ಬೆಂಗಳೂರಿನ ಇಸ್ರೋ ಕಚೇರಿಗೆ ಪ್ರಧಾನಿ ಮೋದಿ ಆಗಮನ: ವಿಜ್ಞಾನಿಗಳೊಂದಿಗೆ ಚರ್ಚಿಸುವ ವಿಷಯಗಳಿವು!
ಚಂದ್ರಯಾನ-3 ಮಿಷನ್ ಯಶಸ್ವಿಯಾದ ಬೆನ್ನಲ್ಲಿಯೇ ಬೆಂಗಳೂರಿನಲ್ಲಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ (ಇಸ್ರೋ) ಪ್ರಧಾನಮಂತ್ರಿ ನರೇಂದ್ರ ಮೋದಿ ಶನಿವಾರ ಭೇಟಿ ನೀಡಲಿದ್ದಾರೆ.
ಬೆಂಗಳೂರು (ಆ.24): ಜಗತ್ತನ್ನೇ ತನ್ನತ್ತ ತಿರುಗಿ ನೋಡುವಂತಹ ಚಂದ್ರಯಾನ-3 ಯಶಸ್ವಿ ಉಡ್ಡಯನದ ಸಾಧನೆ ಮಾಡಿದ ಬೆಂಗಳೂರಿನಲ್ಲಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) (ಇಸ್ರೋ) ಸಂಸ್ಥೆಯ ವಿಜ್ಞಾನಿಗಳನ್ನು ನೇರವಾಗಿಯೇ ಭೇಟಿ ಮಾಡಿ ಅಭಿನಂದನೆಯಲ್ಲಿ ಸಲ್ಲಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಬರಲಿದ್ದಾರೆ. ಇನ್ನು ಶನಿವಾರ ಬೆಳ್ಳಂಬೆಳಗ್ಗೆ ಬೆಂಗಳೂರಿಗೆ ಬಂದು ವಿಜ್ಷಾನಿಗಳೊಂದಿಗೆ ಸಂತಸದ ಕ್ಷಣಗಳನ್ನು ಹಂಚಿಕೊಳ್ಳಲಿದ್ದಾರೆ.
ಹೌದು, ಶನಿವಾರ ಬೆಳಗ್ಗೆ ಬೆಳಗ್ಗೆ 7 ರಿಂದ 8 ಗಂಟೆವರೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಸ್ರೋ ಕಚೇರಿಯಲ್ಲಿರುವ ವಿಜ್ಞಾನಿಗಳನ್ನು ಭೇಟಿ ಮಾಡಲಿದ್ದಾರೆ. ಇಸ್ರೋ ಅಧ್ಯಕ್ಷ ಸೋಮನಾಥ್ ಮತ್ತು ಚಂದ್ರಯಾನ 3 ಯಶಸ್ವಿಗೆ ಕಾರಣರಾದ ವಿಜ್ಞಾನಿಗಳಿಗೆ ಮೋದಿ ಅಭಿನಂದನೆ ಸಲ್ಲಿಸಲಿದ್ದಾರೆ. ನಂತರ ಎಲ್ಲ ಇಸ್ರೋ ವಿಜ್ಞಾನಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸ್ವತಃ ಸಭೆಯನ್ನು ನಡೆಸಿ, ಚಂದ್ರಯಾನ-3 ಯಶಸ್ವಿಯ ಎಲ್ಲ ಹಂತಗಳ ಬಗ್ಗೆ ಚರ್ಚೆ ಮಾಡಲಿದ್ದಾರೆ. ನಂತರ, ರೋವರ್ ಪ್ರಗ್ಯಾನ್ ಕಾರ್ಯ ವೈಖರಿಯ ಬಗ್ಗೆ ಚರ್ಚೆ ಮಾಡಿ, ದೇಶಕ್ಕೆ ಅಗತ್ಯವಾಗಿರುವ ಯಾವ ಮಾಹಿತಿಗಳನ್ನು ಸಂಗ್ರಹಣೆ ಮಾಡಬೇಕು ಎಂಬುದರ ಬಗ್ಗೆ ಚರ್ಚೆ ಮಾಡಲಾಗುತ್ತದೆ ಎಂಬ ಮಾಹಿತಿಯಿದೆ.
Chandrayaan-3 Mission: ಲ್ಯಾಂಡರ್‌ನಿಂದ ಯಶಸ್ವಿಯಾಗಿ ಕೆಳಗಿಳಿದ ರೋವರ್, ಚಂದ್ರನ ಮೇಲೆ ನಡೆದಾಡಿದ ಭಾರತ
ಇನ್ನು ಬ್ರಿಕ್ಸ್ ಸಮ್ಮೇಳನದಲ್ಲಿ ಭಾಗಿಯಾಗಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಭಾರತದ ಇಸ್ರೋ ಸಂಸ್ಥೆಯ ಚಂದ್ರಯಾನ-3ಯ ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಇಳಿದ ಬಳಿಕ ಇಸ್ರೋ ಅಧ್ಯಕ್ಷ ಸೋಮನಾಥ್ ಜೊತೆ ಮೋದಿ ದೂರವಾಣಿ ಮೂಲಕ ವೈಯಕ್ತಿಕವಾಗಿ ಅಭಿನಂದನೆ ಸಲ್ಲಿಸಿ, ಮಾತುಕತೆ ನಡೆಸಿದ್ದರು. ಆದರೂ ಮೋದಿ ಇದೀಗ ಬೆಂಗಳೂರಿಗೆ ಬರಲಿದ್ದು, ಇಸ್ರೋ ಕಚೇರಿಗೆ ತೆರಳಿ ಅಭಿನಂದನೆ ಸಲ್ಲಿಸಲು ನಿರ್ಧರಿಸಿದ್ದಾರೆ. ಅತ್ಯುನ್ನತ ಸಾಧನೆ ಮಾಡಿದ ವಿಜ್ಞಾನಿಗಳಿಗೆ ಗೌರವ ನೀಡಲಿದ್ದಾರೆ.
ಬುಧವಾರ ಸಂಜೆ ವೇಳೆ ಚಂದ್ರಯಾನ-3 ವಿಕ್ರಮ್ ಲ್ಯಾಂಡರ್ ಚಂದ್ರನ ಅಂಗಳದಲ್ಲಿ ಯಶಸ್ವಿಯಾಗಿ ಲ್ಯಾಂಡಿಂಗ್ ಆಗುತ್ತಿದ್ದಂತೆಯೇ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ಪ್ರಧಾನಿ ಮೋದಿ ಸಂಭ್ರಮ ಹಂಚಿಕೊಂಡಿದ್ದರು. ಈ ವೇಳೆ ಮಾತನಾಡಿದ ಅವರು, ನಾನು ದಕ್ಷಿಣ ಆಫ್ರಿಕಾದಲ್ಲಿದ್ದೇನೆ. ಆದರೆ ನನ್ನ ಮನಸ್ಸು ಚಂದ್ರಯಾನ ಮೇಲಿತ್ತು. ಚಂದ್ರಯಾನ ಯಶಸ್ವಿ ಜನರಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿದೆ. ನಾನು ನಮ್ಮ ಜನರ ಖುಷಿಯ ಸಮಯದಲ್ಲಿ ಭಾಗಿಯಾಗಿದ್ದೇನೆ. ನಾನು ಇಸ್ರೋ ಮತ್ತು ದೇಶದ ವಿಜ್ಞಾನಿಗಳಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದರು.
ಚಂದ್ರನ ಅಂಗಳದಲ್ಲಿ ಭಾರತ ಹೊಸ ಇತಿಹಾಸ: ಭಾರತದ ಸಾಧನೆಗೆ ಇಡೀ ವಿಶ್ವವೇ ಮೆಚ್ಚುಗೆ..!
ಇಸ್ರೋ ಸಾಧನೆಯಿಂದ ರೋಮಾಂಚನವಾಗಿದೆ: ಚಂದ್ರಯಾನ-3 ಯಶಸ್ಸು ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖ್ಯಸ್ಥೆ ಸೋನಿಯಾಗಾಂಧಿ ಅವರು, ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಿ ಪತ್ರವನ್ನು ಬರೆದಿದ್ದಾರೆ. ಇಸ್ರೋದ ಅದ್ಭುತವಾದ ಸಾಧನೆಯಿಮದ ನಾನು ರೋಮಾಂಚನಗೊಂಡಿದ್ದೇನೆ. ಇದು ಎಲ್ಲ ಭಾರತೀಯರಿಗೆ ಹಾಗೂ ಅದರಲ್ಲಿ ಯುವ ಪೀಳಿಗೆಗೆ ಅತ್ಯಂತ ಉತ್ಸಾಹದ ಕ್ಷಣವಾಗಿದೆ. ಇಸ್ರೋದ ಅತ್ಯುತ್ತಮ ಸಾಧನೆಗಳನ್ನು ದಶಕಗಳಿಂದ ನಿರ್ಮಿಸುತ್ತಾ ಬಂದಿದೆ. ಸಾಮೂಹಿಕ ಪ್ರಯತ್ನದ ಫಲ ಯಶಸ್ವಿಯಾಗಿದೆ. ಇಸ್ರೋದ ಪ್ರತಿಯೊಬ್ಬ ಸದಸ್ಯರಿಗೂ ನಾನು ಆತ್ಮೀಯವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಇಸ್ರೋ ಅಧ್ಯಕ್ಷ ಸೋಮನಾಥ ಅವರಿಗೆ ಪತ್ರ ಬರೆದು ಅಭಿನಂದನೆ ತಿಳಿಸಿದ್ದಾರೆ.