ಲಾಕ್‌ಡೌನ್‌ ಹೇರಲು ಮಹಾರಾಷ್ಟ್ರ ಸಿದ್ಧತೆ| ಆರ್ಥಿಕತೆ ಮೇಲೆ ಹೆಚ್ಚಿನ ಪರಿಣಾಮ ಬೀರದ ಲಾಕ್‌ಡೌನ್‌ ಜಾರಿ| ರೂಪುರೇಷೆ ಸಿದ್ಧಪಡಿಸಲು ಅಧಿಕಾರಿಗಳಿಗೆ ಉದ್ಧವ್‌ ಠಾಕ್ರೆ ಸೂಚನೆ

ಮುಂಬೈ(ಮಾ.29): ರಾಜ್ಯದಲ್ಲಿ ಕೊರೋನಾ 2ನೇ ಅಲೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿರುವ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಮಹಾರಾಷ್ಟ್ರ ಸರ್ಕಾರ ಮತ್ತೊಮ್ಮೆ ಲಾಕ್‌ಡೌನ್‌ ಹೇರಲು ನಿರ್ಧರಿಸಿದೆ. ಆದರೆ ಹಿಂದಿನಂತೆ ಪೂರ್ಣ ಪ್ರಮಾಣದ ಬದಲಾಗಿ ಆರ್ಥಿಕತೆ ಮೇಲೆ ಹೆಚ್ಚಿನ ಪರಿಣಾಮ ಬೀರದ ರೀತಿಯ ಲಾಕ್ಡೌನ್‌ ಜಾರಿಗೆ ರೂಪುರೇಷೆ ಸಿದ್ಧಪಡಿಸುವಂತೆ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಆರೋಗ್ಯ ಸಚಿವ ರಾಜೇಶ್‌ ಟೋಪೆ ಹಾಗೂ ಅಧಿಕಾರಿಗಳ ಜತೆ ಭಾನುವಾರ ಉದ್ಧವ್‌ ಅವರು ಮಾತುಕತೆ ನಡೆಸಿದರು. ಈ ವೇಳೆ, ರಾಜ್ಯದಲ್ಲಿ ದೈನಂದಿನ ಸೋಂಕು ಪ್ರಕರಣಗಳ ಸಂಖ್ಯೆ 40 ಸಾವಿರ ಮೀರಬಹುದು. ಹೀಗಾಗಿ ಬಿಗಿ ಲಾಕ್‌ಡೌನ್‌ ಅಗತ್ಯ ಎಂದು ಅಧಿಕಾರಿಗಳು ಮನವಿ ಮಾಡಿದರು.

ಇದಕ್ಕೆ ಉತ್ತರಿಸಿದ ಠಾಕ್ರೆ, ‘ಆರ್ಥಿಕತೆ ಮೇಲೆ ಹೆಚ್ಚು ಪರಿಣಾಮ ಬೀರದ ಲಾಕ್‌ಡೌನ್‌ ಯೋಜನೆ ಸಿದ್ಧಪಡಿಸಿ. ಲಾಕ್‌ಡೌನ್‌ ಘೋಷಣೆ ಆದ ನಂತರ ಜನರಲ್ಲಿ ಗೊಂದಲ ಉಂಟಾಗಬಾರದು’ ಎಂದು ಸೂಚಿಸಿದರು ಎಂದು ಸರ್ಕಾರದ ಅಧಿಕೃತ ಪ್ರಕಟಣೆ ತಿಳಿಸಿದೆ. ಈ ನಡುವೆ, ಮಹಾರಾಷ್ಟ್ರದ ಜಾಲ್ನಾದಲ್ಲಿ ಮಾತನಾಡಿದ ಆರೋಗ್ಯ ಸಚಿವ ಟೋಪೆ, ‘ಜನರು ಕೊರೋನಾ ಮಾರ್ಗಸೂಚಿ ಪಾಲಿಸದೆ ಹೋದರೆ ಲಾಕ್‌ಡೌನ್‌ ಅನಿವಾರ್ಯ’ ಎಂದರು.

ನಿನ್ನೆ ದಾಖಲೆಯ 40 ಸಾವಿರ ಕೇಸ್‌

ಭಾನುವಾರ ಮಹಾರಾಷ್ಟ್ರದಲ್ಲಿ ದಾಖಲೆಯ 40414 ಹೊಸ ಪ್ರಕರಣಗಳು ಪತ್ತೆಯಾಗಿದೆ. ಈ ಪೈಕಿ ಮುಂಬೈ ಒಂದರಲ್ಲೇ 6923 ಕೇಸು ದೃಢಪಟ್ಟಿವೆ. ಇನ್ನು ರಾಜ್ಯದಲ್ಲಿ ಒಟ್ಟಾರೆ 108 ಜನರು ಸಾವನ್ನಪ್ಪಿದ್ದಾರೆ. ಪರಿಣಾಮ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 27.13 ಲಕ್ಷಕ್ಕೆ ತಲುಪಿದ್ದು, ಸಾವಿನ ಸಂಖ್ಯೆ 54181ಕ್ಕೆ ಮುಟ್ಟಿದೆ. ಮಹಾರಾಷ್ಟ್ರದಲ್ಲಿ ಕಳೆದೊಂದು ವಾರದಲ್ಲೇ 2.34 ಲಕ್ಷಕ್ಕೂ ಹೆಚ್ಚು ಹೊಸ ಪ್ರಕರಣಗಳು ದೃಢಪಟ್ಟಿದ್ದು, 782 ಜನರು ಸಾವನ್ನಪ್ಪಿದ್ದಾರೆ.