ನವದೆಹಲಿ(ಮಾ.14): ದೆಹಲಿ ರೈತ ಪ್ರತಿಭಟನೆಗೆ ಸಂಬಂಧಿಸಿದಂತೆ ಟೂಲ್‌ ಕಿಟ್‌ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಬೆಂಗಳೂರು ಮೂಲದ ಕಾರ್ಯಕರ್ತೆ ದಿಶಾ ರವಿ ಸಾಮಾಜಿಕ ಜಾಲತಾಣದಲ್ಲಿ ಶನಿವಾರ ಹೇಳಿಕೆ ಬಿಡುಗಡೆ ಮಾಡಿದ್ದು, ತನ್ನ ಸ್ವಾಯತ್ತೆಗೆ ಧಕ್ಕೆ ಉಂಟಾಗಿದೆ ಎಂದು ಆರೋಪಿಸಿದ್ದಾರೆ.

‘ಸುದ್ದಿಗಾಗಿ ಫೋಟೋಗಳನ್ನು ತೆಗೆಯಲಾಯಿತು. ಸುದ್ದಿವಾಹಿನಿಗಳು ಟಿಆರ್‌ಪಿಗಾಗಿ ತನ್ನನ್ನು ತಪ್ಪಿತಸ್ಥೆ ಎಂದು ಘೋಷಿಸಿದವು. ಆದರೆ, ಕೋರ್ಟ್‌ನಲ್ಲಿ ತನಗೆ ನ್ಯಾಯ ದೊರೆತಿದೆ. ನಾನು ಪರಿಸರ ರಕ್ಷಣೆಗಾಗಿ ಹೋರಾಟವನ್ನು ಮುಂದುವರಿಸಲಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.

ಇದೇ ವೇಳೆ, ತಿಹಾರ್‌ ಜೈಲಿನಲ್ಲಿನಲ್ಲಿ ಕಳೆದ ಅನುಭವನ್ನು ಹಂಚಿಕೊಂಡಿರುವ ಅವರು, ‘ಜೈಲಿನಲ್ಲಿ ಕಳೆದ ಪ್ರತಿಯೊಂದು ಕ್ಷಣ, ಗಂಟೆಯೂ ಅರಿವಿನಲ್ಲಿ ಇದೆ. ಜೈಲಿಗೆ ಹೋಗುವಂತಹ ಅಪರಾಧವಾದರೂ ಏನೂ ಎಂದು ಅಚ್ಚರಿಗೆ ಒಳಗಾಗಿದ್ದೆ. ಇವೆಲ್ಲಾ ಈಗ ಮುಗಿದ ಅಧ್ಯಾಯ. ಜೈಲಿನಲ್ಲಿ ನಡೆದ ಘಟನೆಗಳು ನಡೆದೇ ಇಲ್ಲ ಎಂದು ನನಗೆ ನಾನೇ ಅಂದುಕೊಳ್ಳುತ್ತೇನೆ. ಮುಂದಿನ ದಿನಗಳಲ್ಲಿ ಪರಿಸರದ ಒಳಿತಿಗಾಗಿ ನನ್ನ ಹೋರಾಟ ಮುಂದುವರಿಯಲಿದೆ’ ಎಂದು ಹೇಳಿದ್ದಾರೆ.