Republic Day 2022: ಕೋವಿಡ್ ಯೋಧರು, ಕೇಂದ್ರ ಸೈನಿಕರ ಸೇವೆಗೆ Ram Nath Kovind ಸಲಾಂ!
*ಭಾರತೀಯತೆಗೆ ರಾಷ್ಟ್ರಪತಿ ಗೌರವ ಸಮರ್ಪಣೆ
*ಸಂಕಷ್ಟದಲ್ಲಿದ್ದವರಿಗೆ ನೆರವು ಚಾಚಿದ ಮೋದಿ ಸರ್ಕಾರಕ್ಕೆ ಶಹಬ್ಬಾಸ್
*ನೇತಾಜಿ ಸ್ಮರಿಸಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್
ನವದೆಹಲಿ (ಜ. 26): ದೇಶದ 73ನೇ ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ದೇಶದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು, ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಕಾರ್ಯವೈಖರಿ, ದೇಶದ ಗಡಿ ಕಾಯುವ ಯೋಧರು ಹಾಗೂ ಕೊರೋನಾ ನಿರ್ಮೂಲನೆಗಾಗಿ ಹಗಲಿರುಳು ಶ್ರಮಿಸುತ್ತಿರುವ ಆರೋಗ್ಯ ಕಾರ್ಯಕರ್ತರ ಬಗ್ಗೆ ಮೆಚ್ಚುಗೆಗಳ ಸುರಿಮಳೆ ಸುರಿಸಿದರು. ಮಂಗಳವಾರ ಸಂಜೆ 7.30ರ ಸುಮಾರಿಗೆ ದೇಶವನ್ನುದ್ದೇಶಿಸಿ ಭಾಷಣ ಮಾಡಿದ ಅವರು, ಮೈಕೊರೆಯುವ ಚಳಿಯಿರುವ ಹಿಮಾಲಯ ಹಾಗೂ ತಳಮಳಗೊಳಿಸುವ ಭಾರೀ ಉಷ್ಣಾಂಶವಿರುವ ಮರುಭೂಮಿಯಂಥ ದೇಶದ ಭದ್ರತೆಗಾಗಿ ಯೋಧರು ತಮ್ಮ ಕುಟುಂಬಗಳನ್ನು ತೊರೆದು ಗಡಿಗಳಲ್ಲಿ ಹಗಲಿರುಳು ಶ್ರಮ ವಹಿಸುತ್ತಿದ್ದಾರೆ. ತನ್ಮೂಲಕ ತಾಯಿನಾಡಿನ ರಕ್ಷಣೆ ಮಾಡುತ್ತಿದ್ದಾರೆ. ದೇಶದ ಹೆಮ್ಮೆಯ ಪರಂಪರೆಯನ್ನು ನಮ್ಮ ಭದ್ರತಾ ಸಿಬ್ಬಂದಿ ಮತ್ತು ಯೋಧರು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ ಎಂದು ಹೇಳಿದರು.
ಕೊರೋನಾದಿಂದ ಆರಂಭವಾದ ಸಾಮಾಜಿಕ ಅಂತರವು ನಮ್ಮನ್ನು ಪರಸ್ಪರ ತೀರಾ ಹತ್ತಿರಕ್ಕೆ ತಂದು ನಿಲ್ಲಿಸಿದೆ. ನಾವು ಪರಸ್ಪರವಾಗಿ ಒಬ್ಬರ ಮೇಲೆ ಮತ್ತೊಬ್ಬರು ಅದೆಷ್ಟುಅವಲಂಬಿತರಾಗಿದ್ದೇವೆ ಎಂದು ತಿಳಿಯಲು ನೆರವಾಯಿತು. ವೈದ್ಯರು, ದಾದಿಯರು ಸೇರಿದಂತೆ ಇತರರು ಕೋವಿಡ್ ವಿರುದ್ಧ ಸೆಣಸಾಡಿದರು. ಕೊರೋನಾ ಸೋಂಕಿತರ ಚಿಕಿತ್ಸೆ ವೇಳೆ ತಾವೂ ಸಹ ಸೋಂಕಿಗೆ ತುತ್ತಾಗುತ್ತೇವೆ ಎಂಬುದು ತಿಳಿದಿದ್ದಾಗ್ಯೂ, ನಮ್ಮ ವೈದ್ಯಕೀಯ ಸಿಬ್ಬಂದಿ ಕಠಿಣ ಸಂದರ್ಭದಲ್ಲಿ ಸುದೀರ್ಘ ಅವಧಿಯಲ್ಲಿ ಕಾರ್ಯ ನಿರ್ವಹಿಸಿದರು ಎಂದು ರಾಷ್ಟ್ರಪತಿ ಕೋವಿಂದ್ ಅವರು ಮೆಚ್ಚುಗೆಗಳ ಸುರಿಮಳೆಗೆರೆದರು.
ಇದನ್ನೂ ಓದಿ: One Nation One Election: ಬೇರೆ ಬೇರೆ ಸಮಯದಲ್ಲಿ ಚುನಾವಣೆ ನಡೆದರೆ ಅಭಿವೃದ್ಧಿಗೆ ಅಡ್ಡಿ: ಮೋದಿ!
ನೇತಾಜಿ ಸ್ಮರಿಸಿದ ಕೋವಿಂದ್: 2 ದಿನಗಳ ಹಿಂದಷ್ಟೇ (ಜ.23ರಂದು) ನಾವು ಜೈಹಿಂದ್ ಘೋಷಣೆಗೆ ಹೆಚ್ಚು ಬಲ ತುಂಬಿದ ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರಬೋಸ್ ಅವರ 125ನೇ ಜಯಂತಿ ಆಚರಿಸಿದೆವು. ಸ್ವಾತಂತ್ರ್ಯೋತ್ಸವಕ್ಕಾಗಿನ ಅವರ ತುಡಿತ ಹಾಗೂ ಭಾರತವನ್ನು ಹೆಮ್ಮೆಯ ರಾಷ್ಟ್ರವಾಗಿ ಮಾಡುವ ಅವರ ಮಹತ್ವಾಕಾಂಕ್ಷೆಯು ನಮ್ಮೆಲ್ಲರಿಗೂ ಸ್ಫೂರ್ತಿದಾಯಕ ಎಂದು ಹೇಳಿದರು.
ದೂರದರ್ಶನದಲ್ಲಿ ಗಣರಾಜ್ಯೋತ್ಸವದ ನೇರ ಪ್ರಸಾರ: ಭಾರತವು ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ತನ್ನ 75 ನೇ ಸ್ವಾತಂತ್ರ್ಯದ ಸಂಭ್ರಮಾಚರಣೆಯಾಗಿ ಆಚರಿಸುತ್ತದೆ, ದೂರದರ್ಶನದಿಂದ ಪ್ರಸಾರವಾಗುವ ಈ ವರ್ಷದ ಗಣರಾಜ್ಯೋತ್ಸವವು ದೊಡ್ಡ ಪ್ರಮಾಣದಲ್ಲಿರುವುದಲ್ಲದೆ, ವಿಶಿಷ್ಟ ವೈಶಿಷ್ಟ್ಯಗಳೊಂದಿಗೆ ಸಜ್ಜುಗೊಳಿಸಲ್ಪಡುತ್ತದೆ. ಭಾರತದ ಸ್ವಾತಂತ್ರ್ಯದ 75 ನೇ ವರ್ಷದ ಸ್ಮರಣಾರ್ಥ ಭಾರತೀಯ ವಾಯುಪಡೆಯ 75 ವಿಮಾನಗಳ ಬೃಹತ್ ಫ್ಲೀಟ್‌ನ ವಿವಿಧ ಸಾಹಸಗಳ ನೇರ ಪ್ರಸಾರದ ಜೊತೆಗೆ ಫ್ಲೈ-ಪಾಸ್ಟ್‌ಗಳ ಹೊಸ ಮುಖಗಳನ್ನು ಪ್ರದರ್ಶಿಸಲು ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿದೆ.
ಈ ವರ್ಷ ಗಣರಾಜ್ಯೋತ್ಸವದ ಕವರೇಜ್‌ಗಾಗಿ ನಿಯೋಜಿಸಲಾದ 59 ಕ್ಯಾಮೆರಾಗಳು ಮತ್ತು 160 ಕ್ಕೂ ಹೆಚ್ಚು ಸಿಬ್ಬಂದಿ ರಾಷ್ಟ್ರಪತಿ ಭವನದಿಂದ ರಾಜ್‌ಪಥ್ ಮೂಲಕ ಇಂಡಿಯಾ ಗೇಟ್‌ನಲ್ಲಿರುವ ರಾಷ್ಟ್ರೀಯ ಯುದ್ಧ ಸ್ಮಾರಕದವರೆಗೆ ದೂರದರ್ಶನ ಮಾಡಿದ ಬೃಹತ್ ವ್ಯವಸ್ಥೆಗಳನ್ನು ಪ್ರತಿಬಿಂಬಿಸುತ್ತವೆ.
ಇದನ್ನೂ ಓದಿ: Republic Day 2022: ಹಲವು ಹೊಸತನಗಳ ಗಣರಾಜ್ಯ ಸಂಭ್ರಮ
ಗಣರಾಜ್ಯೋತ್ಸವದ ಎಲ್ಲಾ ಅಂಶಗಳ ದೋಷರಹಿತ ಕವರೇಜ್ ಅನ್ನು ಎಲ್ಲಾ ಕೋನಗಳಿಂದ ಖಚಿತಪಡಿಸಿಕೊಳ್ಳುವ ಉದ್ದೇಶದಿಂದ, ನವೆಂಬರ್ 2021 ರಿಂದಲೇ ಸಿದ್ಧತೆಗಳನ್ನು ಪ್ರಾರಂಭಿಸಲಾಗಿದೆ. ದೂರದರ್ಶನ ರಾಜಪಥದಲ್ಲಿ ರಾಷ್ಟ್ರಪತಿ ಭವನದ ಗುಮ್ಮಟದಿಂದ ರಾಷ್ಟ್ರೀಯ ಕ್ರೀಡಾಂಗಣದ ಗುಮ್ಮಟದವರೆಗೆ 59 ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ರಾಜಪಥ, ರಾಷ್ಟ್ರೀಯ ಯುದ್ಧ ಸ್ಮಾರಕ, ಇಂಡಿಯಾ ಗೇಟ್‌ನಲ್ಲಿ 33 ಕ್ಯಾಮೆರಾಗಳು, ರಾಷ್ಟ್ರೀಯ ಕ್ರೀಡಾಂಗಣದಲ್ಲಿ 16 ಕ್ಯಾಮೆರಾಗಳು ಮತ್ತು ರಾಷ್ಟ್ರಪತಿ ಭವನದಲ್ಲಿ 10 ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇಡೀ ಕಾರ್ಯಕ್ರಮದ ಪಕ್ಷಿನೋಟವನ್ನು ನೀಡಲು, ಎರಡು 360 ಡಿಗ್ರಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.