ ಪ್ರತಿಭಟನಾ ಸ್ಥಳಗಳಿಗೆ ಕೋವಿಡ್‌ ಆತಂಕ ಎದುರಾಗಿದೆ.

ಕೃಷಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಹೋರಾಟವನ್ನು ಮುಂದುವರಿಸುವುದರ ಜತೆಗೆ, ಕೋವಿಡ್‌ ಸಮಸ್ಯೆಗೆ ಪ್ರತಿಭಟನಾಕಾರರು ಸಿಲುಕದಂತೆ ನೋಡಿಕೊಳ್ಳುವ ಹೆಚ್ಚುವರಿ ಹೊಣೆಗಾರಿಕೆಯೂ ರೈತ ನಾಯಕರ ಮೇಲೆ ಬಿದ್ದಿದೆ. ಮತ್ತೊಂದೆಡೆ ಏ.21ರಂದು ಹರಾರ‍ಯಣದ ಬಹಾದೂರ್‌ಗಢ ಟೋಲ್‌ ಪ್ಲಾಜಾ ಮುಚ್ಚಲು ರೈತರು ಗಡುವು ನೀಡಿದ್ದಾರೆ. ಅಂದು ಹೆಚ್ಚಿನ ಸಂಖ್ಯೆಯಲ್ಲಿ ಸೇರುವಂತೆಯೂ ರೈತರಿಗೆ ಕರೆ ಕೊಟ್ಟಿದ್ದಾರೆ.

ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡೇ ಹೋರಾಟ ನಡೆಸುತ್ತಿದ್ದೇವೆ. ಕೋವಿಡ್‌ ಭೀತಿ ನಮಗೆ ಮಾತ್ರವೇ? ಪ್ರಧಾನ ನರೇಂದ್ರ ಮೋದಿ ಅವರು ಭಾನುವಾರ ಲಕ್ಷಾಂತರ ಜನರನ್ನುದ್ದೇಶಿಸಿ ರಾರ‍ಯಲಿ ಮಾಡಿಲ್ಲವೇ ಎಂದು ರೈತ ನಾಯಕರು ಪ್ರಶ್ನಿಸಿದ್ದಾರೆ.