* ಕಾಂಗ್ರೆಸ್‌ ಆಳ್ವಿಕೆಯಲ್ಲಿ ಆದಿವಾಸಿ ಪ್ರದೇಶ ಅಭಿವೃದ್ಧಿ ಆಗಲೇ ಇಲ್ಲ* ಆದಿವಾಸಿಗಳ ಬಗ್ಗೆ ಕಾಂಗ್ರೆಸ್‌ಗೆ ಅಸಡ್ಡೆ: ಮೋದಿ ಕಿಡಿ* ಆದರೆ 8 ವರ್ಷದಲ್ಲಿ ಮಹತ್ತರ ಅಭಿವೃದ್ಧಿ ಕಾರ್ಯ: ಪ್ರಧಾನಿ* ಗುಜರಾತ್‌ನಲ್ಲಿ ಆದಿವಾಸಿಗಳ ಪ್ರದೇಶ ಅಭಿವೃದ್ಧಿಗೆ ಮೋದಿ ಶಂಕು

 ನವಸಾರಿ(ಜೂ,11): ‘ಸ್ವಾತಂತ್ರ್ಯದ ನಂತರ ದೇಶವನ್ನು ಬಹುಕಾಲ ಆಳಿದವರು ಆದಿವಾಸಿ ಪ್ರದೇಶಗಳ ಅಭಿವೃದ್ಧಿಯ ಕಡೆ ಗಮನವನ್ನೇ ಕೊಡಲಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದ್ದಾರೆ. ಈ ಮೂಲಕ ಹಿಂದಿನ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಮತ್ತೆ ಹರಿಹಾಯ್ದಿದ್ದಾರೆ.

ಗುಜರಾತ್‌ನ ನವಸಾರಿ ಜಿಲ್ಲೆಯಲ್ಲಿರುವ ಬುಡಕಟ್ಟು ಪ್ರದೇಶದ 3050 ಕೋಟಿ ರು. ಅಭಿವೃದ್ಧಿ ಕೆಲಸಗಳಿಗೆ ಶಂಕುಸ್ಥಾಪನೆ ನೆರವೇರಿಸಿ ‘ಗುಜರಾತ್‌ ಗೌರವ ಅಭಿಯಾನ’ ರಾರ‍ಯಲಿಯಲ್ಲಿ ಮಾತನಾಡಿದ ಅವರು, ‘ಅಭಿವೃದ್ಧಿ ತೀರಾ ಅಗತ್ಯವಾಗಿದ್ದ ಹಿಂದುಳಿದ ಆದಿವಾಸಿ ಪ್ರದೇಶಗಳ ಕಡೆಗೆ ಈ ಹಿಂದೆ ಬಹುಕಾಲ ದೇಶ ಆಳಿದವರು ಗಮನವನ್ನೇ ಹರಿಸಲಿಲ್ಲ. ಈ ಪ್ರದೇಶಗಳಲ್ಲಿ ಸರಿಯಾದ ರಸ್ತೆ ಕೂಡ ಇರಲಿಲ್ಲ. ಆದರೆ ನಮ್ಮ ಸರ್ಕಾರ ಬಂದ ನಂತರ ಈ ಪ್ರದೇಶಗಳ ಅಭಿವೃದ್ಧಿಯ ದಿಕ್ಕನ್ನೇ ಬದಲಿಸಿದೆ’ ಎಂದು ಹೇಳಿದರು.

‘ಆದಿವಾಸಿ ಕುಗ್ರಾಮಗಳಿಗೆ ಈ ಹಿಂದೆ ಲಸಿಕಾಕರಣ ಮಾಡಲು ವರ್ಷಗಳೇ ಬೇಕಾಗಿದ್ದವು. ಆದರೆ ಈಗ ಈ ಪ್ರದೇಶಗಳತ್ತ ಕೂಡ ನಾವು ಗಮನ ಹರಿಸಿದ್ದೇವೆ. ಬಹುತೇಕ ಎಲ್ಲರಿಗೂ 1 ವರ್ಷದಲ್ಲಿ ಇಲ್ಲಿ ಲಸಿಕಾಕರಣವಾಗಿದೆ’ ಎಂದು ಹರ್ಷೋದ್ಗಾರದ ಮಧ್ಯೆ ಹೇಳಿದರು.

ಇದೇ ಭಾಗದ ಮುಖ್ಯಮಂತ್ರಿಯೊಬ್ಬರು ಈ ಹಿಂದೆ ಇದ್ದರು. ಅವರ ಊರಿನಲ್ಲಿ ನೀರಿನ ಟ್ಯಾಂಕ್‌ ಕೂಡ ಇರಲಿಲ್ಲ. ಹ್ಯಾಂಡ್‌ಪಂಪ್‌ ಬಳಸಿ ಜನರು ನೀರು ತರುತ್ತಿದ್ದರು. ಆದರೆ ನಾನು ಮುಖ್ಯಮಂತ್ರಿ ಆದ ನಂತರ ಆ ಊರಿಗೆ ನೀರಿನ ಟ್ಯಾಂಕ್‌ ಕಟ್ಟಿಸಿದೆ’ ಎಂದು ಮೋದಿ ಸ್ಮರಿಸಿದರು.

ಇನ್ನು ಪ್ರತ್ಯೇಕ ಸಮಾರಂಭವೊಂದರಲ್ಲಿ ಆಸ್ಪತ್ರೆಯೊಂದನ್ನು ಉದ್ಘಾಟಿಸಿದ ಮೋದಿ, ‘ನಮ್ಮ ಸರ್ಕಾರ 8 ವರ್ಷದಲ್ಲಿ ಆರೋಗ್ಯ ಕ್ಷೇತ್ರಕ್ಕೆ ಸಾಕಷ್ಟುಆದ್ಯತೆ ನೀಡಿದ್ದೇವೆ’ ಎಂದರು.