Sansad TV: ರಾಜ್ಯಸಭೆಯ ಟಿವಿ ಶೋ ನಿರೂಪಕಿ ಹುದ್ದೆ ತೊರೆದ ಪ್ರಿಯಾಂಕಾ ಚತುರ್ವೇದಿ, ಪತ್ರದಲ್ಲಿತ್ತು ಕಾರಣ!
* ಸಂಸತ್ತಿನ ಮುಂಗಾರು ಅಧಿವೇಶನದ ವೇಳೆ ಗದ್ದಲ ಸೃಷ್ಟಿಸಿದ 12 ಸಂಸದರ ಅಮಾನತು
* ಸಂಸದರ ಅಮಾನತ್ತಿನ ಬೆನ್ನಲ್ಲೇ ನಿರೂಪಕಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಪ್ರಿಯಾಂಕಾ ಚತುರ್ವೇದಿ
ನವದೆಹಲಿ(ಡಿ.05): ಸಂಸದೆ ಪ್ರಿಯಾಂಕಾ ಚತುರ್ವೇದಿ (MP Priyanka Chaturvedi) ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ನಿರ್ಧಾರದ ನಂತರ ಅವರು ಭಾನುವಾರ ರಾಜ್ಯಸಭಾ ಟಿವಿ (Sandsavd TV) ಕಾರ್ಯಕ್ರಮದ ನಿರೂಪಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪ್ರಿಯಾಂಕಾ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಪತ್ರವನ್ನೂ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಈ ರಾಜೀನಾಮೆ ಮಾಹಿತಿ ಜೊತೆ ಪ್ರಿಯಾಂಕಾ ಚತುರ್ವೇದಿ ಪತ್ರವೊಂದನ್ನು ಬರೆದಿದ್ದು, ನಾನು ಸಂಸತ್ತಿನ ಟಿವಿ ಶೋ 'ಮೇರಿ ಕಹಾನಿ' ಆಂಕರ್ (Anchor) ಸ್ಥಾನದಿಂದ ಕೆಳಗಿಳಿಯುತ್ತಿದ್ದೇನೆ ಎಂದು ದುಃಖದಿಂದ ತಿಳಿಸುತ್ತೇನೆ. ಸಂಸತ್ ಟಿವಿಯಲ್ಲಿ ಕಾರ್ಯಕ್ರಮ ನಡೆಯಲು ನಾನು ಸಿದ್ಧಳಿಲ್ಲ. ಸಂಸದರನ್ನು ನಿರಂಕುಶವಾಗಿ ಅಮಾನತು ಮಾಡಲಾಗಿದೆ, ಇದನ್ನು ನಾನು ವಿರೋಧಿಸುತ್ತೇನೆ. ನಿರೂಪಣೆ ಮಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಈ ಕಾರ್ಯಕ್ರಮದಿಂದ ದೂರ ಸರಿಯುತ್ತಿದ್ದೇನೆ ಎಂದಿದ್ದಾರೆ.
ರಾಜ್ಯಸಭೆಯ 12 ಸದಸ್ಯರ ಅಮಾನತು
ಆಗಸ್ಟ್‌ನಲ್ಲಿ ನಡೆದ ಸಂಸತ್ತಿನ ಕೊನೆಯ ಅಧಿವೇಶನದಲ್ಲಿ ಗದ್ದಲ ಸೃಷ್ಟಿಸಿ ಸದನದ ಕಲಾಪಕ್ಕೆ ಅಡ್ಡಿಪಡಿಸಿದ ಕಾರಣಕ್ಕಾಗಿ ಹನ್ನೆರಡು ಪ್ರತಿಪಕ್ಷ ಸಂಸದರನ್ನು ಇಡೀ ಚಳಿಗಾಲದ ಅಧಿವೇಶನಕ್ಕೆ ರಾಜ್ಯಸಭೆಯಿಂದ ಅಮಾನತುಗೊಳಿಸಲಾಗಿದೆ. ಮೇಲ್ಮನೆಯಿಂದ ಅಮಾನತುಗೊಳಿಸುವಿಕೆಯು "ಪ್ರಜಾಪ್ರಭುತ್ವವಲ್ಲದ ಮತ್ತು ಎಲ್ಲಾ ಕಾರ್ಯವಿಧಾನದ ನಿಯಮಗಳನ್ನು ಉಲ್ಲಂಘಿಸಿದೆ" ಎಂದು ವಿಪಕ್ಷಗಳು ಬಣ್ಣಿಸಿವೆ. ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿರುವ ಪ್ರಿಯಾಂಕಾ ನಾನು ನನ್ನ ಸಹೋದ್ಯೋಗಿಗಳ ಪರವಾಗಿ ಮಾತನಾಡಬೇಕಾಗಿದೆ. ಕಳೆದ ಅಧಿವೇಶನದ ನಡವಳಿಕೆಗಾಗಿ 12 ಸಂಸದರನ್ನು ಇಡೀ ಅಧಿವೇಶನಕ್ಕೆ ಅಮಾನತುಗೊಳಿಸಿರುವುದು ಸಂಸತ್ತಿನ ಇತಿಹಾಸದಲ್ಲಿ ಹಿಂದೆಂದೂ ಸಂಭವಿಸಿಲ್ಲ ಎಂದಿದ್ದಾರೆ. ಅಲ್ಲದೇ ಪ್ರಿಯಾಂಕಾರ ಈ ನಡೆಯನ್ನು ತೃಣಮೂಲ ಕಾಂಗ್ರೆಸ್‌ನ ಡೆರೆಕ್ ಒ'ಬ್ರೇನ್ ಸೇರಿದಂತೆ ಹಲವು ನಾಯಕರು ಅವರ ಕ್ರಮವನ್ನು ಬೆಂಬಲಿಸಿದ್ದಾರೆ.
ಅಮಾನತುಗೊಂಡಿರುವ ಸಂಸದರು ಪ್ರತಿನಿತ್ಯ ಗಾಂಧಿ ಪ್ರತಿಮೆ ಮೇಲೆ ಧರಣಿ ನಡೆಸುತ್ತಿದ್ದಾರೆ
ಅಮಾನತುಗೊಂಡ ಸಂಸದರಲ್ಲಿ ಕಾಂಗ್ರೆಸ್‌ನ 6, ತೃಣಮೂಲ ಕಾಂಗ್ರೆಸ್ ಮತ್ತು ಶಿವಸೇನೆಯ ತಲಾ 2 ಮತ್ತು ಸಿಪಿಐ ಮತ್ತು ಸಿಪಿಐ(ಎಂ) ತಲಾ ಒಬ್ಬರು ಸೇರಿದ್ದಾರೆ. ಅಮಾನತುಗೊಳಿಸಿರುವುದನ್ನು ವಿರೋಧಿಸಿ ಈ ಸಂಸದರು ಸಂಸತ್ತಿನ ಆವರಣದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ. ಅಮಾನತು ಹಿಂಪಡೆಯುವವರೆಗೆ ಪ್ರತಿದಿನವೂ ಇದನ್ನು ಮುಂದುವರಿಸಲು ನಿರ್ಧರಿಸಿದ್ದಾರೆ.
ಅಮಾನತ್ತು ಖಂಡಿಸಿದ್ದ ಪ್ರಿಯಾಂಕಾ
ಸಂಸದರ ಅಮಾನತ್ತು "ಅತ್ಯಂತ ಪ್ರಜಾಪ್ರಭುತ್ವ ವಿರೋಧಿ" ಎಂದು ಕರೆದ ಚತುರ್ವೇದಿ, ನಿರ್ಧಾರದ ಬಗ್ಗೆ ನನಗೆ ತಿಳಿಸಲಾಗಿಲ್ಲ ಮತ್ತು ಸರ್ಕಾರದ ವಿರುದ್ಧ ಮಾತನಾಡುವವರ ಧ್ವನಿಯನ್ನು ಹತ್ತಿಕ್ಕಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದರು. ಇದಲ್ಲದೆ, ತಮ್ಮ ಅಮಾನತಿನ ವಿರುದ್ಧ ರಾಜ್ಯಸಭಾ ಅಧ್ಯಕ್ಷರೊಂದಿಗೆ ಮಾತನಾಡುವುದಾಗಿ ಅವರು ಹೇಳಿದರು. ಇಂತಹ ಘಟನೆಯು "ಸಂಸದೀಯ ಪ್ರಜಾಪ್ರಭುತ್ವದಲ್ಲಿ ಕೇಳರಿಯದ ಘಟನೆ" ಎಂದು ಅವರು ಹೇಳಿದ್ದರು.
ಅಮಾನತುಗೊಂಡ ಸಂಸದರ ಪಟ್ಟಿ:
1. ಎಳಮರಮ್ ಕರೀಂ (ಸಿಪಿಎಂ)
2. ಫುಲೋ ದೇವಿ ನೇತಮ್ (ಐಎನ್ಸಿ)
3. ಛಾಯಾ ವರ್ಮಾ (ಐಎನ್ಸಿ)
4. ರಿಪುನ್ ಬೋರಾ (ಐಎನ್ಸಿ)
5. ಬಿನೋಯ್ ವಿಶ್ವಂ (ಸಿಪಿಐ)
6. ರಾಜಮಣಿ ಪಟೇಲ್ (ಐಎನ್ಸಿ)
7. ಡೋಲಾ ಸೇನ್ (ಟಿಎಂಸಿ)
8. ಶಾಂತಾ ಛೆಟ್ರಿ (ಟಿಎಂಸಿ)
9. ಸೈಯದ್ ನಾಸಿರ್ ಹುಸೇನ್ (ಐಎನ್ಸಿ)
10. ಪ್ರಿಯಾಂಕಾ ಚತುರ್ವೇದಿ (ಶಿವಸೇನೆ)
11. ಅನಿಲ್ ದೇಸಾಯಿ (ಶಿವಸೇನೆ)
12. ಅಖಿಲೇಶ್ ಪ್ರಸಾದ್ ಸಿಂಗ್ (ಐಎನ್ಸಿ)
ರಾಜ್ಯಸಭೆಯ ಉಪ ಸಭಾಪತಿ ಹರಿವಂಶ ನಾರಾಯಣ ಸಿಂಗ್ ಅವರು ಸದಸ್ಯರ ಅಮಾನತು ಘೋಷಿಸಿ ಸದನವನ್ನು ಮಂಗಳವಾರಕ್ಕೆ ಮುಂದೂಡಿದರು.