Asianet Suvarna News Asianet Suvarna News

ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧಂಕರ್ NDA ಉಪ ರಾಷ್ಟ್ರಪತಿ ಅಭ್ಯರ್ಥಿ

ಪಶ್ಚಿಮ ಬಂಗಾಳದ ಹಾಲಿ ರಾಜ್ಯಪಾಲರಾಗಿರುವ ಜಗದೀಪ್‌  ಧಂಕರ್‌ ಮುಂಬರುವ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿರಲಿದ್ದಾರೆ. ಬಿಜೆಪಿಯ ಸಂಸದೀಯ ಮಂಡಳಿ ಸಭೆಯ ಬಳಿಕ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಈ ಘೋಷಣೆ ಮಾಡಿದ್ದಾರೆ.

NDAs candidate for the post of Vice President of India to be Jagdeep Dhankhar says BJP chief JP Nadda san
Author
Bengaluru, First Published Jul 16, 2022, 7:55 PM IST

ನವದೆಹಲಿ (ಜುಲೈ 16): ಪಶ್ಚಿಮ ಬಂಗಾಳದ ರಾಜ್ಯಪಾಲ, ರಾಜಸ್ಥಾನದ ಜಗದೀಪ್‌  ಧಂಕರ್‌ ಮುಂಬರುವ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟದ ಅಭ್ಯರ್ಥಿಯಾಗಿರಲಿದ್ದಾರೆ. ಶನಿವಾರ ನಡೆದ ಬಿಜೆಪಿಯ ಸಂಸದೀಯ ಮಂಡಳಿ ಸಭೆಯ ಬಳಿಕ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಈ ಘೋಷಣೆ ಮಾಡಿದ್ದಾರೆ.ರೈತನ ಮಗನಾಗಿರುವ ಜಗದೀಪ್‌ ಧಂಕರ್‌ ಅಂದಾಜು ಮೂರು ದಶಕಗಳಿಂದ ಸಾರ್ವಜನಿಕ ಜೀವನದಲ್ಲಿದ್ದಾರೆ. ರಾಜಕೀಯಕ್ಕೆ ಬರುವ ಮುನ್ನ ವಕೀಲರಾಗಿ ಸೇವೆ ಸಲ್ಲಿಸಿದ್ದ ಇವರು ರಾಜಸ್ಥಾನ  ಹೈಕೋರ್ಟ್‌ನ ಬಾರ್‌ ಅಸೋಸಿಯೇಷನ್‌ನ ಅತ್ಯಂತ ಕಿರಿಯ ಅಧ್ಯಕ್ಷ ಎನಿಸಿಕೊಂಡಿದ್ದರು. 1990ರಲ್ಲಿ ಕೇಂದ್ರ ಸಚಿವರಾಗಿಯೂ ಕಾರ್ಯನಿರ್ವಹಿಸಿದ ಅನುಭವ ಇವರಿಗಿದೆ. ಈಗ ಪ್ರಸ್ತುತ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಸ್ಥಾನದ ಜುಂಜುನು ಜಿಲ್ಲೆಯ ದೂರದ ಹಳ್ಳಿಯೊಂದರಲ್ಲಿ ಕೃಷಿಕ ಕುಟುಂಬದಲ್ಲಿ ಜನಿಸಿದ್ದ ಇವರು,  ಸಾರ್ವಜನಿಕ ಜೀವನವನ್ನು ಪ್ರವೇಶಿಸುವ ಮೊದಲು ಯಶಸ್ವಿ ವೃತ್ತಿಪರರಾಗಿ ಸೇವೆ ಸಲ್ಲಿಸಿದ್ದರು. ಪ್ರಧಾನಿ ನರೇಂದ್ರ ಮೋದಿ, ಹಿರಿಯ ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್ ಮತ್ತು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಸೇರಿದಂತೆ ಹಲವರು ಶನಿವಾರ ನಡೆದ ಸಂಸದೀಯ ಮಂಡಳಿಯ ಸಭೆಯಲ್ಲಿ ಭಾಗವಹಿಸಿದ್ದರು.

ಉಪರಾಷ್ಟ್ರಪತಿ ಚುನಾವಣೆಗೆ ಆಗಸ್ಟ್ 6 ರಂದು ಮತದಾನ ನಡೆಯಲಿದೆ: ಉಪರಾಷ್ಟ್ರಪತಿ (Vice President Election) ಚುನಾವಣೆಗೆ ಆಸಕ್ತ ಅಭ್ಯರ್ಥಿಗಳು ಜುಲೈ 19 ರವರೆಗೆ ನಾಮಪತ್ರ ಸಲ್ಲಿಸಬಹುದು. ಜುಲೈ 20 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಉಪರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳು ಜುಲೈ 22 ರವರೆಗೆ ತಮ್ಮ ನಾಮಪತ್ರಗಳನ್ನು ಹಿಂಪಡೆಯಲು ಅವಕಾಶ ಇರಲಿದೆ. ದೇಶದ ಮುಂದಿನ ಉಪರಾಷ್ಟ್ರಪತಿಗೆ ಆಗಸ್ಟ್‌ 6 ರಂದು ಚುನಾವಣೆ ನಡೆಯಲಿದೆ. ಆಗಸ್ಟ್ 6 ರಂದು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಉಪಾಧ್ಯಕ್ಷರ ಆಯ್ಕೆಗೆ ಮತದಾನ ನಡೆಯಲಿದೆ. ಮತದಾನ ಪ್ರಕ್ರಿಯೆ ಮುಗಿದ ಬಳಿಕ ಮತ ಎಣಿಕೆ ಕೂಡ ಅದೇ ದಿನ ನಡೆಯಲಿದ್ದು, ಚುನಾವಣಾ ಫಲಿತಾಂಶವೂ ಬರಲಿದೆ. ಉಪರಾಷ್ಟ್ರಪತಿ ಹುದ್ದೆಗೆ ಅಭ್ಯರ್ಥಿಯ ಹೆಸರನ್ನು ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳು ಒಪ್ಪಿ ಒಮ್ಮತಕ್ಕೆ ಬಂದರೆ ಮತದಾನದ ಅಗತ್ಯವಿರುವುದಿಲ್ಲ.

ಟ್ವೀಟ್‌ ಮೂಲಕ ಶುಭ ಹಾರೈಸಿದ ಪ್ರಧಾನಿ: ಜಗದೀಪ್ ಧನಕರ್  ಅವರು ನಮ್ಮ ಸಂವಿಧಾನದ ಬಗ್ಗೆ ಉತ್ತಮ ಜ್ಞಾನವನ್ನು ಹೊಂದಿದ್ದಾರೆ. ಅವರು ಶಾಸಕಾಂಗ ವ್ಯವಹಾರಗಳ ಬಗ್ಗೆಯೂ ಚೆನ್ನಾಗಿ ತಿಳಿದಿದ್ದಾರೆ. ಅವರು ರಾಜ್ಯಸಭೆಯಲ್ಲಿ ಉತ್ತಪ ಅಧ್ಯಕ್ಷರಾಗುತ್ತಾರೆ ಮತ್ತು ರಾಷ್ಟ್ರೀಯ ಪ್ರಗತಿಯನ್ನು ಹೆಚ್ಚಿಸುವ ಉದ್ದೇಶದಿಂದ ಸದನದ ಕಲಾಪಗಳಿಗೆ ಮಾರ್ಗದರ್ಶನ ನೀಡುತ್ತಾರೆ ಎಂದು ನನಗೆ ಖಾತ್ರಿಯಿದೆ. ರೈತನ ಮಗ ಜಗದೀಪ್ ಧಂಕರ್‌ ಅವರು ತಮ್ಮ ನಮ್ರತೆಗೆ ಹೆಸರುವಾಸಿಯಾಗಿದ್ದಾರೆ. ಅವರು ನಮ್ಮೊಂದಿಗೆ ಸುಪ್ರಸಿದ್ಧ ಕಾನೂನು, ಶಾಸಕಾಂಗ ಮತ್ತು ಗವರ್ನಟೋರಿಯಲ್ ಅನುಭವವನ್ನೂ ಹೊಂದಿದ್ದಾರೆ. ರೈತರು, ಯುವಕರು, ಮಹಿಳೆಯರು ಮತ್ತು ಹಿಂದುಳಿದವರ ಏಳಿಗೆಗಾಗಿ ಅವರು ಸದಾ ಶ್ರಮಿಸಿದ್ದಾರೆ. ಅವರೇ ನಮ್ಮ ವಿಪಿ ಅಭ್ಯರ್ಥಿಯಾಗುವುದು ಖುಷಿ ತಂದಿದೆ ಎಂದು ಪ್ರಧಾನಿ ಹೇಳಿದ್ದಾರೆ.

ಆಗಸ್ಟ್‌ 10ಕ್ಕೆ ವೆಂಕಯ್ಯ ನಾಯ್ಡು ಅವಧಿ ಪೂರ್ಣ: ಇಂತಹ ಪರಿಸ್ಥಿತಿಯಲ್ಲಿ ಒಮ್ಮತದ ಮೂಲಕ ಉಪಾಧ್ಯಕ್ಷರನ್ನೂ ಅವಿರೋಧವಾಗಿ ಆಯ್ಕೆ ಮಾಡಬಹುದು. ಹಾಗಿದ್ದರೂ ಇದರ ಸಾಧ್ಯತೆಗಳು ಕಡಿಮೆ ಎಂದು ಕಾಣುತ್ತಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ದೇಶದ ಹಾಲಿ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರ ಅವಧಿ ಆಗಸ್ಟ್ 10ಕ್ಕೆ ಕೊನೆಗೊಳ್ಳಲಿದೆ.  ವೆಂಕಯ್ಯ ನಾಯ್ಡು ಅವರ ಅವಧಿ ಪೂರ್ಣಗೊಳ್ಳುವ ನಾಲ್ಕು ದಿನಗಳ ಮುನ್ನ ಉಪರಾಷ್ಟ್ರಪತಿ ಯಾರಾಗಲಿದ್ದಾರೆ ಎನ್ನುವುದು ನಿರ್ಧಾರವಾಗಲಿದೆ.

ಇದನ್ನೂ ಓದಿ: ಬಿಜೆಪಿ ವಿರುದ್ಧ ಜಿಹಾದ್ ಹೇಳಿಕೆ, ಮಮತಾ ವಿರುದ್ಧ ರಾಜ್ಯಪಾಲ ಸೇರಿ ಬಿಜೆಪಿ ಗರಂ!

ಯಾರಿವರು ಜಗದೀಪ್‌ ಧಂಕರ್‌: 1951ರ ಮೇ 18 ರಂದು ಜನಿಸಿದ್ದ ಜಗದೀಪ್ ಧಂಕರ್‌ (agdeep Dhankhar) ಅವರು ತಮ್ಮ ಶಾಲಾ ಶಿಕ್ಷಣವನ್ನು ಚಿತ್ತೋರ್‌ಗಢದ (Chittorgarh) ಸೈನಿಕ ಶಾಲೆಯಲ್ಲಿ ಪೂರ್ಣಗೊಳಿಸಿದರು. ಭೌತಶಾಸ್ತ್ರದಲ್ಲಿ ಪದವಿ ಮುಗಿಸಿದ ನಂತರ ಅವರು ರಾಜಸ್ಥಾನ ವಿಶ್ವವಿದ್ಯಾನಿಲಯದಿಂದ (University of Rajasthan) ಎಲ್‌ಎಲ್‌ಬಿ (LLB) ವ್ಯಾಸಂಗ ಮಾಡಿದರು. ವೃತ್ತಿಪರರಾಗಿದ್ದ ಅವಧಿಯಲ್ಲಿ ರಾಜಸ್ಥಾನದ ಪ್ರಮುಖ ವಕೀಲರಲ್ಲಿ ಒಬ್ಬರಾದರು. ಜಗದೀಪ್ ಧನಕರ್ ಅವರು ರಾಜಸ್ಥಾನ ಹೈಕೋರ್ಟ್ ಮತ್ತು ಭಾರತದ ಸುಪ್ರೀಂ ಕೋರ್ಟ್ ಎರಡರಲ್ಲೂ ಅಭ್ಯಾಸ ಮಾಡಿದ್ದಾರೆ.

ಇದನ್ನೂ ಓದಿ: ಪಶ್ಚಿಮ ಬಂಗಾಳ ರಾಜ್ಯಾಪಾಲ ಜಗದೀಪ್ ಧನ್ಕರ್‌ಗೆ ಮಲೇರಿಯಾ, ದೆಹಲಿ ಏಮ್ಸ್ ಆಸ್ಪತ್ರೆ ದಾಖಲು!

1989 ರ ಲೋಕಸಭಾ ಚುನಾವಣೆಯಲ್ಲಿ ಜುಂಜುನುದಿಂದ ಸಂಸತ್ ಸದಸ್ಯರಾಗಿ ಆಯ್ಕೆಯಾದ ನಂತರ ಅವರು ಸಾರ್ವಜನಿಕ ಜೀವನವನ್ನು ಪ್ರವೇಶಿಸಿದರು. ಆ ಬಳಿಕ ಅವರು, 1990 ರಲ್ಲಿ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರಾಗಿಯೂ ಸೇವೆ ಸಲ್ಲಿಸಿದರು. 1993 ರಲ್ಲಿ ಅವರು ಅಜ್ಮೀರ್ ಜಿಲ್ಲೆಯ ಕಿಶನ್ಗಢ್ ಕ್ಷೇತ್ರದಿಂದ ರಾಜಸ್ಥಾನ ವಿಧಾನಸಭೆಗೆ ಆಯ್ಕೆಯಾದರು. ಜುಲೈ 2019 ರಲ್ಲಿ, ಅವರು ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ( Governor of West Bengal) ನೇಮಕಗೊಂಡರು. ಪಶ್ಚಿಮ ಬಂಗಾಳದಲ್ಲಿ ಉತ್ತಮ ಸೇವೆ ನೀಡುವ ಮೂಲಕ ಜನಪರ ರಾಜ್ಯಪಾಲ ಎಂದೂ ಹೆಸರು ಮಾಡಿದ್ದಲ್ಲದೆ, ಸಾರ್ವಜನಿಕ ಕಲ್ಯಾಣದ ಸಮಸ್ಯೆಗಳನ್ನು ಸ್ಥಳೀಯ ಸರ್ಕಾರಕ್ಕೆ ಎತ್ತಿ ತೋರಿಸಿದ್ದರು. 

Follow Us:
Download App:
  • android
  • ios