'ನಾಗರಹೊಳೆ ಉದ್ಯಾನಕ್ಕೆ ರಾಜೀವ್ ಗಾಂಧಿ ಬದಲು ಮಾರ್ಷಲ್ ಕಾರಿಯಪ್ಪ ಹೆಸರಿಡಿ'
* ಖೇಲ್ ರತ್ನ ಪುರಸ್ಕಾರದ ಹೆಸರು ಬದಲಿಸಿದ್ದ ಕೇಂದ್ರ ಸರ್ಕಾರ
* ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನ ಹೆಸರು ಬದಲಿಸಿ
* ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಒತ್ತಾಯ
* ಸಿಎಂ ಬಸವರಾಜ ಬೊಮ್ಮಾಯಿಗೆ ಪತ್ರ
ಮೈಸೂರು(ಸೆ. 02) ಖೇಲ್ ರತ್ನ ಪುರಸ್ಕಾರದ ಹೆಸರನ್ನು ಕೇಂದ್ರ ಸರ್ಕಾರ ಧ್ಯಾನ್ ಚಂದ್ ಖೇಲ್ ರತ್ನ ಎಂಬುದಾಗಿ ಘೋಷಿಸಿದೆ. ಇದೀಗ ನಾಗರಹೊಳೆ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನದ ಮರುನಾಮಕರಣ ಮಾಡಬೇಕಿದ್ದು ಫೀಲ್ಡ್ ಮಾರ್ಷಲ್ ಕಾರಿಯಪ್ಪನವರ ಹೆಸರಿಡಿ ಎಂದು ಸಂಸದ ಪ್ರತಾಪ್ ಸಿಂಹ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.
ಹಿಮಾಂತ ಬಿಸ್ವಾ ಶರ್ಮಾ ನೇತೃತ್ವದ ಅಸ್ಸಾಂ ಕ್ಯಾಬಿನೆಟ್ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನವನ್ನು ಒರಾಂಗ್ ರಾಷ್ಟ್ರೀಯ ಉದ್ಯಾನವನ ಎಂದು ಮರುನಾಮಕರಣ ಮಾಡಲು ನಿರ್ಧರಿಸಿದ ನಂತರ ಪ್ರತಾಪ್ ಈ ಹೆಜ್ಜೆ ಇಟ್ಟಿದ್ದಾರೆ.
ಅಸ್ಸಾಂ ಸರ್ಕಾರದ ವಕ್ತಾರ ಮತ್ತು ಜಲಸಂಪನ್ಮೂಲ ಸಚಿವ ಪಿಜುಶ್ ಹಜಾರಿಕಾ ಅವರು ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನದ ಹೆಸರನ್ನು ಮರುಹೆಸರಿಸುವ ನಿರ್ಧಾರವನ್ನು ಆದಿವಾಸಿ ಮತ್ತು ಚಹಾ ಬುಡಕಟ್ಟು ಸಮುದಾಯದ ಬೇಡಿಕೆಗಳನ್ನು ಪರಿಗಣಿಸಿದ ನಂತರ ತೆಗೆದುಕೊಳ್ಳಲಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ. ಅಸ್ಸಾಂ ಸರ್ಕಾದರ ಈ ನಿರ್ಧಾರವನ್ನು ಮೂರ್ಖತನದ ಪರಮಾವಧಿ ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ. ಇದರ ಹಿಂದೆ ಇರುವ ರಾಜಕಾರಣ ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಕಾಂಗ್ರೆಸ್ ನಾಯಕ ಮತ್ತು ಮಾಜಿ ಕಾನೂನು ಸಚಿವ ಅಶ್ವಿನಿ ಕುಮಾರ್ ಹೇಳಿದ್ದಾರೆ.
ಇನ್ನು ಮುಂದೆ ಧ್ಯಾನ್ ಚಂದ್ ಖೇಲ್ ರತ್ನ
ನೇಮ್ ಬೋರ್ಡ್ ಬದಲಿಸುವ ಮೂಲಕ, ನೀವು ಇತಿಹಾಸವನ್ನು ಬದಲಾಯಿಸುವುದಿಲ್ಲ. ರಾಜೀವ್ ಗಾಂಧಿ ತನ್ನ ಜೀವವನ್ನು ಬಲಿಕೊಡುವ ಮೂಲಕ ಭಾರತದ ಏಕತೆ ಮತ್ತು ಸಮಗ್ರತೆಯನ್ನು ಕಾಪಾಡುವಲ್ಲಿ ವಹಿಸಿದ ಪಾತ್ರ. ಇತಿಹಾಸವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಕುಮಾರ್ ಹೇಳಿದ್ದಾರೆ.
ರಾಜ್ಯದ ಅರಣ್ಯ ಖಾತೆ ಸಚಿವ ಉಮೇಶ್ ಕತ್ತಿಗೆ ಅವರಿಗೂ ಮನವಿ ಮಾಡಿಕೊಂಡಿರುವ ಪ್ರತಾಪ್ ರಾಷ್ಟ್ರೀಯ ಉದ್ಯಾನವನಕ್ಕೆ ಭಾರತೀಯ ಸೇನೆಯ ಮೊದಲ ಫೀಲ್ಡ್ ಮಾರ್ಷಲ್ ಜನರಲ್ ಕೆ. ಎಂ ಕಾರಿಯಪ್ಪ ಹೆಸರಿಡಬೇಕು ಎಂದು ಒತ್ತಾಯ ಮಾಡಿದ್ದಾರೆ.
ಕಾರಿಯಪ್ಪ ಅವರ ಹೆಸರು ಬಹಳ ಸೂಕ್ತ. ಅವರ ನಿಸ್ವಾರ್ಥ ಸೇವೆಗೆ ಗೌರವ ಕೊಡುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಇದಕ್ಕಿಂತ ಸೂಕ್ತ ಹೆಸರು ಇನ್ನೊಂದು ಸಿಗುವುದಿಲ್ಲ ಎಂದು ಪ್ರತಾಪ್ ಹೇಳಿದ್ದಾರೆ.