ಉನ್ನತ ಅಧಿಕಾರಿಗಳ ಜೊತೆ ಪ್ರಧಾನಿ ಸಭೆದೇಶದಲ್ಲಿ ಕೋವಿಡ್ ಕೇಸ್ ಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆಡಿಸೆಂಬರ್ 24 ರಂದು ಕೊನೆಯ ಬಾರಿಗೆ ನಡೆದಿದ್ದ ಕೋವಿಡ್ ಪರಿಶೀಲನಾ ಸಭೆ
ನವದೆಹಲಿ (ಜ. 9): ದೇಶದಲ್ಲಿ ಕೋವಿಡ್-19 ಕೇಸ್ ಗಳ ಸಂಖ್ಯೆ ದಾಖಲೆಯ ಮಟ್ಟದಲ್ಲಿ ಏರಿಕೆ ಆಗುತ್ತಿದ್ದು, ಈ ಕುರಿತಂತೆ ಭಾನುವಾರ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಪರೆನ್ಸ್ ಮೂಲಕ ಪರಿಶೀಲನಾ ಸಭೆ ನಡೆಸಿದರು. ನೀತಿ ಆಯೋಗ, ಕೇಂದ್ರ ಗೃಹ ಸಚಿವ ಅಮಿತ್ ಷಾ, ಕೋವಿಡ್ ಟಾಸ್ಕ್ ಫೋರ್ಸ್ ನ ಅಧಿಕಾರಿಗಳು ಹಾಗೂ ಕೇಂದ್ರ ಆರೋಗ್ಯ ಸಚಿವ ಮುನ್ಸುಖ್ ಮಾಂಡವಿಯಾ ಸೇರಿದಂತೆ ವಿವಿಧ ರಾಜ್ಯಗಳ ಪ್ರಮುಖ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಏಳು ದಿನಗಳ ಹಿಂದೆ ಹೊಸ ಕೇಸ್ ಗಳ ಸಂಖ್ಯೆ 27,553 ಇದ್ದರೆ, ಶನಿವಾರದ ವೇಳೆಗೆ ಈ ಸಂಖ್ಯೆಯಲ್ಲಿ 1.60 ಲಕ್ಷಕ್ಕೆ ಏರಿಕೆಯಾಗಿದೆ. ಆ ನಿಟ್ಟಿನಲ್ಲಿ ಪ್ರಧಾನಮಂತ್ರಿ ಸಭೆಯ ಕರೆಯಲು ನಿರ್ಧರಿಸಿದ್ದರು. ಪಿಎಂ ಮೋದಿ ಅವರು ಡಿಸೆಂಬರ್ 24 ರಂದು ಕೊನೆಯ ಬಾರಿಗೆ ಕೋವಿಡ್ ಪರಿಶೀಲನಾ ಸಭೆಯನ್ನು ನಡೆಸಿದರು, ಅದರಲ್ಲಿ ಅವರು ದೇಶದಲ್ಲಿ ಸಂಭಾವ್ಯ ಮೂರನೇ ಕೋವಿಡ್ ಅಲೆಯನ್ನು ತಡೆಯುವ ನಿಟ್ಟಿನಲ್ಲಿ 'ಸತರ್ಕ್' (ಎಚ್ಚರಿಕೆ) ಮತ್ತು 'ಸಾವಧಾನ್' (ಜಾಗರೂಕ') ಇರುವಂತೆ ಅಧಿಕಾರಿಗಳಿಗೆ ಎಚ್ಚರಿಸಿದ್ದರು.
"ಹೊಸ ರೂಪಾಂತರದ ದೃಷ್ಟಿಯಿಂದ, ನಾವು 'ಸತರ್ಕ್' ಮತ್ತು 'ಸಾವಧಾನ್' ಆಗಿರಬೇಕು. ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟವು ಮುಗಿದಿಲ್ಲ ಮತ್ತು ಕೋವಿಡ್ ಸುರಕ್ಷಿತ ನಡವಳಿಕೆಯನ್ನು ನಿರಂತರವಾಗಿ ಅನುಸರಿಸುವ ಅಗತ್ಯವು ಇಂದಿಗೂ ಅತ್ಯುನ್ನತ ಪ್ರಾಮುಖ್ಯತೆಯನ್ನು ಹೊಂದಿದೆ, "ಎಂದು ಪ್ರಧಾನಿ ಹೇಳಿದ್ದರು. ಆದರೆ, ಆ ಬಳಿಕ ಭಾರತದ ಸಕ್ರಿಯ ಪ್ರಕರಣಗಳು 80,000ದಿಂದ ಸುಮಾರು ಆರು ಲಕ್ಷಕ್ಕೆ ಹೋಗಿದೆ. ಅದರಲ್ಲೂ ಈ ಬಾರಿ ಫ್ರಂಟ್ ಲೈನ್ ವರ್ಕರ್ ಗಳಾಗಿರುವ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತೆಯರಲ್ಲಿಯೇ ಹೆಚ್ಚಾಗಿ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡಿದೆ. ದೆಹಲಿ ಹಾಗೂ ಮುಂಬೈ ನಗರದಲ್ಲಿ ಸಾಕಷ್ಟು ವೈದ್ಯರಲ್ಲಿ ಕೋವಿಡ್ ಪಾಸಿಟಿವ್ ಲಕ್ಷಣ ಕಾಣಿಸಿದೆ.
ನಾಳೆ ಕೇಂದ್ರ ಆರೋಗ್ಯ ಸಚಿವರ ಸಭೆ: ಕೋವಿಡ್-19 ಮೂರನೇ ಅಲೆಯ ಆತಂಕದ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚವ ಮನ್ಸುಖ್ ಮಾಂಡವಿಯಾ ಅವರು ಸೋಮವಾರ ಎಲ್ಲಾ ರಾಜ್ಯಗಳ ಆರೋಗ್ಯ ಸಚಿವರ ಜೊತೆ ಸಭೆ ನಡೆಸಲಿದ್ದಾರೆ.
