ಕೋಟಾದಲ್ಲಿ ಮಗನೋರ್ವ ತನ್ನ ವಯಸ್ಸಾದ ತಾಯಿಯ ಮೇಲೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಡೆದಿದೆ. ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದ್ದು, ಆರೋಪಿ ಮಗನನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕೋಟಾ: ಮಗನೋರ್ವ ತಾಯಿ ವಾಸವಿದ್ದ ಮನೆಗೆ ನುಗ್ಗಿ ವಯಸ್ಸಾದ ತಾಯಿಯನ್ನು ಹಿಗ್ಗಾಮುಗ್ಗಾ ಥಳಿಸಿದ ವೀಡಿಯೋ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈಗ ಮಗನನ್ನು ಪೊಲೀಸರು ಬಂಧಿಸಿದ್ದಾರೆ ಯುವಕನೋರ್ವ ಆಕೆ ತನ್ನ ಹೆತ್ತು ಸಾಕಿ ಸಲಹಿದ ತಾಯಿ ಎಂಬುದನ್ನು ಕೂಡ ಯೋಚಿಸದೇ ತಾಯಿಯ ಮೇಲೆ ಹಿಗ್ಗಾಮುಗ್ಗಾ ಚಪ್ಪಲಿಯಿಂದ ಥಳಿಸಿದ್ದಾನೆ. ರಾಜಸ್ಥಾನದ ಕೋಟಾದಲ್ಲಿ ಈ ಅಮಾನವೀಯ ಘಟನೆ ನಡೆದಿದ್ದು, ಹೀಗೆ ತಾಯಿಯ ಮೇಲೆ ಅಮಾನವೀಯವಾಗಿ ಹಲ್ಲೆ ಮಾಡಿದ ವ್ಯಕ್ತಿಯನ್ನು ದೀಪು ಮೆಹ್ರಾ ಎಂದು ಗುರುತಿಸಲಾಗಿದೆ. ದೀಪುವಿನ ಅತ್ತಿಗೆ ಈ ವೀಡಿಯೋವನ್ನು ಮಾಡಿದ್ದಾರೆ.
ಪೊಲೀಸರ ಪ್ರಕಾರ ದೀಪು ಮೆಹ್ರಾ ತಮ್ಮ 65 ವರ್ಷದ ತಾಯಿ ಸಂತೋಷ್ ಬಾಯಿ ಅವರನ್ನು ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಸಂತೋಷ್ ಬಾಯಿ ಅವರಿಗೆ ದೀಪು ಮೆಹ್ರಾ ಸೇರಿ ಮೂವರು ಮಕ್ಕಳು, ಇಬ್ಬರು ಗಂಡು ಹಾಗೂ ಒಬ್ಬಳು ಹೆಣ್ಣು ಮಗು. ಈಗ ಇವರಿಗೆ ಹಲ್ಲೆ ಮಾಡಿದ ಮಗ ಹಿರಿಯ ಮಗ. ಈ ಬಗ್ಗೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಘಟನೆ ನಡೆಯುವ ವೇಳೆ ತಾನು ಮಗಳ ಮನೆಯಲ್ಲಿ ಇದ್ದೆ ಎಂದು ತಾಯಿ ಹೇಳಿದ್ದಾರೆ.
ಮಗಳ ಮನೆಯಲ್ಲಿದ್ದಾಗ ಬಂದು ಚಪ್ಪಲಿಯಿಂದ ಹಲ್ಲೆ
ದೂರಿನ ಪ್ರಕಾರ ಸಂತೋಷ್ ಬಾಯಿ ಅವರು ಮಗಳ ಮನೆಯಲ್ಲಿದ್ದಾಗ ಅಲ್ಲಿಗೆ ಹೋದ ದೀಪು ಮೆಹ್ರಾ ಅಲ್ಲಿ ಬಾಗಿಲನನ್ನು ದಬದಬನೇ ಒದೆಯಲು ಶುರು ಮಾಡಿದ್ದಾನೆ. ಈ ವೇಳೆ ಬಾಗಿಲು ತೆಗೆದ ಕೂಡಲೇ ಆತ ಒಳಗೆ ನುಗ್ಗಿ ಮನೆಯಲ್ಲಿ ಹಾರಾಟ ಮಾಡಿದ್ದು, ತಾಯಿಯ ಮೇಲೆ ಹಲ್ಲೆ ಮಾಡಲು ಶುರು ಮಾಡಿದ್ದಾನೆ. ಮನೆ ಒಳಗೆ ಬಂದ ಕೂಡಲೇ ಆತ ತಾಯಿಯ ಮೇಲೆ ಹಲ್ಲೆ ಮಾಡಲು ಶುರು ಮಾಡಿದ್ದಾನೆ. ಆಕೆಯ ಕೂದಲನ್ನು ಎಳೆದಾಡಿ, ನೆಲಕ್ಕೆ ಬೀಳಿಸಿ ಕಾಲಿನಲ್ಲಿದ್ದ ಚಪ್ಪಲಿಯನ್ನು ತೆಗದು ಹೊಡೆದಿದ್ದಾನೆ.
ಈ ವೇಳೆ ಅಮ್ಮನನ್ನು ರಕ್ಷಿಸಲು ಬಂದ ಮಗಳನ್ನು ಕೂಡ ಆರೋಪಿ ದೀಪು ಮೆಹ್ರಾ ದೂರ ತಳ್ಳಿದ್ದಾನೆ. ಇತ್ತ ಅಜ್ಜಿಗೆ ಹೊಡೆಯುವುದನ್ನು ನೋಡಿ ಅಲ್ಲಿದ್ದ ಪುಟಾಣಿ ಮೊಮ್ಮಕ್ಕಳು ಅಳುವುದಕ್ಕೆ ಶುರು ಮಾಡಿದ್ದಾರೆ. ಘಟನೆ ನಡೆದ ದಿನವೇ ಆರೋಪಿ ಮಗನನ್ನು ಬಂಧಿಸಲಾಗಿದೆ ಎಂದು ಸರ್ಕಲ್ ಇನ್ಸ್‌ಪೆಕ್ಟರ್ ಭೂಪೇಂದ್ರ ಸಿಂಗ್ ಹೇಳಿದ್ದಾರೆ. ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ನಂತರ ಆತ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾನೆ.
ಬಿಡುಗಡೆ ಬಳಿಕ ಇದು ಕುಟುಂಬದ ವಿಚಾರ, ನಾನು ತುಂಬಾ ಅಸಮಾಧಾನಗೊಂಡಿದ್ದೇನೆ, ನನ್ನ ಪೋಷಕರು ಅರ್ಥ ಮಾಡಿಕೊಳ್ಳುತ್ತಿಲ್ಲ, ನಾನು ತುಂಬಾ ಸಿಟ್ಟಾಗಿದ್ದೆ ಎಂದು ಹೇಳಿದ್ದಾನೆ. ಪೊಲೀಸರ ಆರಂಭೀಕ ತನಿಖೆಯಲ್ಲಿ ಈ ಗಲಾಟೆಗೆ ಆಸ್ತಿ ವಿವಾದವೇ ಕಾರಣ ಎಂದು ತಿಳಿದು ಬಂದಿದೆ.
ಮಗನ ಕಿರುಕುಳ ತಡೆಯಲಾಗದೇ ಆಸ್ತಿಯನ್ನು ಮಗಳಿಗೆ ಬರೆದ ಪೋಷಕರು
ಸಂತೋಷ್ ಬಾಯಿ ಅವರ ಪತಿ ರಾಮನಾರಾಯಣ ಮೆಹ್ರಾ ಅವರ ಪೂರ್ವಜರ ಮನೆ ಕೋಟಾದ ಅನಂತಪುರ ಪ್ರದೇಶದ ವಿನೋಬಾ ಭಾವೆ ನಗರದಲ್ಲಿದೆ. ಅವರು ಈ ಮನೆಯಲ್ಲಿ ತಮ್ಮ ಪತ್ನಿ, ಇಬ್ಬರು ಗಂಡು ಮಕ್ಕಳು ಮತ್ತು ಅವರ ಕುಟುಂಬಗಳೊಂದಿಗೆ ವಾಸಿಸುತ್ತಿದ್ದರು. ಆದರೆ ದೀಪು ತನ್ನ ಪೋಷಕರೊಂದಿಗೆ ಪ್ರತಿದಿನ ಜಗಳವಾಡುವುದನ್ನು ಅಭ್ಯಾಸ ಮಾಡಿಕೊಂಡಿದ್ದರು. ಹೀಗಾಗಿ ಹಿರಿಯ ಮಗನಿಂದ ಬೇಸತ್ತ ರಾಮನಾರಾಯಣ್ ತಮ್ಮ ಮನೆಯನ್ನು ತಮ್ಮ ಮಗಳಿಗೆ ವರ್ಗಾಯಿಸಿದರು. ಆದರೆ ಆ ಮನೆಯಲ್ಲಿ ಹಿರಿಯ ಮಗ ಇನ್ನೂ ವಾಸ ಮಾಡುತ್ತಿದ್ದ.
ಮಗಳು ಖರೀದಿಸಿದ್ದ ಫ್ಲಾಟ್‌ಗೆ ಶಿಪ್ಟ್ ಆಗಿದ್ದ ತಂದೆತಾಯಿ
ಇತ್ತ ಮಗಳು ಅನಂತಪುರದಲ್ಲಿ ಫ್ಲಾಟ್ ಕೂಡ ಖರೀದಿಸಿದ್ದಳು. ನಿರಂತರ ಜಗಳದಿಂದ ಬೇಸತ್ತ ರಾಮನಾರಾಯಣ್ ಮತ್ತು ಅವರ ಪತ್ನಿ ಈಗ ಘಟನೆ ನಡೆದ ತನ್ನ ಮಗಳ ಫ್ಲಾಟ್‌ಗೆ ಸ್ಥಳಾಂತರಗೊಂಡಿದ್ದರು. ಹೀಗಾಗಿ ದೀಪು ಇಲ್ಲಿ ತನ್ನ ಸೋದರಿಯ ಮನೆಗೆ ನುಗ್ಗಿ ತಾಯಿಯ ಮೇಲೆ ಹಲ್ಲೆ ಮಾಡಿದ್ದಾನೆ. ಒಟ್ಟಿನಲ್ಲಿ ಆಸ್ತಿ ಕಲಹವೊಂದು ವಿಕೋಪಕ್ಕ ತಿರುಗಿದ್ದು, ಕುಟುಂಬದ ಮಾನವನ್ನು ಬೀದಿಯಲ್ಲಿ ಕಳೆದಿದೆ.
