* ಕ್ವಾಡ್ ಸಮ್ಮೇಳನದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿ* ಪ್ರಧಾನಿ ನರೇಂದ್ರ ಮೋದಿ ಜಪಾನ್‌ಗೆ ಭೇಟಿ* ಮೇ 23 ಮತ್ತು 24 ರಂದು ಟೋಕಿಯೊದಲ್ಲಿ ನಡೆಯುವ ಕ್ವಾಡ್ ಸಮ್ಮೇಳನ
ನವದೆಹಲಿ(ಮೇ.22): ಕ್ವಾಡ್ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಜಪಾನ್‌ಗೆ ಭೇಟಿ ನೀಡುತ್ತಿದ್ದಾರೆ. ಮೇ 23 ಮತ್ತು 24 ರಂದು ಟೋಕಿಯೊದಲ್ಲಿ ನಡೆಯುವ ಕ್ವಾಡ್ ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ. ಈ ಬಗ್ಗೆ ಅಧಿಕೃತ ಹೇಳಿಕೆಯನ್ನೂ ನೀಡಿದ್ದಾರೆ.
ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರ ಆಹ್ವಾನದ ಮೇರೆಗೆ ನಾನು ಜಪಾನ್‌ಗೆ ಹೋಗುತ್ತಿದ್ದೇನೆ ಎಂದು ಅವರು ಪತ್ರವೊಂದನ್ನು ಹೊರಡಿಸಿದ್ದಾರೆ. ಮಾರ್ಚ್ 2022 ರಲ್ಲಿ 14 ನೇ ಭಾರತ-ಜಪಾನ್ ವಾರ್ಷಿಕ ಶೃಂಗಸಭೆಗೆ ಪಿಎಂ ಕಿಶಿದಾ ಅವರನ್ನು ಆಯೋಜಿಸುವ ಸವಲತ್ತು ನನಗೆ ಸಿಕ್ಕಿತು. ಟೋಕಿಯೊಗೆ ನನ್ನ ಭೇಟಿಯ ಸಮಯದಲ್ಲಿ, ಭಾರತ-ಜಪಾನ್ ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಪಾಲುದಾರಿಕೆಯನ್ನು ಬಲಪಡಿಸುವ ಗುರಿಯನ್ನು ಹೊಂದಿರುವ ನಮ್ಮ ಸಂವಾದವನ್ನು ಮುಂದುವರಿಸಲು ನಾನು ಎದುರು ನೋಡುತ್ತಿದ್ದೇನೆ ಎಂದಿದ್ದಾರೆ.
ಅಮೆರಿಕ ಅಧ್ಯಕ್ಷ ಜೋ ಬೈಡನ್, ಆಸ್ಪ್ರೇಲಿಯಾ ಹಾಗೂ ಜಪಾನಿನ ಪ್ರಧಾನಿಯವರೊಂದಿಗಿನ ಸಭೆಗಳೂ ಇದರಲ್ಲಿ ಸೇರಿವೆ.
ಜಪಾನ್ ಭೇಟಿಯ ವೇಳೆ ಪ್ರಧಾನಿ ಜಪಾನಿನ 30 ಸಿಇಒಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ. ಅಲ್ಲದೇ ಅಲ್ಲಿ ನೆಲೆಸಿದ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಪ್ರಧಾನಿ ಟೋಕಿಯೋನಲ್ಲಿ ಒಂದು ರಾತ್ರಿ ತಂಗಲಿದ್ದು, 2 ರಾತ್ರಿ ವಿಮಾನ ಸಂಚಾರದಲ್ಲೇ ಕಳೆಯಲಿದ್ದಾರೆ.
ಉಕ್ರೇನ್-ರಷ್ಯಾ ಬಿಕ್ಕಟ್ಟಿನ ವಿಚಾರವಾಗಿ ಮೋದಿ ಬೈಡನ್ ಹಾಗೂ ಜಪಾನಿನ ಪ್ರಧಾನಿ ಫುಮಿಯೋ ಕಿಶಿದಾ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಆಸ್ಪ್ರೇಲಿಯಾದ ಪ್ರಧಾನಿಯೊಂದಿಗೂ ದ್ವಿಪಕ್ಷೀಯ ಮಾತುಕತೆಯಲ್ಲಿ ಮೋದಿ ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
