Marriage Age: ಹರ್ಯಾಣ, ಪಂಜಾಬ್, ರಾಜಸ್ಥಾನದಲ್ಲಿ ಮದುವೆ ತರಾತುರಿ!
* ಕೇಂದ್ರದಿಂದ ಹೆಣ್ಣು ಮಕ್ಕಳ ವಿವಾಹ ವಯಸ್ಸು 21ಕ್ಕೆ ಏರಿಕೆಗೆ ಸಿದ್ಧತೆ
* ಹೀಗಾಗಿ 18 ತುಂಬಿದ ಯುವತಿಯರ ಮದುವೆಗೆ ಪೋಷಕರ ದೌಡು
ನವದೆಹಲಿ(ಡಿ.23): ಕೇಂದ್ರ ಸರ್ಕಾರ ಹೆಣ್ಣು ಮಕ್ಕಳ ವಿವಾಹದ ವಯಸ್ಸನ್ನು 18-21 ವರ್ಷಕ್ಕೆ ಹೆಚ್ಚಿಸುವ ಕಾಯ್ದೆಯನ್ನು ಜಾರಿ ಮಾಡಲು ಯತ್ನಿಸುತ್ತಿರುವ ಬೆನ್ನಲ್ಲೇ ಹರಾರಯಣ, ಪಂಜಾಬ್, ರಾಜಸ್ಥಾನ ಮತ್ತಿತರ ಕಡೆಗಳಲ್ಲಿ ಪೋಷಕರು ಆತುರಾತುರವಾಗಿ 18-20 ವರ್ಷದ ಹೆಣ್ಣುಮಕ್ಕಳನ್ನು ಮದುವೆ ಮಾಡುತ್ತಿದ್ದಾರೆ. ಈ ಮೂಲಕ ಕಾಯ್ದೆ ಜಾರಿಯಾಗುವ ಮುನ್ನವೇ ವಿವಾಹ ಮಾಡಿ ಮುಗಿಸಲು ಮುಗಿಬಿದ್ದಿದ್ದಾರೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಈ ಸಂಬಂಧ ಮಾಧ್ಯಮಗಳು ಈ ರಾಜ್ಯಗಳಲ್ಲಿ ಸುತ್ತಾಡಿದಾಗ, ಕೆಲ ಪೋಷಕರು ಹಾಗೂ ಇತರರು 18 ತುಂಬಿದ ಹೆಣ್ಣುಮಕ್ಕಳ ಮದುವೆ ಮಾಡಿ ಮುಗಿಸಿದ್ದಾರೆ. ಇನ್ನು ಕೆಲವರು ಮಾಡಲು ತುಂಬಾ ಯತ್ನ ಮಾಡುತ್ತಿದ್ದಾರೆ ಎಂದು ಕಂಡುಬಂದಿದೆ.
ಹರಾರಯಣದಲ್ಲಿ ಅಖ್ತರ್ ಹುಸೇನ್ ಎಂಬವರು, 18 ತುಂಬಿದ ತಮ್ಮ ಮಗಳ ಮದುವೆಯನ್ನು ನಿಗದಿಯಾಗಿದ್ದ ದಿನಾಂಕಕ್ಕೂ ಒಂದು ದಿನ ಮೊದಲೇ ಮಾಡಿ ಮುಗಿಸಿದ್ದಾರೆ. ಅವರು ಎಷ್ಟುಗಡಿಬಿಡಿ ಮಾಡಿದ್ದಾರೆ ಎಂದರೆ, ಫೋಟೋಗ್ರಾಫರ್ ಇಲ್ಲದ ಕಾರಣ ಅವರಲ್ಲಿ ಮದುವೆಯ ಎರಡೇ ಎರಡು ಫೋಟೋಗಳಿವೆ. ಹೀಗಾಗಿ, ಮದುವೆಯಲ್ಲಿ ಭಾಗಿಯಾದ ಕೆಲವೇ ಕೆಲವು ಅತಿಥಿಗಳಲ್ಲಿ ‘ನನ್ನ ಮದುವೆಯ ಫೋಟೋಗಳಿವೆಯೇ?’ ಎಂದು ಕೇಳಲು ಆರಂಭಿದ್ದಾರೆ.
‘ನನಗೆ ಇನ್ನೂ ನಾಲ್ವರು ಹೆಣ್ಣುಮಕ್ಕಳಿದ್ದಾರೆ. ಇನ್ನೂ ಎಷ್ಟುದಿನ ಕಾಯಲಿ? ಈ ಮುಂಚೆ ಆರು ತಿಂಗಳ ಕಾಲ ಮಗಳ ಮದುವೆ ಮುಂದೂಡಲಾಗಿತ್ತು. ಆದರೆ ಕಾಯ್ದೆ ವಿಷಯ ತಿಳಿಯುತ್ತಿದ್ದಂತೆಯೇ ರಾತ್ರೋ ರಾತ್ರಿ ಮದುವೆ ಮಾಡಿದೆವು. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ನನ್ನ ವಿರೋಧ ಇಲ್ಲ, ಮದುವೆ ನಂತರವೂ ನನ್ನ ಮಕ್ಕಳು ಶಿಕ್ಷಣ ಪಡೆಯಬಹುದು’ ಎಂದು ಹುಸೇನ್ ಹೇಳಿದರು.
ಅಷ್ಟೇ ಅಲ್ಲದೆ ಹಲವರು ಸ್ಥಳೀಯ ಧಾರ್ಮಿಕ ಮುಖಂಡರನ್ನು ಭೇಟಿಯಾಗಿ ಕಾಯ್ದೆ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ‘ಎಷ್ಟುದಿನ ಎಂದು ಮಗಳನ್ನು ಮನೆಯಲ್ಲಿ ಇಟ್ಟುಕೊಳ್ಳಲಿ’ ಎಂದು ಹೆಣ್ಣುಮಕ್ಕಳ ಅಪ್ಪಂದಿರು ಅಳಲು ತೋಡಿಕೊಳ್ಳುತ್ತಿದ್ದಾರೆ. ಇನ್ನೊಂದೆಡೆ ‘ಮದುವೆ ಎಂಬುದು ವೈಯಕ್ತಿಕ ವಿಚಾರ. ನಮ್ಮ ಮೂಲಭೂತ ಹಕ್ಕು. ಸರ್ಕಾರವಾಗಲೀ ಅಥವಾ ಯಾವುದೇ ಕಾನೂನಾಗಲೀ ಮಧ್ಯ ಪ್ರವೇಶಿಸುವುದು ಸರಿಯಲ್ಲ. ಸರ್ಕಾರ ಈ ನಿರ್ಧಾರದ ಬಗ್ಗೆ ಮರುಚಿಂತನೆ ನಡೆಸಲು’ ಎಂದು ಹೇಳುತ್ತಿದ್ದಾರೆ.
ಆದರೆ ಇದೇ ಪ್ರದೇಶದ ಮಹಿಳೆ ಶಬಾನಾ ಎಂಬವರು ಕೇಂದ್ರದ ಹೊಸ ಮಸೂದೆಯ ಪರ ಮಾತನಾಡಿದ್ದಾರೆ. ‘ಸದ್ಯ 18 ವರ್ಷಕ್ಕೇ ಹಲವಾರು ಹೆಣ್ಣು ಮಕ್ಕಳು ಗರ್ಭ ಧರಿಸುತ್ತಿದ್ದಾರೆ. ಅದು ಕೇವಲ ಪತಿಯ ನಿರ್ಧಾರ ಮಾತ್ರವಾಗಿರುತ್ತದೆ. ಹೊಸ ಕಾನೂನಿನಿಂದ ಮಹಿಳಾ ಸಬಲೀಕರಣ ಸಾಧ್ಯವಾಗುತ್ತದೆ’ ಎಂದರು.
ಕೇಂದ್ರ ಸರ್ಕಾರ ಬಾಲ್ಯ ವಿವಾಹ (ತಿದ್ದುಪಡಿ) ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದ್ದು, ಸದ್ಯ ಸಂಸದೀಯ ಸಮಿತಿಯ ಪರಾಮರ್ಶೆಗೆ ನೀಡಿದೆ.