ಉಡುಪಿ[ಡಿ.29]: ಶ್ರೀ ಶ್ರೀ ವಿಶ್ವೇಶ ತೀರ್ಥರು, ನಾರಾಯಣಚಾರ್ಯ ಹಾಗೂ ಕಮಲಮ್ಮ ದಂಪತಿಯ ಎರಡನೇ ಮಗುವಾಗಿ ಜನಿಸಿದ ಪೇಜಾವರ ಶ್ರೀಯವರ ಮೂಲ ಹೆಸರು ವೆಂಕಟರಮಣ. ವಿಶ್ವೇಶ ತೀರ್ಥ ಅನ್ನೋ ಹೆಸರು ಆಶ್ರಮನಾಮ.. ಪೇಜಾವರ ಶ್ರೀಯವ್ರ ಹುಟ್ಟೂರು ಸುಬ್ರಹ್ಮಣ್ಯದ ರಾಮಕುಂಜ ಹಳ್ಳಿ.. ಪ್ರಜಾಪತಿ ಸಂವತ್ಸರದ ವೈಶಾಖ ಶುದ್ಧ ದಶಮಿ ಸೋಮವಾರದಂದು ಜನಿಸಿದ ಪೇಜಾವರ ಶ್ರೀ, ರಾಮಕುಂಜ ಹಳ್ಳಿಯ ಸಂಸ್ಕೃತ ಎಲಿಮೆಂಟರಿ ಶಾಲೆಯಲ್ಲೇ ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದ್ರು. ಬಳಿಕ 7ನೇ ವಯಸ್ಸಿನಲ್ಲಿ ಉಪನಯನ ಮಾಡಿಸಲಾಯ್ತು. 

ಉಪನಯನಕ್ಕೂ ಮೊದಲು, ಪೇಜಾವರರಿಗೆ 6 ವರ್ಷವಿದ್ದಾಗ ತಂದೆ, ತಾಯಿ ಅವರನ್ನ ಉಡುಪಿಗೆ ಕರೆ ತಂದರು. ಆಗ ಪೇಜಾವರ ಮಠದ ಪರ್ಯಾಯ ಕಾರ್ಯಕ್ರಮ ನಡೆದಿತ್ತು. ವೆಂಕಟರಮಣ ಮಠದ ಸ್ವಾಮೀಜಿ ಕೃಷ್ಣ ಪೂಜೆ ಮಾಡುವುದನ್ನು ಆಸಕ್ತಿಯಿಂದ ಗಮನಿಸಿದ್ದರು. ಅಲ್ಲಿ ತುಂಬಿದ ಭಕ್ತಿ ಭಾವ, ನಡೆಯ ಚುರುಕುತನ ಎಲ್ಲ ಗಮನಿಸಿದ ಸ್ವಾಮಿಗಳು, ನೀನು ನನ್ನಂತೆ ಸ್ವಾಮಿಯಾಗುತ್ತೀಯಾ ಅಂತ ಪೇಜಾವರರಿಗೆ ಕೇಳಿದ್ರಂತೆ. ಅದಕ್ಕೇ ಪೇಜಾವರ ಶ್ರೀ ಹಿಂದೆ ಮುಂದೆ ನೋಡದೆ ಒಪ್ಪಿಕೊಂಡಿದ್ದರಂತೆ.

ಪೇಜಾವರ ಶ್ರೀಗಳು ದೈವಾಧೀನ : ಸಿದ್ದರಾಮಯ್ಯ ಸೇರಿ ಗಣ್ಯರ ಸಂತಾಪ

ಬಹುಧಾನ್ಯ ಸಂವತ್ಸರದ ಮಾರ್ಗಶಿರ ಶುದ್ಧ ಪಂಚಮಿಯಂದು ವೆಂಕಟರಮಣನಿಗೆ ಹಂಪಿಯ ಯಂತ್ರೋದ್ಧಾರ ಮುಖ್ಯಪ್ರಾಣನ ಸನ್ನಿಧಿಯಲ್ಲಿ ದೀಕ್ಷೆ ನಡೆಯಿತು. ಇನ್ನೂ ಏಳರ ಬಾಲ್ಯದ ಹಸುಳೆ, ಅಧೋಕ್ಷಜ ತೀರ್ಥರ ಸಂಸ್ಥಾನದ ಉತ್ತರಾಧಿಕಾರಿಯಾಗಿ, ಪೇಜಾವರ ಮಠದ ಪರಂಪರೆಯ 32ನೇಯ ಯತಿಯಾಗಿ, ಆಚಾರ್ಯ ಮಧ್ವರ ವೇದಾಂತ ಪೀಠವನ್ನೇರಿದ ವೆಂಕಟರಮಣ ‘ವಿಶ್ವೇಶ ತೀರ್ಥ’ರಾದರು.

ಪೇಜಾವರರ ಪಾಂಡಿತ್ಯ ಮೆಚ್ಚಿದ ಮೈಸೂರು ಅರಸ 

ವಿಶ್ವೇಶ ತೀರ್ಥರಿಗೆ 20 ರ ಹಸಿ ಹಸೀ ಹರೆಯ. 1951 ರಲ್ಲಿ ನಂಜನಗೂಡಿನಲ್ಲಿ ಆಗಮತ್ರಯ ವಿದ್ವಾಂಸರ ಸಮ್ಮೇಳನ ನಡೆಯಿತು. ಎಲ್ಲ ಪಂಡಿತರ ಒಮ್ಮತದಿಂದ ಆ ಸಮ್ಮೇಳನದ ಅಧ್ಯಕ್ಷತೆಯ ಹೊಣೆಯನ್ನು ಹರೆಯದ ವಿಶ್ವೇಶ ತೀರ್ಥರಿಗೆ ಒಪ್ಪಿಸಲಾಯಿತು. ಆ ಸಭೆಯಲ್ಲಿ ಆಗಿನ ಮೈಸೂರು ಅರಸರಾಗಿದ್ದ ದಿ. ಜಯಚಾಮರಾಜೇಂದ್ರ ಒಡೆಯರು ಉಪಸ್ಥಿತರಿದ್ರು. ಆ ವೇಳೇ ತರುಣ ಯತಿಯ ತೇಜಸ್ಸಿಗೆ, ಪಾಂಡಿತ್ಯಕ್ಕೆ ಮೆಚ್ಚಿದ ಒಡೆಯರು, ಶ್ರೀಪಾದರನ್ನು ಅರಮನೆಗೆ ಕರೆಸಿ ಪೂಜೆ ಮಾಡಿಸಿದ್ರಂತೆ

ವಿಜಯಪುರಕ್ಕೂ ಪೇಜಾವರ ಶ್ರೀಗಳಿಗೂ ಅವಿನಾಭಾವ ಸಂಬಂಧ

ತರುಣ ಯತಿಯ ಉತ್ತುಂಗ ಸಾಧನೆ 

- 1952 ಜನವರಿ 18 ರಂದು ಮೊದಲ ಪರ್ಯಾಯ ಪೀಠಾರೋಹಣ

- 1956 ಜುಲೈ 28 ರಂದು ಬೆಂಗಳೂರಿನಲ್ಲಿ ಪೂರ್ಣಪ್ರಜ್ಞ ವಿದ್ಯಾಪೀಠದ ಸ್ಥಾಪನೆ

- 1965ರಲ್ಲಿ ವಾಕ್ಯಾರ್ಥ ವಿಮರ್ಶೆಗೆ ಕೊಚ್ಚಿ ಮಹಾರಾಜರಿಂದ ಶ್ರೀಗೆ ಸನ್ಮಾನ

- 1966 ರಲ್ಲಿ ಕಾಶಿಯಲ್ಲಿ ನಡೆದಿದ್ದ ವಿದ್ವತ್ ಸಭೆಗೆ 23ರ ತರುಣ ಯತಿ ಭಾಗಿ

- 1969 ಆ. 18ರಂದು ಕೃಷ್ಣನ ಸನ್ನಿದಿಯಲ್ಲಿ ಉಚಿತ ಚಿಕಿತ್ಸಾಲಯದ ಉದ್ಘಾಟನೆ

- 1983 ಜೂನ್ 23 ರಂದು ಉಡುಪಿಯಲ್ಲಿ ಅಧೋಕ್ಷಜ ಮಂದಿರ ಉದ್ಘಾಟನೆ

- 1983 ಜೂನ್ 26 ರಂದು ತಿರುಪತಿ ಬೆಟ್ಟದಲ್ಲಿ ಶ್ರೀ ಮಧ್ವಚಾರ್ಯರ ಮಠ ಉದ್ಘಾಟನೆ

- 1985 ಜುಲೈ 12 ರಂದು ಉಡುಪಿಯಲ್ಲಿ ಕೃಷ್ಣಧಾಮ ಛತ್ರದ ಉದ್ಘಾಟನೆ

- 1995 ಜುಲೈ 21 ಭೂಕಂಪ ಪೀಡಿತ ಗೋವಿಂದ ಪುರದಲ್ಲಿ 50 ಮನೆ ವಿತರಣೆ

'ಮಂದಿರಕ್ಕೆ ಮುಸ್ಲಿಮರು, ಮಸೀದಿಗೆ ಹಿಂದೂಗಳು ಸಹಾಯ ಮಾಡಿ'

ಸಮಾಜಕ್ಕೆ ಪೇಜಾವರ ಶ್ರೀಯವರ ಕೊಡುಗೆ

- ಉಡುಪಿಯಲ್ಲಿ ಬಾಲನಿಕೇತನ ಸ್ಥಾಪನೆ

- ಯಾತ್ರಾರ್ಥಿಗಳ ಅನುಕೂಲಕ್ಕೆ ಕೃಷ್ಣಧಾಮ ನಿರ್ಮಾಣ

- ಮಡಿಕೇರಿಯಲ್ಲಿ ಅಶ್ವಿನಿ ಆಸ್ಪತ್ರೆ ಸ್ಥಾಪನೆ

- ಬೆಂಗಳೂರಿನಲ್ಲಿ ಶ್ರೀಕೃಷ್ಣ ಸೇವಾಶ್ರಮ ಆಸ್ಪತ್ರೆ ಆರಂಭ

- ಧಾರವಾಡದ ಜನತಾ ಶಿಕ್ಷಣ ಸಮಿತಿ ವಿದ್ಯಾಗಿರಿಯಲ್ಲಿ ಕೊಡುಗೆ

- ವಿಕಲಾಂಗ ಮಕ್ಕಳಿಗಾಗಿ ಬೆಂಗಳೂರಿನಲ್ಲಿ ಅರುಣ ಚೇತನ ಸಂಸ್ಥೆ ಸ್ಥಾಪನೆ \

- ಕಲಬುರಗಿಯಲ್ಲಿ ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ ಸ್ಥಾಪನೆ

- ಹಾಸನದಲ್ಲಿ ಶ್ರೀ ರಾಘವೇಂದ್ರ ಮಠ ನಿರ್ಮಾಣ (ಹೀಗೆ ಪೇಜಾವರರ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.)

ಶ್ರೀರಾಮ ಸೇವೆಗಾಗಿ ಬಂಧನವಾಗಿದ್ದ ಪೇಜಾವರ ಶ್ರೀ

1990 ಅಕ್ಟೋಬರ್ 27 ರಂದು ಶ್ರೀರಾಮ ಜನ್ಮಸ್ಥಾನದ ವಿಮುಕ್ತಿಗಾಗಿ ಆಂದೋಲನ ಶುರುವಾಗಿತ್ತು. ಆಗ ಕರಸೇವೆಯಲ್ಲಿ ಭಾಗಿಯಾಗಲು ಪೇಜಾವರ ಶ್ರೀ ತೆರಳುತ್ತಿದ್ದ ವೇಳೆ, ಉತ್ತರ ಪ್ರದೇಶದ ಸರಹದ್ದಿನಲ್ಲಿ ಅವರನ್ನ ಬಂಧಿಸಿ, ಬಿಡುಗಡೆ ಮಾಡಲಾಗಿತ್ತು.

'ಮಂದಿರಕ್ಕೆ ಮುಸ್ಲಿಮರು, ಮಸೀದಿಗೆ ಹಿಂದೂಗಳು ಸಹಾಯ ಮಾಡಿ'

ಸರ್ವಧರ್ಮ ಸಮಭಾವ ಸಾರಿದ ಪೇಜಾವರ ಶ್ರೀ

ಪೇಜಾವರ ಶ್ರೀಗಳು ಸಮಾನತೆಗೆ ಹೆಚ್ಚಿನ ಆದ್ಯತೆ ನೀಡಿದ್ರು. ಮಠದಲ್ಲಿ ಸ್ವಾಮಿಗಳಿಗೆ ಪ್ರತ್ಯೇಕ ಅಡುಗೆ ಮಾಡುವ ಪದ್ದತಿ ರದ್ದು ಮಾಡಿದಲ್ಲದೇ, ರಂಜಾನ್ ವೇಳೆ ಕೃಷ್ಣ ಮಠದ ಹೊರಭಾಗದಲ್ಲಿ ಮುಸ್ಲಿಂ ಬಾಂಧವರಿಗಾಗಿ ಇಫ್ತಿಯಾರ್ ಕೂಟ ಏರ್ಪಡಿಸಿ, ಸರ್ವಧರ್ಮ ಸಮಭಾವ ಸಾರಿದ್ರು..

ಒಟ್ಟಾರೆ ದೇಹ ವಯಸ್ಸಿಗೆ ಮನಕ್ಕಲ್ಲ ಎಂಬಂತೆ ತಮ್ಮ 88 ನೇ ವಯಸ್ಸಿನಲ್ಲೂ ಪೇಜಾವ ಶ್ರೀ ಲವಲವಿಕೆಯಿಂದ ಇರೋ ಮೂಲಕ ಎಲ್ಲರಿಗೂ ಮಾದರಿಯಾಗಿದ್ದರು.

ಮಠದ ಅಂಗಳದಲ್ಲಿ ಇಫ್ತಾರ್: ಸೌಹಾರ್ದ ಕೂಟಕ್ಕೆ ವಿರೋಧ ಯಾಕೆ?

ಡಿಸೆಂಬರ್ 29ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ