ನವದೆಹಲಿ(ನ.09): ದೇಶ ಕಾತರದಿಂದ ಕಾಯುತ್ತಿದ್ದ ಐತಿಹಾಸಿಕ ಅಯೋಧ್ಯೆ-ಬಾಬರಿ ಮಸೀದಿ ಭೂವಿವಾದದ ತೀರ್ಪನ್ನು ಕೊನೆಗೂ ಸುಪ್ರೀಂಕೋರ್ಟ್ ಪ್ರಕಟಿಸಿದೆ. 

ವಿವಾದಿತ 2.77 ಎಕರೆ ಜಾಗವನ್ನು ರಾಮಲಲ್ಲಾಗೆ  ವಹಿಸಿ ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸಿದೆ. ಈ ಮೂಲಕ ವಿವಾದಿತ ಜಾಗಕ್ಕಾಗಿ ಹೋರಾಡುತ್ತಿದ್ದ ಹಿಂದೂಗಳ ನಂಬಿಕೆಗೆ ಐತಿಹಾಸಿಕ ಜಯ ಲಭಿಸಿದೆ. ಆದರೆ, ಬಾಬರಿ ಮಸೀದಿ ಪ್ರತ್ಯೇಕ ಜಾಗವನ್ನು ಕಲ್ಪಿಸಲು ಕೋರ್ಟ್ ಸರಕಾರಕ್ಕೆ ಸೂಚಿಸಿದೆ.   

ವಿವಾದಿತ ಸ್ಥಳದಲ್ಲಿ ರಾಮನ ಜನನ ಸತ್ಯ ಎಂದಿರುವ ಸುಪ್ರೀಂ ಕೋರ್ಟ್, ಕಾನೂನಾತ್ಮಕ ನಿಯಮ ರೂಪಿಸಿ ಮಂದಿರ ನಿರ್ಮಾಣಕ್ಕೆ ಮುಂದಾಗುವಂತೆ ಸರ್ಕಾರಕ್ಕೆ ಸ್ಪಷ್ಟ ನಿರ್ದೇಶಿಸಿದೆ.

ಇನ್ನು ಸುಪ್ರೀಂ ತೀರ್ಪಿನ ಕುರಿತು ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಘನ ನ್ಯಾಯಾಲಯದ ತೀರ್ಪು ಕೂಡಿ ಬಾಳುವ ಸಂದೇಶ ರವಾನಿಸಿದೆ ಎಂದು ಅಭಿಪ್ರಾಯಪಟ್ಟರು.

ಸುಪ್ರೀಂ ತೀರ್ಪನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸಿದ ಪ್ರಧಾನಿ ಮೋದಿ, ನವಭಾರತದ ನಿರ್ಮಾಣಕ್ಕೆ ಇಂದಿನ ಸುಪ್ರೀಂ ತೀರ್ಪು ದಾರಿದೀಪ ಎಂದು ಬಣ್ಣಿಸಿದರು.

ಹಳೆಯ ವೈಷಮ್ಯ ಮರೆತು ಎಲ್ಲರೂ ಒಂದಾಗಿ ಭಾರತದ ಭವಿಷ್ಯವನ್ನು ನಿರ್ಮಿಸಬೇಕಿದೆ ಎಂದು ಮೋದಿ ದೇಶದ ಜನರಲ್ಲಿ ಮನವಿ ಮಾಡಿದರು.

ಸುಪ್ರೀಂ ತೀರ್ಪನ್ನು ಸ್ವೀಕರಿಸುತ್ತಾ ಉಜ್ವಲ ಭವಿಷ್ಯದೆಡೆಡೆಗೆ ಕೂಡಿ ಹೆಜ್ಜೆ ಹಾಕುವ ಕಾಲ ಬಂದಾಗಿದೆ ಎಂದು ಪ್ರಧಾನಿ  ಮೋದಿ ನುಡಿದರು.

ಎಲ್ಲ ಸಮುದಾಯದ ಜನ ಒಟ್ಟಾಗಿ ಭವಿಷ್ಯವನ್ನು ನಿರ್ಮಿಸೋಣ ಎಂದು ಕರೆ ನೀಡಿದ ಪ್ರಧಾನಿ, ಸುಪ್ರೀಂ ಕೋರ್ಟ್ ಅಣತಿಯನ್ನು ಪಾಲಿಸುವ ಭರವಸೆ ಕೂಡ ನೀಡಿದರು.