ಕೊಚ್ಚಿ(ಜ.07): ಭಾರತದ ರಾಷ್ಟ್ರಪತಿಗಳೆಂದರೆ ಏನು ತಮಾಷೆನಾ? ದೇಶದ ಪ್ರಥಮ ಪ್ರಜೆಯಾಗಿರುವ ರಾಷ್ಟ್ರಪತಿಗಳು, ಭಾರತವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುವ ರಾಯಭಾರಿಯೂ ಹೌದು.

ಅದರಂತೆ ರಾಷ್ಟ್ರಪತಿಗಳಿಗೆ ನೀಡುವ ಭದ್ರತೆಯೂ ಕೂಡ ಅಷ್ಟೇ ಮಹತ್ವದ್ದು. ರಾಷ್ಟ್ರಪತಿಗಳು ಎಲ್ಲೇ ಹೋದರೂ ಅವರ ಭದ್ರತಾ ಸಿಬ್ಬಂದಿ ಅವರೊಂದಿಗೆ ಸದಾ ನೆರಳಾಗಿ ಇರುತ್ತಾರೆ.

ಇಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕೇರಳದ ಕೊಚ್ಚಿಗೆ ಅಧಿಕೃತ ಭೇಟಿ ನೀಡಿದ್ದಾರೆ. ಕೊಚ್ಚಿಯ ಮಲಬಾರ್ ತಾಜ್ ಹೋಟೆಲ್‌ನಲ್ಲಿ ರಾಷ್ಟ್ರಪತಿ ಕೋವಿಂದ್ ವಾಸ್ತವ್ಯ ಹೂಡಿದ್ದಾರೆ.

ಮೈಸೂರು: ಕಾಲಿಗೆ ಬೀಳಲು ಬಂದ ಶಾಸಕನನ್ನು ತಡೆದ ರಾಷ್ಟ್ರಪತಿ

ಈ ಕಾರಣಕ್ಕೆ ಮಲಬಾರ್ ತಾಜ್ ಹೋಟೆಲ್‌ಗೆ ಬಿಗಿ ಭದ್ರತೆ ಒದಗಿಸಲಾಗಿದ್ದು, ಇಡೀ ಹೋಟೆಲ್‌ನ್ನು ರಾಷ್ಟ್ರಪತಿ ಭದ್ರತಾ ಸಿಬ್ಬಂದಿ ಸುಪರ್ದಿಗೆ ತೆಗೆದುಕೊಂಡಿದೆ.

ಇಷ್ಟೇ ಆಗಿದ್ದರೆ ಅದರಲ್ಲೇನು ವಿಶೇಷತೆ ಇರಲಿಲ್ಲ. ಆದರೆ ಇಂದು ಮಲಬಾರ್ ತಾಜ್ ಹೋಟೆಲ್‌ನಲ್ಲಿ ಮದುವೆಯಾಗಬೇಕಿದ್ದ ಅಮೆರಿಕದ ಮಿಚಗಿನ್ ಪ್ರಜೆ ಆಶ್ಲೇ ಹಾಲ್‌ಗೆ ರಾಷ್ಟ್ರಪತಿ ಕೋವಿಂದ್ ಆಗಮನದಿಂದ ತಮ್ಮ 8 ವರ್ಷಗಳ ಕನಿಸಿಗೆ ಭಂಗ ಬಂದಂತೆ ಭಾಸವಾಗಿತ್ತು.

ಕಾರಣ ಕೋವಿಂದ್ ಆಗಮನದ ಹಿನ್ನೆಲೆಯಲ್ಲಿ ಮದುವೆ ಸಮಾರಂಭವನ್ನು ರದ್ದುಗೊಳಿಸುವಂತೆ ಭದ್ರತಾ ಸಿಬ್ಬಂದಿ ಆಶ್ಲೆಗೆ ಆದೇಶ ನೀಡಿದ್ದರು. 8 ವರ್ಷಗಳಿಂದ ಕೇರಳದಲ್ಲಿ ಮದುವೆಯಾಗುವ ಕನಸು ಕಂಡಿದ್ದ ಆಶ್ಲೆಗೆ ಇದು ನಿಜಕ್ಕೂ ಆಘಾತಕಾರಿ ಸುದ್ದಿಯಾಗಿತ್ತು.

ಆದರೆ ತಮ್ಮ ಮದುವೆ ಇದೇ ದಿನ ಮಲಬಾರ್ ತಾಜ್ ಹೋಟೆಲ್‌ನಲ್ಲಿ ನಡೆಯಬೇಕೆಂಬ ಆಸೆ ಹೊಂದಿದ್ದ ಆಶ್ಲೆ ನೇರವಾಗಿ ರಾಷ್ಟ್ರಪತಿ ಕಚೇರಿಗೆ ಟ್ವೀಟ್ ಮಾಡಿ, ತಮ್ಮ ಮದುವೆಗೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದ್ದರು.

ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ರಾಮನಾಥ್ ಕೋವಿಂದ್, ಆಶ್ಲೆ ಮದುವೆಗೆ ಅಡ್ಡಿ ಮಾಡದಂತೆ ತಮ್ಮ ಭದ್ರತಾ ಸಿಬ್ಬಂದಿಗೆ ಆದೇಶ ನೀಡಿದರು. ಅದರಂತೆ ಇಂದು ಕೋವಿಂದ್ ಉಳಿದುಕೊಂಡಿರುವ ತಾಜ್ ಹೋಟೆಲ್‌ನಲ್ಲೇ ಆಶ್ಲೆ ಮದುವೆ ಕೂಡ ನಡೆಯುತ್ತಿದೆ.