ಚೀನಾದಿಂದ ಆರ್ಥಿಕ ನೆರವು ಪಡೆದು ಭಾರತದಲ್ಲಿ ದೇಶ ವಿರೋಧಿ ಸುದ್ದಿಗಳನ್ನು ಪ್ರಕಟಿಸಿ ಭಾರಿ ಕೋಲಾಹಲ ಸೃಷ್ಟಿಸಿರುವ ನ್ಯೂಸ್‌ಕ್ಲಿಕ್ ಕಚೇರಿ ಮೇಲೆ ದೆಹಲಿ ಪೊಲೀಸರು ದಾಳಿ ನಡೆಸಿ ಕೆಲವರನ್ನು ಬಂಧಿಸಿದ್ದಾರೆ. ಇದೀಗ ನ್ಯೂಸ್‌ಕ್ಲಿಕ್ ಸಂಸ್ಥಾಪಕ ಪ್ರಬೀರ್ ಹಾಗೂ ಹೆಚ್ಆರ್‌ನ್ನು 7 ದಿನಗಳ ಪೊಲೀಸ್ ಕಸ್ಟಡಿಗೆ ನ್ಯಾಯಾಲಯ ಒಪ್ಪಿಸಿದೆ.

ದೆಹಲಿ(ಅ.04) ಚೀನಾದಿಂದ ಅಕ್ರಣ ಹಣ ಪಡೆದು ಭಾರತದಲ್ಲಿ ದೇಶ ವಿರೋಧಿ ಸುದ್ದಿ ಪ್ರಕಟಿಸುತ್ತಿದ್ದ ನ್ಯೂಸ್‌ಕ್ಲಿಕ್ ಸಂಸ್ಥೆಗೆ ಸಂಕಷ್ಟದ ಮೇಲೆ ಸಂಕಷ್ಟ ಶುರುವಾಗಿದೆ. ನಿನ್ನೆ ನ್ಯೂಸ್‌ಕ್ಲಿಕ್ ಕಚೇರಿ ಮೇಲೆ ದಾಳಿ ನಡೆಸಿದ್ದ ಪೊಲೀಸರು ಸಂಪೂರ್ಣ ಕಚೇರಿಗೆ ಬೀಗ ಜಡಿದಿದ್ದರು. ಇದೇ ವೇಳೆ ನ್ಯೂಸ್ ಕ್ಲಿಕ್ ಸಂಸ್ಥಾಪಕ ಹಾಗೂ ಸಂಪಾದಕ ಪ್ರಬೀರ್ ಪುರ್ಕಾಯಸ್ಥ ಹಾಗೂ ಕಚೇರಿಯ ಹೆಚ್ಆರ್ ಅಮಿತ್ ಚಕ್ರವರ್ತಿ ಇಬ್ಬರನ್ನು ಇಂದು ಕೋರ್ಟ್ ಮುಂದೆ ಹಾಜರುಪಡಿಸಲಾಗಿತ್ತು. ಈ ವೇಳೆ ಕೋರ್ಟ್ ಇಬ್ಬರನ್ನು 7 ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

ಚೀನಾದ ಉದ್ದೇಶ ಈಡೇರಿಸಲು ಭಾರತದಲ್ಲಿ ದೇಶ ವಿರೋಧಿ ಸುದ್ದಿಗಳನ್ನು ಪ್ರಕಟಿಸುತ್ತಿದ್ದ ನ್ಯೂಸ್‌ಕ್ಲಿಕ್‌ಗೆ ಸಂಕಷ್ಟಗಳ ಸರಮಾಲೆಯೇ ಎದುರಾಗಿದೆ. ಕೇವಲ ಸುದ್ದಿ ಮಾತ್ರವಲ್ಲ, ವಿದೇಶಿ ನಿಧಿ ತನಿಖೆ, ಅಕ್ರಮ ಹಣವರ್ಗಾವಣೆ ಸೇರಿದಂತೆ ಹಲವು ಪ್ರಕರಣಗಳು ನ್ಯೂಸ್‌ಕ್ಲಿಕ್ ಸಂಸ್ಥೆ ಮೇಲಿದೆ. ಕಚೇರಿ ಮೇಲಿನ ದಾಳಿ ವೇಳೆ ಪೊಲೀಸರು ಲ್ಯಾಪ್‌ಟಾಪ್ ಸೇರಿದಂತೆ ಹಲವು ಎಲೆಕ್ಟ್ರಾನಿಕ್ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ನ್ಯೂಸ್‌ಕ್ಲಿಕ್ ಜೊತೆ ಸಂಬಂಧ ಹೊಂದಿರುವ 37 ಪುರುಷರು ಹಾಗೂ 9 ಮಹಿಳೆಯರು ಸೇರಿದಂತೆ 45ಕ್ಕೂ ಹೆಚ್ಚು ಪತ್ರಕರ್ತರನ್ನು ವಿಚಾರಣೆ ನಡೆಸಲಾಗಿದೆ. 

ಚೀನಾದಿಂದ ಅಕ್ರಮ ಧನಸಹಾಯ, ನ್ಯೂಸ್‌ಕ್ಲಿಕ್‌ ವೆಬ್‌ಸೈಟ್‌ ಸಂಸ್ಥಾಪಕ ಪ್ರಬೀರ್‌ ಪುರ್ಕಾಯಸ್ಥ ಬಂಧನ!

ಅಕ್ಟೋಬರ್ 3 ರಂದು ನ್ಯೂಸ್ ಕ್ಲಿಕ್ ಮೇಲೆ ದಾಳಿ ನಡೆಸಿದ ಪೊಲೀಸರು ಕಚೇರಿಯನ್ನು ಸೀಲ್ ಮಾಡಿದ್ದಾರೆ. ಇನ್ನು ಸೆಪ್ಟೆಂಬರ್ 30 ರಂದು ನ್ಯೂಸ್‌ಕ್ಲಿಕ್ ವೆಬ್‌ಸೈಟ್ ಟ್ವಿಟರ್(ಎಕ್ಸ್) ಖಾತೆಯನ್ನು ಅಮಾನತು ಮಾಡಲಾಗಿತ್ತು. ಚೀನಾ ಜತೆ ನಂಟು ಹೊಂದಿರುವ ಭಾರತೀಯ ಮೂಲದ ಅಮೆರಿಕ ಉದ್ಯಮಿ ನೆವಿಲ್ಲೆ ರಾಯ್‌ ಸಿಂಘಂ, ನ್ಯೂಸ್‌ಕ್ಲಿಕ್‌ನಲ್ಲಿ ಹೂಡಿಕೆ ಮಾಡಿದ್ದಾರೆ. ನ್ಯೂಸ್‌ಕ್ಲಿಕ್‌ನಲ್ಲಿ ಚೀನಾ ಪ್ರಾಯೋಜಿತ ಭಾರತ ವಿರೋಧಿ ಅಭಿಯಾನ ನಡೆಸಲಾಗುತ್ತದೆ ಎಂದು ಇತ್ತೀಚೆಗೆ ಅಮೆರಿಕದ ನ್ಯೂಯಾರ್ಕ್ ಟೈಮ್ಸ್‌ ವರದಿ ಮಾಡಿತ್ತು. ಇದರ ಬೆನ್ನಲ್ಲೇ ದೇಶದ 255 ಪ್ರಮುಖರು ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಸುಪ್ರೀಂ ಕೋರ್ಚ್‌ ಮುಖ್ಯ ನ್ಯಾಯಾಧೀಶ ನ್ಯಾ ಡಿ.ವೈ. ಚಂದ್ರಚೂಡ ಅವರಿಗೆ ಪತ್ರ ಬರೆದಿದು ನ್ಯೂಸ್‌ಕ್ಲಿಕ್‌ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು. ಈ ಎಲ್ಲ ವಿದ್ಯಮಾನಗಳ ಹಿನ್ನೆಲೆಯಲ್ಲಿ ಈಗ ಎಕ್ಸ್‌ ಎಂದು ಹೆಸರು ಬದಲಿಸಿಕೊಂಡಿರುವ ಟ್ವೀಟರ್‌ ಕಂಪನಿಯು ನ್ಯೂಸ್‌ಕ್ಲಿಕ್‌ನ ಟ್ವೀಟರ್‌ ಖಾತೆ ಅಮಾನತು ಮಾಡಿದೆ.

ಚೀನಾದ ಫಂಡ್‌ ಪಡೆದು ದೇಶವಿರೋಧಿ ಸುದ್ದಿ, ನ್ಯೂಸ್‌ಕ್ಲಿಕ್‌ ಪತ್ರಕರ್ತರ ಮನೆ ಮೇಲೆ ದೆಹಲಿ ಪೊಲೀಸ್‌ ದಾಳಿ!

ನೆವಿಲ್ಲೆ ರಾಯ್‌ ಸಿಂಘಂ ನ್ಯೂಸ್‌ಕ್ಲಿಕ್‌ ಮುಖ್ಯ ಸಂಪಾದಕ ಪ್ರಬೀರ್‌ ಪುರ್ಕಾಯಸ್ಥ ಹಾಗೂ ಸಿಪಿಎಂ ಮುಖಂಡ ಪ್ರಕಾಶ್‌ ಕಾರಟ್‌ ಅವರಿಗೆ ಸೇರಿದಂತೆ ಅನೇಕರಿಗೆ ಇ-ಮೇಲ್‌ ಕಳಿಸಿ, ಚೀನಾ ಸಿದ್ಧಾಂತಗಳನ್ನು ಪ್ರಚಾರ ಮಾಡಿ ಎಂದು ಇ-ಮೇಲ್‌ ಕಳಿಸಿದ್ದರು ಎಂದು ಅಮೆರಿಕದ ಆಂಗ್ಲ ದಿನಪತ್ರಿಕೆಯೊಂದು ಇತ್ತೀಚೆಗೆ ವರದಿ ಮಾಡಿತ್ತು. ಮೇಲಾಗಿ ನ್ಯೂಸ್‌ಕ್ಲಿಕ್‌ ವಿರುದ್ಧ 2 ವರ್ಷ ಹಿಂದೆಯೇ ಭಾರತದಲ್ಲಿ ವಿದೇಶಕ್ಕೆ ಅಕ್ರಮ ಹಣ ವರ್ಗಾವಣೆ ಮಾಡಿದ್ದ ವಿಚಾರದಲ್ಲಿ ಇ.ಡಿ. ದಾಳಿ ನಡೆದಿತ್ತು. ಆಗ ಇ.ಡಿ. ದಾಳಿಯನ್ನು ಕಾಂಗ್ರೆಸ್‌ ಖಂಡಿಸಿತ್ತು.