Asianet Suvarna News Asianet Suvarna News

ದೇಶೀಯ ರಕ್ಷಣಾ ಉತ್ಪಾದನೆಯಲ್ಲಿ ಖಾಸಗಿ ವಲಯದ ಸಹಭಾಗಿತ್ವ!

* ರಕ್ಷಣಾ ಕೈಗಾರಿಕಾ ಪರಿಸರ ವ್ಯವಸ್ಥೆಗಳನ್ನು ಪುನರುಜ್ಜೀವನಗೊಳಿಸುವ ಗುರಿ

* ಸಶಸ್ತ್ರ ಪಡೆಗಳಿಗೆ ಸಂಕೀರ್ಣ ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ವಿನ್ಯಾಸ

* ದೇಶೀಯ ರಕ್ಷಣಾ ಉತ್ಪಾದನೆಯಲ್ಲಿ ಖಾಸಗಿ ವಲಯದ ಸಹಭಾಗಿತ್ವ

Private sector partnership in domestic defense production by Girish Linganna pod
Author
Bangalore, First Published Dec 26, 2021, 10:58 PM IST

ಗಿರೀಶ್ ಲಿಂಗಣ್ಣ

ಬೆಂಗಳೂರು(ಡಿ.26): ದೇಶೀಯ ರಕ್ಷಣಾ ಉತ್ಪಾದನೆಯಲ್ಲಿ ಖಾಸಗಿ ವಲಯದ ಸಹಭಾಗಿತ್ವವನ್ನು ಉತ್ತೇಜಿಸುವ ಒಂದು ಕ್ರಮವಾಗಿ, ಸಶಸ್ತ್ರ ಪಡೆಗಳಿಗೆ ಸಲಕರಣೆಗಳ ಸಕಾಲಿಕ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ಹಾಗೂ ಕಾಲಾವಧಿಯನ್ನು ಕಡಿಮೆ ಮಾಡಲು ಕಾರ್ಯತಂತ್ರದ ಪಾಲುದಾರಿಕೆ (ಎಸ್‌ಪಿ) ಮಾರ್ಗಸೂಚಿಗಳ ಅನುಷ್ಠಾನವನ್ನು ರಕ್ಷಣಾ ಸ್ವಾಧೀನ ಮಂಡಳಿಯು (ಡಿಎಸಿ) ಅನುಮೋದಿಸಿದೆ.

ಮುಖ್ಯಾಂಶಗಳು

ರಕ್ಷಣಾ ಕೈಗಾರಿಕಾ ಪರಿಸರ ವ್ಯವಸ್ಥೆಗಳನ್ನು ಪುನರುಜ್ಜೀವನಗೊಳಿಸುವ ಗುರಿಯನ್ನು ಕಾರ್ಯತಂತ್ರದ ಪಾಲುದಾರಿಕೆ ಮಾದರಿಯು ಹೊಂದಿದೆ. ಸಶಸ್ತ್ರ ಪಡೆಗಳಿಗೆ ಸಂಕೀರ್ಣ ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ವಿನ್ಯಾಸಗೊಳಿಸಲು, ಅಭಿವೃದ್ಧಿಪಡಿಸಲು ಮತ್ತು ತಯಾರಿಸಲು ಖಾಸಗಿ ವಲಯದಲ್ಲಿ ಸ್ಥಳೀಯ ಸಾಮರ್ಥ್ಯಗಳನ್ನು ಹಂತಹಂತವಾಗಿ ಬೆಳೆಸುತ್ತದೆ. ದೇಶೀಯ ತಯಾರಿಕೆಗಳನ್ನು, ಸ್ಥಾಪಿತ ತಂತ್ರಜ್ಞಾನದ ವರ್ಗಾವಣೆಯನ್ನು ಮತ್ತು ಸ್ವಾವಲಂಬನೆಯನ್ನು ಉತ್ತೇಜಿಸುತ್ತದೆ. ಸರ್ಕಾರದ 'ಮೇಕ್ ಇನ್ ಇಂಡಿಯಾ' ಉಪಕ್ರಮದೊಂದಿಗೆ ರಕ್ಷಣಾ ವಲಯವನ್ನೂ ಇದು ಬೆಸೆಯುತ್ತದೆ.

Indian Navy: ಭಾರತೀಯ ನೌಕಾಪಡೆಗೆ ಬೇಕಿದೆ ಖಾಸಗಿ ಸಹಯೋಗ!

ಎಸ್‌ಪಿ ಮಾದರಿಯು- ಜಲಾಂತರ್ಗಾಮಿ ನೌಕೆಗಳು, ಸಿಂಗಲ್-ಎಂಜಿನ್ ಯುದ್ಧ ವಿಮಾನಗಳು, ಹೆಲಿಕಾಪ್ಟರ್‌ಗಳು ಮತ್ತು ಶಸ್ತ್ರಸಜ್ಜಿತ ವಾಹಕಗಳು/ಮುಖ್ಯ ಯುದ್ಧ ಟ್ಯಾಂಕ್‌ಗಳು - ಈ ನಾಲ್ಕು ವಿಭಾಗಗಳನ್ನು ಖಾಸಗಿ ವಲಯಕ್ಕೆ ಮುಕ್ತವಾಗಿಸಿದೆ.

ಇದರ ಅಡಿಯಲ್ಲಿ ಪ್ರತಿ ವಿಭಾಗದಲ್ಲಿ ಒಂದು ಖಾಸಗಿ ಕಂಪನಿಯನ್ನು ಆಯ್ಕೆ ಮಾಡಲಾಗುತ್ತದೆ. ತಂತ್ರಜ್ಞಾನ ವರ್ಗಾವಣೆಯ ಅಡಿಯಲ್ಲಿ ಭಾರತದಲ್ಲಿ ಅವುಗಳನ್ನು ತಯಾರಿಸಲು ಶಾರ್ಟ್‌ಲಿಸ್ಟ್ ಮಾಡಿದ ಜಾಗತಿಕ ಸಲಕರಣೆ ಉತ್ಪಾದಕರೊಂದಿಗೆ ಕಂಪನಿಯು ಒಪ್ಪಂದ ಮಾಡಿಕೊಳ್ಳುತ್ತದೆ. ಇದರ ಅಡಿಯಲ್ಲಿ ಎಲ್ಲ ಸಂಗ್ರಹಣೆಗಳನ್ನು ವಿಶೇಷವಾಗಿ ರಚಿಸಲಾದ ಅಧಿಕಾರ ಯೋಜನಾ ಸಮಿತಿಗಳಿಂದ ಕೇಂದ್ರೀಕೃತ ಗಮನವನ್ನು ಒದಗಿಸಲಾಗುವುದು ಮತ್ತು ಸಮಯೋಚಿತವಾಗಿ ಕಾರ್ಯಗತಗೊಳಿಸಲಾಗುವುದು.

ರಕ್ಷಣಾ ಸ್ವಾಧೀನ ಮಂಡಳಿ

'ರಾಷ್ಟ್ರೀಯ ಭದ್ರತಾ ವ್ಯವಸ್ಥೆಯನ್ನು ಸುಧಾರಿಸುವ' ಕುರಿತು ಮಂತ್ರಿಗಳ ಗುಂಪಿನ (GoM) ಶಿಫಾರಸುಗಳ ಪ್ರಕಾರ, ಸ್ವಾಧೀನಪಡಿಸಿಕೊಳ್ಳುವಿಕೆಯನ್ನು ನಿಭಾಯಿಸಲು ವಿಶಾಲವಾದ ರಚನೆಗಳು ಮತ್ತು ವ್ಯವಸ್ಥೆಗಳನ್ನು ರಕ್ಷಣಾ ಸಚಿವಾಲಯವು ಸ್ಥಾಪಿಸಿದೆ. ರಕ್ಷಣಾ ಸಂಗ್ರಹಣೆ ಯೋಜನೆ ಪ್ರಕ್ರಿಯೆಯ ಒಟ್ಟಾರೆ ಮಾರ್ಗದರ್ಶನಕ್ಕಾಗಿ ರಕ್ಷಣಾ-ಸಚಿವರ ನೇತೃತ್ವದಲ್ಲಿ ರಕ್ಷಣಾ ಸ್ವಾಧೀನ ಮಂಡಳಿ (ಡಿಎಸಿ)ಯನ್ನು ರಚಿಸಲಾಗಿದೆ. ಸಶಸ್ತ್ರ ಪಡೆಗಳಿಗೆ ಅಗತ್ಯವಾದ ಸಲಕರಣೆಗಳ ಸಂಗ್ರಹವನ್ನು ತ್ವರಿತಗೊಳಿಸುವ ಗುರಿಯನ್ನು ಡಿಎಸಿ ಹೊಂದಿದೆ. ರಕ್ಷಣಾ ಪಡೆಗಳಿಗಾಗಿ 15 ವರ್ಷಗಳ ದೀರ್ಘಾವಧಿಯ ಸಮಗ್ರ ದೃಷ್ಟಿಕೋನದ ಯೋಜನೆಗೆ ತಾತ್ವಿಕ ಅನುಮೋದನೆ ನೀಡಲಾಗಿದೆ.

ರಷ್ಯಾ ನಿರ್ಮಿತ ಫೈಟರ್ ಜೆಟ್‌ಗೆ ಹೊಸ ರೂಪ ಕೊಟ್ಟ HAL: ಇದು ಸ್ವದೇಶೀ ಸುಖೋಯ್ ಕಥೆ!

ಸಿಂಗಲ್ ವೆಂಡರ್ ಕ್ಲಿಯರೆನ್ಸ್‌ಗೆ ಸಂಬಂಧಿಸಿದ ಸಮಸ್ಯೆಗಳ ಪರಿಹಾರ, 'ಖರೀದಿ', 'ಖರೀದಿ & ಉತ್ಪಾದನೆ' ಮತ್ತು 'ಉತ್ಪಾದನೆಗೆ ಸಂಬಂಧಿಸಿದ ಸ್ವಾಧೀನ ಪ್ರಸ್ತಾವನೆಗಳ ವರ್ಗೀಕರಣ, ಮತ್ತು ರೂ. 300 ಕೋಟಿಗಳಿಗಿಂತ ಹೆಚ್ಚಿನ ಮೊತ್ತದ ಸ್ವಾಧೀನ ಪ್ರಸ್ತಾವನೆಗಳಿಗೆ ಅಗತ್ಯತೆಯ ಸ್ವೀಕಾರದ ಒಪ್ಪಿಗೆಗೆ ಸಂಬಂಧಿಸಿದಂತೆ 'ಆಫ್‌ಸೆಟ್' ನಿಬಂಧನೆಗಳ ಕುರಿತು ನಿರ್ಧಾರಗಳನ್ನು ಇದು ಕೈಗೊಳ್ಳಲಿದೆ. -

ತಂತ್ರಜ್ಞಾನ ವರ್ಗಾವಣೆಗೆ ಸಂಬಂಧಿಸಿದ ಕ್ಷೇತ್ರ ಪ್ರಯೋಗದ ಮೌಲ್ಯಮಾಪನ ನಿರ್ಧಾರಗಳು

ಸಾರ್ವಜನಿಕ-ಖಾಸಗಿ ಸಹಭಾಗಿತ್ವದಿಂದ 'ರಕ್ಷಣಾ ಉತ್ಪಾದನಾ ಕ್ರಾಂತಿ' ಸಾಧ್ಯ: ರಾಜನಾಥ್

ವ್ಯೂಹಾತ್ಮಕ ಪಾಲುದಾರಿಕೆ ಮಾದರಿಯು ಮುಂದಿನ ವರ್ಷಗಳಲ್ಲಿ ಭಾರತದ ಖಾಸಗಿ ಕಂಪನಿಗಳು ಜಾಗತಿಕವಾಗಿ ದೈತ್ಯಾಕಾರವಾಗಿ ಬೆಳೆಯಲು ನೆರವಾಗುತ್ತದೆ ಎಂದು ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

"ಸರ್ಕಾರವು ಜಾಗತಿಕ ಭದ್ರತಾ ಸನ್ನಿವೇಶವನ್ನು ಪರಿಗಣಿಸಿ, ಸಶಸ್ತ್ರ ಪಡೆಗಳನ್ನು ಆದಷ್ಟು ಶೀಘ್ರವಾಗಿ ಆಧುನೀಕರಿಸಲು ಬಯಸುತ್ತದೆ. ಭವಿಷ್ಯದಲ್ಲಿ ಭಾರತೀಯ ಖಾಸಗಿ ಕಂಪನಿಗಳು ಜಾಗತಿಕ ಮಟ್ಟದಲ್ಲಿ ಬೆಳೆಯಲು ಸಹಾಯ ಮಾಡಲು ಕಾರ್ಯತಂತ್ರದ ಪಾಲುದಾರಿಕೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಕಳೆದ ರಕ್ಷಣಾ ರಫ್ತು ಏಳು ವರ್ಷಗಳಲ್ಲಿ 38,000 ಕೋಟಿ ರೂ.ಗಳ ಗಡಿಯನ್ನು ದಾಟಿದೆ" ಎಂದು ತಿಳಿಸಿದರು, 10,000ಕ್ಕೂ ಹೆಚ್ಚು ಸಣ್ಣ ಮತ್ತು ಮಧ್ಯಮ ಉದ್ಯಮಗಳು ರಕ್ಷಣಾ ವಲಯಕ್ಕೆ ಸೇರಿಕೊಂಡಿವೆ. ಸಂಶೋಧನೆ ಮತ್ತು ಅಭಿವೃದ್ಧಿ, ನವೋದ್ಯಮಗಳು, ನಾವೀನ್ಯ ಮತ್ತು ಉದ್ಯೋಗದಲ್ಲೂ ಗಣನೀಯ ಹೆಚ್ಚಳವಾಗಿದೆ. ಎದುರಾಗುತ್ತಿರುವ ಭದ್ರತಾ ಆತಂಕಗಳು, ಗಡಿ ವಿವಾದಗಳು ಮತ್ತು ಸಮುದ್ರಕ್ಕೆ ಸಂಬಂಧಿಸಿದ ಪ್ರಾಬಲ್ಯದಿಂದಾಗಿ ಮಿಲಿಟರಿ ಉಪಕರಣಗಳ ಬೇಡಿಕೆಯು ವೇಗವಾಗಿ ವರ್ಧಿಸುತ್ತಿದೆ. ವಿತವ್ಯಯಕಾರಿ ಮತ್ತು ಗುಣಮಟ್ಟದ ವಿಧಾನದ ಮೂಲಕ ಈ ಅಗತ್ಯಗಳನ್ನು ಪೂರೈಸಲು ಭಾರತ ಸಮರ್ಥವಾಗಿದೆ. ಸಾರ್ವಜನಿಕ ವಲಯ, ಖಾಸಗಿ ವಲಯ, ಶೈಕ್ಷಣಿಕ, ಸಂಶೋಧನೆ ಮತ್ತು ಅಭಿವೃದ್ಧಿ. ಎಲ್ಲರನ್ನೂ ಒಳಗೊಳ್ಳುವುದರಲ್ಲಿ ನಾವು ನಂಬಿಕೆ ಇರಿಸಿದ್ದೇವೆ" ಎಂದು ಅವರು ತಿಳಿಸಿದ್ದಾರೆ.

 ಸ್ವದೇಶೀಕರಣದ ಮಹತ್ವವನ್ನು ಪ್ರತಿಪಾದಿಸುವ ಜತೆಗೆ, ಖಾಸಗಿ ವಲಯವನ್ನು ಸಂಯೋಜಿಸಲು ಮತ್ತು ಆತ್ಮನಿರ್ಭರ ಭಾರತವನ್ನು ಸಾಧಿಸಲು ಕೈಗೊಂಡ ಸುಧಾರಣೆಗಳನ್ನು ರಾಜನಾಥ ಸಿಂಗ್ ಒತ್ತಿ ಹೇಳಿದರು. ದೇಶೀಯ ಬಂಡವಾಳ ಸಂಗ್ರಹಣೆಗಾಗಿ 2021-22ರ ಬಂಡವಾಳ ಸ್ವಾಧೀನ ಬಜೆಟ್‌ನ 64.09% ಭಾಗವನ್ನು ಮತ್ತು ಖಾಸಗಿ ಉದ್ಯಮದಿಂದ ನೇರ ಸಂಗ್ರಹಣೆಗಾಗಿ ಬಂಡವಾಳ ಸಂಗ್ರಹಣೆ ಬಜೆಟ್‌ನ 15% ಭಾಗವನ್ನು ಮೀಸಲಿಡುವುದು; ಉತ್ತರ ಪ್ರದೇಶ ಮತ್ತು ತಮಿಳುನಾಡಿನಲ್ಲಿ ರಕ್ಷಣಾ ಕೈಗಾರಿಕಾ ಕಾರಿಡಾರ್‌ಗಳ ಸ್ಥಾಪನೆ; ರಕ್ಷಣಾ ಶ್ರೇಷ್ಠತೆಗಾಗಿ ನಾವೀನ್ಯದ ಪರಿಚಯ; ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಮೂಲಕ ತಂತ್ರಜ್ಞಾನದ ಉಚಿತ ವರ್ಗಾವಣೆ ಮತ್ತು ಸ್ವಯಂಚಾಲಿತ ಮಾರ್ಗದ ಮೂಲಕ 74% ಮತ್ತು ಸರ್ಕಾರಿ ಮಾರ್ಗದ ಮೂಲಕ 100% ವರೆಗೆ ರಕ್ಷಣೆಯಲ್ಲಿ ವಿದೇಶಿ ನೇರ ಹೂಡಿಕೆ (ಎಫ್‌ಡಿಐ)ಯನ್ನು ಇದು ಒಳಗೊಂಡಿದೆ" ಎಂಬ ರಕ್ಷಣಾ ಸಚಿವರ ಈ ಹೇಳಿಕೆಯ ಬಳಿಕ, ಪ್ರಧಾನಿ ನರೇಂದ್ರ ಮೋದಿಯವರ “ಆತ್ಮನಿರ್ಭರ ಭಾರತ್” ಮತ್ತು ರಕ್ಷಣಾ ಕೈಗಾರಿಕೀಕರಣ, ಭಾರತದಲ್ಲಿ ಜಂಟಿ ಸಂಶೋಧನೆ ಮತ್ತು ತಂತ್ರಜ್ಞಾನ ಅಭಿವೃದ್ಧಿಯನ್ನು ವ್ಯಾಪಕ ಶ್ರೇಣಿಯ ಸುಧಾರಿತ ಸಾಮರ್ಥ್ಯಗಳಲ್ಲಿ ಬೆಂಬಲಿಸುವ ತನ್ನ ಬದ್ಧತೆಯನ್ನು ಫ್ರಾನ್ಸ್ ಪುನರುಚ್ಚರಿಸಿದೆ ಎಂದು ಫ್ರಾನ್ಸ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಹೇಳಿದೆ.

ಭಾರತೀಯ ರಾಯಭಾರ ಕಚೇರಿಯ ಪ್ರಕಾರ, ಗುಪ್ತಚರ ಮತ್ತು ಮಾಹಿತಿ ಹಂಚಿಕೆ, ಸಾಮರ್ಥ್ಯ ವೃದ್ಧಿ, ಮಿಲಿಟರಿ ತಾಲೀಮುಗಳ ವಿಸ್ತರಣೆ ಮತ್ತು ಸಾಗರ, ಬಾಹ್ಯಾಕಾಶ ಮತ್ತು ಸೈಬರ್ ಕ್ಷೇತ್ರಗಳಲ್ಲಿ ಹೊಸ ಉಪಕ್ರಮಗಳನ್ನು ಮುಂದುವರಿಸಲು ಉಭಯ ರಾಷ್ಟ್ರಗಳು ಒಪ್ಪಿಕೊಂಡಿವೆ.

Make In India: ರಕ್ಷಣಾ ಹೆಲಿಕಾಪ್ಟರ್‌ಗಳ ಖರೀದಿಯಲ್ಲಿ ಅರ್ಹತೆಯೇ ಪ್ರಧಾನವಾಗಿರಲಿ

ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಚೀನಾದ ಆಕ್ರಮಣವನ್ನು ನಿಗ್ರಹಿಸುವ ಉದ್ದೇಶದಿಂದ ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ಅಮೆರಿಕದ ಹೊಸ ಭದ್ರತಾ ಒಕ್ಕೂಟವನ್ನು (AUKUS) ಅನಾವರಣಗೊಳಿಸಿದ ಸುಮಾರು ಎರಡು ತಿಂಗಳ ಬಳಿಕ ಭಾರತದೊಂದಿಗೆ ಕಾರ್ಯತಂತ್ರದ ಸಹಕಾರವನ್ನು ವಿಸ್ತರಿಸುವುದಾಗಿ ಫ್ರಾನ್ಸ್ ಪುನರುಚ್ಚರಿಸಿದ್ದು ಉಲ್ಲೇಖನೀಯ. ಪ್ಯಾರಿಸ್‌ನೊಂದಿಗಿನ ಪ್ರತ್ಯೇಕ ಜಲಾಂತರ್ಗಾಮಿ ಒಪ್ಪಂದದಿಂದ ಕ್ಯಾನ್‌ಬೆರಾ ಹೊರಬಂದ ಮೇಲೆ ಆಸ್ಟ್ರೇಲಿಯಾಕ್ಕೆ ಜಲಾಂತರ್ಗಾಮಿ ನೌಕೆಗಳನ್ನು ನಿರ್ಮಿಸಿ ಕೊಡುವ ಮೈತ್ರಿಯ ಘೋಷಣೆಯು ಫ್ರೆಂಚ್ ಸರ್ಕಾರವನ್ನು ಕೆರಳಿಸಿತು.

 ಭಾರತದ ಪ್ರಮುಖ ಜಾಗತಿಕ ಮತ್ತು ಇಂಡೋ-ಪೆಸಿಫಿಕ್ ಪಾಲುದಾರರಲ್ಲಿ ಫ್ರಾನ್ಸ್ ಒಂದಾಗಿದೆ ಎಂದು ಭಾರತ ಹೇಳಿದೆ.  ಇದಕ್ಕೆ ಪುಷ್ಠಿ ನೀಡುವಂತೆ, ಭಾರತೀಯ ಸಶಸ್ತ್ರ ಪಡೆಗಳಿಗೆ ಅಗತ್ಯವಿರುವ ಸೇನಾ ನೆಲೆಗಳು ಮತ್ತು ಉಪಕರಣಗಳನ್ನು ದೇಶದಲ್ಲಿಯೇ ತಯಾರಿಸಬೇಕು ಎಂದು ಅಮೆರಿಕ, ರಷ್ಯಾ, ಫ್ರಾನ್ಸ್ ಮತ್ತು ತನ್ನ ಹಲವು ಪಾಲುದಾರ ದೇಶಗಳಿಗೆ ಭಾರತವು ಸ್ಪಷ್ಟವಾಗಿ ತಿಳಿಸಿದೆ ಎಂದು ರಕ್ಷಣಾ ಸಚಿವರು ಹೇಳಿದ್ದಾರೆ.

ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯ (ಎಫ್‌ಐಸಿಸಿಐ- ಫಿಕ್ಕಿ) ವಾರ್ಷಿಕ ಸಮಾವೇಶದಲ್ಲಿ ಭಾಷಣ ಮಾಡಿದ ರಕ್ಷಣಾ ಸಚಿವರು, ಫ್ರೆಂಚ್ ರಕ್ಷಣಾ ಸಚಿವ ಫ್ಲಾರೆನ್ಸ್ ಪಾರ್ಲಿ ಅವರೊಂದಿಗೆ ನಡೆಸಿದ ಮಾತುಕತೆಯ ಫಲವಾಗಿ, ಭಾರತದಲ್ಲಿ ಕಾರ್ಯತಂತ್ರದ ಪಾಲುದಾರಿಕೆ ಮಾದರಿಯಲ್ಲಿ "ಜೆಟ್ ಎಂಜಿನ್" ಉತ್ಪಾದಿಸುವುದಕ್ಕಾಗಿ ಭಾರತೀಯ ಕಂಪನಿಯೊಂದಿಗೆ ಸಹಯೋಗ ಹೊಂದಲು ಪ್ರಮುಖ ಫ್ರೆಂಚ್ ಕಂಪನಿಯೊಂದು ಸಮ್ಮತಿಸಿದೆ ಎಂದು ತಿಳಿಸಿದರು. ಆದರೆ, ಈ ಬಗ್ಗೆ ಇನ್ನಷ್ಟು ವಿವರಗಳನ್ನು ಬಹಿರಂಗಪಡಿಸಲು ನಿರಾಕರಿಸಿದರು.

ದೇಶೀಯ ರಕ್ಷಣಾ ಉದ್ಯಮವನ್ನು ಉತ್ತೇಜಿಸಲು 209 ಮಿಲಿಟರಿ ಉಪಕರಣಗಳನ್ನು ಆಮದು ಮಾಡಿಕೊಳ್ಳದಿರುವ ಸರ್ಕಾರದ ನಿರ್ಧಾರವನ್ನು ರಕ್ಷಣಾ ಸಚಿವರು ಉಲ್ಲೇಖಿಸಿದರು. ಈ ಪಟ್ಟಿಯಲ್ಲಿರುವ ವಸ್ತುಗಳು 1,000ಕ್ಕೆ ತಲುಪಬಹುದು ಎಂದು ಸೂಚಿಸಿದರು.

2024ರ ವೇಳೆಗೆ ಸಾರಿಗೆ ವಿಮಾನಗಳು, ಲಘು ಯುದ್ಧ ಹೆಲಿಕಾಪ್ಟರ್‌ಗಳು, ಸಾಂಪ್ರದಾಯಿಕ ಜಲಾಂತರ್ಗಾಮಿ ನೌಕೆಗಳು, ಕ್ರೂಸ್ ಕ್ಷಿಪಣಿಗಳು ಮತ್ತು ಸೋನಾರ್ ಸಿಸ್ಟಮ್‌ಗಳಂತಹ 101 ಶಸ್ತ್ರಾಸ್ತ್ರಗಳ ಆಮದನ್ನು ಭಾರತವು ನಿಲ್ಲಿಸುವುದಾಗಿ ಕಳೆದ ವರ್ಷ ಆಗಸ್ಟ್‌ನಲ್ಲಿ ರಾಜನಾಥ್ ಘೋಷಿಸಿದ್ದರು.

ಮೇ 2020ರಲ್ಲಿ, ರಕ್ಷಣಾ ವಲಯದಲ್ಲಿ ಸರ್ಕಾರವು ಎಫ್‌ಡಿಐ ಮಿತಿಯನ್ನು 49 ಪ್ರತಿಶತದಿಂದ 74 ಪ್ರತಿಶತಕ್ಕೆ ಹೆಚ್ಚಿಸಿತು. ಸ್ಥಳೀಯ ಕೈಗಾರಿಕೆಗಳಿಂದ ರಕ್ಷಣಾ ಖರೀದಿಗೆ ಬಜೆಟ್ ವೆಚ್ಚವನ್ನು ಹೆಚ್ಚಿಸಲು ಸರ್ಕಾರವು ಬದ್ಧವಾಗಿದೆ ಎಂದು ಅವರು ಭರವಸೆ ನೀಡಿದರು. ಭಾರತೀಯ ರಕ್ಷಣಾ ಮತ್ತು ಏರೋಸ್ಪೇಸ್ ಉತ್ಪಾದನಾ ಮಾರುಕಟ್ಟೆ ಪ್ರಸಕ್ತ ಇರುವ 85,000 ಕೋಟಿ ರೂ.ಗಳಿಂದ, 2022ರಲ್ಲಿ 1 ಲಕ್ಷ ಕೋಟಿ ರೂ.ಗಳಿಗೆ ಮತ್ತು 2047ರ ವೇಳೆಗೆ 5 ಲಕ್ಷ ಕೋಟಿ ರೂ.ಗಳಿಗೆ ಏರಿಕೆಯಾಗಲಿದೆ ಎಂದು ಭವಿಷ್ಯ ನುಡಿದರು. ಏತನ್ಮಧ್ಯೆ, ಸುಧಾರಿತ ಮಧ್ಯಮ ಗಾತ್ರದ ಯುದ್ಧ ವಿನಾನಗಳಿಗಾಗಿ (AMCA) ಗಾಗಿ ಎಂಜಿನ್ ಅಭಿವೃದ್ಧಿಪಡಿಸಲು ಫ್ರಾನ್ಸ್‌ನ ಸಫ್ರಾನ್‌ನೊಂದಿಗೆ ಚರ್ಚೆ ನಡೆಯುತ್ತಿದೆ ಎಂದು ರಕ್ಷಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎಲ್‌ಸಿಎ ರೂಪಾಂತರಗಳು ಮತ್ತು ಎಎಂಸಿಎದಂತಹ ವಿಮಾನಗಳನ್ನು ಶಕ್ತಿಯುತಗೊಳಿಸಲು ಅಂತಾರಾಷ್ಟ್ರೀಯ ಎಂಜಿನ್ ಹೌಸ್ ಸಹಯೋಗದೊಂದಿಗೆ ಸ್ಥಳೀಯ ಎಂಜಿನ್‌ಗಳನ್ನು ಅಭಿವೃದ್ಧಿಪಡಿಸಲು ಪ್ರಸ್ತಾಪಿಸಲಾಗಿದೆ ಎಂದು ಸರ್ಕಾರವು ಇತ್ತೀಚೆಗೆ ಸಂಸತ್ತಿಗೆ ಮಾಹಿತಿ ನೀಡಿತು. ಈ ನಿಟ್ಟಿನಲ್ಲಿ ಪ್ರಮುಖ ಎಂಜಿನ್ ತಯಾರಕರೊಂದಿಗೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು ಮಾತುಕತೆ ನಡೆಸಿತ್ತು.
 

ಲೇಖಕರು: ಗಿರೀಶ್ ಲಿಂಗಣ್ಣ, ನಿರ್ದೇಶಕರು, ಎಡಿಡಿ ಎಂಜಿನಿಯರಿಂಗ್ ಇಂಡಿಯಾ ಲಿಮಿಟೆಡ್.

Follow Us:
Download App:
  • android
  • ios