ಭಾರತದ ರಾಷ್ಟ್ರಪತಿ ಚುನಾವಣೆ ಜುಲೈ 18ಕ್ಕೆ ನಡೆಯಲಿದೆ. ಎನ್‌ಡಿಎ ಕೂಟದಿಂದ ದ್ರೌಪದಿ ಮುರ್ಮು ಕಣದಲ್ಲಿದ್ದರೆ, ವಿಪಕ್ಷಗಳ ಅಭ್ಯರ್ಥಿಯಾಗಿ ಯಶವಂತ್ ಸಿನ್ಹ ಕಣದಲ್ಲಿದ್ದಾರೆ. ರಾಷ್ಟ್ರಪತಿ ಚುನಾವಣೆ, ರಾಷ್ಟ್ರಪತಿ ಸ್ಥಾನ ಹಾಗೂ ಈ ಹಿಂದಿನ ರಾಷ್ಟ್ರಪತಿಗಳ ಹಲವು ಕುತೂಹಲಕಾರಿ ಮಾಹಿತಿ ಇಲ್ಲಿದೆ.

ನವದೆಹಲಿ(ಜು.17): ಭಾರತದ 15ನೇ ರಾಷ್ಟ್ರಪತಿ ಆಯ್ಕೆಗೆ ಜುಲೈ 18ಕ್ಕೆ ಚುನಾವಣೆ ನಡೆಯಲಿದೆ. ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಹಾಗೂ ವಿಪಕ್ಷಗಳ ಅಭ್ಯರ್ಥಿ ಯಶವಂತ್ ಸಿನ್ಹಾ ನಡುವೆ ತೀವ್ರ ಸ್ಪರ್ಧೆ ಎರ್ಪಟ್ಟಿದೆ. ಆದರೆ ಎನ್‌ಡಿಎ ಬಹುಮತ ಹೊಂದಿರುವ ಕಾರಣ ದ್ರೌಪದಿ ಮುರ್ಮು ಗೆಲುವು ಸುಲಭ ಎನ್ನಲಾಗುತ್ತಿದೆ. ರಾಷ್ಟ್ರಪತಿ ಚುನಾವಣೆ ಹಿನ್ನಲೆಯಲ್ಲಿ ಈ ಸ್ಥಾನ ಹಾಗೂ ಹಿಂದಿನ ರಾಷ್ಟ್ರಪತಿಗಳ ಕುರಿತ ಹಲವು ಕುತೂಹಲಕಾರಿ ಮಾಹಿತಿ ಇಲ್ಲಿದೆ. ಹಾಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸೇರಿ ಇದುವರೆಗೆ 14 ರಾಷ್ಟ್ರಪತಿಗಳನ್ನು ಚುನಾವಣೆ ಮೂಲಕ ಆಯ್ಕೆ ಮಾಡಲಾಗಿದೆ. 12 ರಾಷ್ಟ್ರಪತಿಗಳು ಸಂಪೂರ್ಣ ಅವಧಿ ಮುಗಿಸಿದ್ದರೆ, ಇಬ್ಬರು ರಾಷ್ಟ್ರಪತಿಗಳು ಸಂಪೂರ್ಣ ಅವಧಿ ಮುಗಿಸಿಲ್ಲ. ಭಾರತದ ಮೊದಲ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಎರಡು ಬಾರಿ ಆಯ್ಕಯಾದ ಭಾರತದ ಏಕೈಕ ರಾಷ್ಟ್ರಪತಿಯಾಗಿದ್ದಾರೆ.

ರಾಷ್ಟ್ರಪತಿಯಾಗಿ ಅತೀ ಹೆಚ್ಚು ಕಾಲ ಅಧಿಕಾರದಲ್ಲಿದ್ದ ಕೀರ್ತಿ ರಾಜೇಂದ್ರ ಪ್ರಸಾದ್ ಅವರಿಗೆ ಸಲ್ಲುತ್ತದೆ. ರಾಜೇಂದ್ರ ಪ್ರಸಾದ್ 12 ವರ್ಷ ಹಾಗೂ 107 ದಿನ ರಾಷ್ಟ್ರಪತಿಯಾಗಿದ್ದರು. 1952 ಹಾಗೂ 1957ರಲ್ಲಿ ರಾಜೇಂದ್ರ ಪ್ರಸಾದ್ ಮರು ಆಯ್ಕೆಯಾಗಿದ್ದರು. ರಾಷ್ಟ್ರಪತಿಗಳಾದ ಜಾಕೀರ್ ಹುಸೆನ್ ಹಾಗೂ ಫಕ್ರುದ್ದೀನ್ ಅಲಿ ಹುಸೆನ್ ಇಬ್ಬರು ಅವದಿ ಮುಗಿಯುವ ಮುನ್ನವೇ ನಿಧನರಾಗಿದ್ದಾರೆ. 1969ರಲ್ಲಿ ರಾಷ್ಟ್ರಪತಿ ಜಾಕಿರ್ ಹುಸೆನ್ ಅಕಾಲಿಕ ನಿಧನದಿಂದ ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಮೊಹಮ್ಮದ್ ಹಿದಾಯುತುಲ್ಹ 35 ದಿನಗಳ ಕಾಲ ಹಂಗಾಮಿ ರಾಷ್ಟ್ರಪತಿಯಾಗಿದ್ದರು. 1979 ಹಾಗೂ 1984ರಲ್ಲಿ ಹಿದಾಯುತಲ್ಹ ಉಪ ರಾಷ್ಟ್ರಪತಿಗಳಾಗಿ ಸೇವೆ ಸಲ್ಲಿಸಿದ್ದಾರೆ.

ದ್ರೌಪದಿ ಸಭೆಗೆ ಗೈರಾದ ರಾಜ್ಯದ 21 ಶಾಸಕರ ಬಳಿ ನಿಖರ ಕಾರಣ ಕೇಳಿದ ಬಿಜೆಪಿ

1977 ರಲ್ಲಿ ನೀಲಮ್ ಸಂಜೀವ ರೆಡ್ಡಿ ಅವಿರೋಧವಾಗಿ ಆಯ್ಕೆಯಾದ ಭಾರತದ ರಾಷ್ಟ್ರಪತಿಯಾಗಿದ್ದಾರೆ. ಈ ಚುನಾವಣೆಯಲ್ಲಿ ನೀಲಮ್ ಸಂಜೀವ ರೆಡ್ಡಿ ಜೊತೆ ಇತರ 36 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಆದರೆ ನೀಲಮ್ ಸಂಜೀವ ರೆಡ್ಡಿ ನಾಮಪತ್ರ ಹೊರತು ಪಡಿಸಿ ಇನ್ನುಳಿದ ಎಲ್ಲಾ ನಾಮಪತ್ರಗಳು ತಿರಸ್ಕೃತಗೊಂಡಿತ್ತು. 1962ರಲ್ಲಿ ಉಪ ರಾಷ್ಟ್ರಪತಿಯಾಗಿದ್ದ ವಿ ರಾಧಾಕೃಷ್ಣನ್ ರಾಷ್ಟ್ರಪತಿಯಾಗಿದ್ದಾರೆ. ಇದು ಉಪ ರಾಷ್ಟ್ರಪತಿಯಾಗಿ ಬಳಿಕ ರಾಷ್ಟ್ರಪತಿಯಾಗಿ ಮೊದಲ ಘಟನೆಯಾಗಿತ್ತು. ಬಳಿಕ ಜಾಕಿರ್ ಹುಸೆನ್ ಹಾಗೂ ವಿವಿ ಗಿರಿ ಈ ಸಾಧನೆ ಮಾಡಿದ್ದಾರೆ.

ಈ ಬಾರಿಯ ಚುನಾವಣೆ ರಹಸ್ಯ
ಬಿಜೆಪಿ ನೇತೃತ್ವ ಎನ್‌ಡಿಎ ಅಭ್ಯರ್ಥಿಯಾದ ದ್ರೌಪದಿ ಮುರ್ಮು ಅವರು ಜು.18ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಯಲ್ಲಿ ಸುಮಾರು ಶೇ.61ರಷ್ಟುಮತಗಳನ್ನು ಪಡೆದು ಗೆಲುವು ಸಾಧಿಸುವುದು ಬಹುತೇಕ ಖಚಿತವಾಗಿದೆ. ಎನ್‌ಡಿಎ ಮಿತ್ರಪಕ್ಷಗಳ ಬೆಂಬಲ ಜೊತೆಜೊತೆಗೆ, ಬಿಜೆಡಿ, ವೈಎಸ್‌ಆರ್‌-ಸಿಪಿ, ಬಿಎಸ್‌ಪಿ, ಎಐಎಡಿಎಂಕೆ, ಟಿಡಿಪಿ, ಜೆಡಿಎಸ್‌, ಶಿರೋಮಣಿ ಅಕಾಲಿದಳ, ಶಿವಸೇನಾ, ಜೆಎಂಎಂ ಮೊದಲಾದ ಪ್ರಾಂತೀಯ ಪಕ್ಷಗಳು ಮುರ್ಮುಗೆ ಬೆಂಬಲ ಘೋಷಿಸಿದ್ದು, ಅವರು ಸುಮಾರು 2/3ರಷ್ಟುಬಹುಮತದೊಂದಿಗೆ ಭಾರತದ ಪ್ರಥಮ ಬುಡಕಟ್ಟು ಸಮುದಾಯದ ಮಹಿಳಾ ರಾಷ್ಟ್ರಪತಿ ಎನಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ .

ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧಂಕರ್ NDA ಉಪ ರಾಷ್ಟ್ರಪತಿ ಅಭ್ಯರ್ಥಿ

ಮುರ್ಮು ನಾಮಪತ್ರ ಸಲ್ಲಿಸುವಾಗ ಅವರು ಶೇ. 50ರಷ್ಟುಮತ ಪಡೆಯುವ ನಿರೀಕ್ಷೆಯಿದ್ದು, ಹಲವಾರು ಪ್ರಾಂತೀಯ ಪಕ್ಷಗಳು ಕೂಡ ಕೈ ಜೋಡಿಸಿದ ಹಿನ್ನೆಲೆಯಲ್ಲಿ ಅವರಿಗೆ ಸಿಗುವ ಮತದ ಪ್ರಮಾಣ ಶೇ.61ಕ್ಕೆ ಏರಿಕೆಯಾಗಿದೆ. ಪ್ರಾದೇಶಿಕ ಪಕ್ಷಗಳನ್ನು ಸೇರಿಸಿ ದ್ರೌಪದಿ ಬಳಿ 10,86,431 ಮತಗಳ ಬೆಂಬಲವಿದೆ. ರಾಷ್ಟ್ರಪತಿ ಚುನಾವಣಾ ಫಲಿತಾಂಶ ಜು.21 ರಂದು ಪ್ರಕಟವಾಗಲಿದೆ.