ಪಾಟ್ನಾ[ಡಿ.22]: ಪೌರತ್ವ ಕಾಯ್ದೆ ಹಾಗೂ NRCಯನ್ನು ಕಟುವಾಗಿ ವಿರೋಧಿಸಿದವರಲ್ಲಿ ಜೆಡಿಯು ರಾಷ್ಟ್ರೀಯ ಉಪಾಧ್ಯಕ್ಷ ಪ್ರಶಾಂತ್ ಕಿಶೋರ್ ಕೂಡಾ ಒಬ್ಬರು ಒಂದಾ ಬಳಿಕ ಮತ್ತೊಂದರಂತೆ, ಸರಣಿ ಟ್ವೀಟ್ ಮೂಲಕ ಅವರು CAA ಹಾಗೂ NRC ವಿರುದ್ಧ ಧ್ವನಿ ಗಟ್ಟಿಗೊಳಿಸಿದಂತೆ, ಈ ಕಾಯ್ದೆ ಬೆಂಬಲಿಸಿದ್ದ ಸಿಎಂ ನಿತೀಶ್ ಕುಮಾರ್ ಕೂಡಾ NRC ತಾನು ಬೆಂಬಲಿಸಲ್ಲ ಎಂಬ ಹೇಳಿಕೆ ನೀಡಬೇಕಾಯ್ತು. ಅಲ್ಲದೇ ಇದನ್ನು ಬಿಹಾರದಲ್ಲಿ ಜಾರಿಗೊಳಿಸಲು ಬಿಡುವುದಿಲ್ಲ ಎಂದೂ ಅವರು ಹೇಳಿದರು. ಆದರೀಗ ಮತ್ತೊಮ್ಮೆ ಈ ಸಂಬಂಧ ಟ್ವೀಟ್ ಮಾಡಿರುವ ಪ್ರಶಾಂತ್ ಕಿಶೋರ್ ಪೌರತ್ವ ಕಾಯ್ದೆ ಹಾಗೂ NRC ತಡೆಯುವುದು ಹೇಗೆ? ಎಂಬುವುದನ್ನು ತಿಳಿಸಿಕೊಟ್ಟಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಪ್ರಶಾಂತ್ ಕಿಶೋರ್ 'ಪೌರತ್ವ ಕಾಯ್ದೆ ಹಾಗೂ NRC ಜಾರಿಗೊಳಿಸುವುದನ್ನು ತಡೆಯಲು ಎರಡು ಅತ್ಯಂತ ಪರಿಣಾಮಕಾರಿ ವಿಧಾನಗಳಿವೆ.  ಮೊದಲನೆಯದ್ದು, ಎಲ್ಲಾ ವೇದಿಕೆಗಳಲ್ಲೂ ಧ್ವನಿ ಎತ್ತಿ ಶಾಂತಿಪೂರ್ವಕವಾಗಿ ವಿರೋಧಿಸುವುದನ್ನು ಮುಂದುವರೆಸಿ. ಎರಡನೆಯದಾಗಿ, ಎಲ್ಲಾ 16 ಬಿಜೆಪಿಯೇತರ ರಾಜ್ಯದ ಮುಖ್ಯಮಂತ್ರಿಗಳು ತಮ್ಮ ರಾಜ್ಯದಲ್ಲಿ NRC ಜಾರಿಗೊಳಿಸಲು ಒಪ್ಪಿಗೆ ಸೂಚಿಸಬಾರದೆಂಬುವುದನ್ನು ಖಚಿತಪಡಿಸಿಕೊಳ್ಳಿ. ಉಳಿದೆಲ್ಲಾ ವಿಚಾರಗಳು ಕೇವಲ ಸಾಂಕೇತಿಕವಷ್ಟೇ' ಎಂದಿದ್ದಾರೆ.

ಚುಣಾವಣಾ ತಂತ್ರಗಾರನೆಂದೇ ಖ್ಯಾತಿ ಗಳಿಸಿರುವ ಪ್ರಶಾಂತ್ ಕಿಶೋರ್ CAA ಹಾಗೂ NRC ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳಲ್ಲಿ ಕಾಂಗ್ರೆಸ್ ನಾಯಕರು ಭಾಗಿಯಾಗದಿರುವುದಕ್ಕೆ ಶನಿವಾರದಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಇದೇ ವೇಳೆ ಕಾಂಗ್ರೆಸ್ ನಾಯಕರಲ್ಲಿ ಈ ಪ್ರತಿಭಟನೆಯಲ್ಲಿ ಭಾಗಿಯಾಗಲು ಮನವಿ ಮಾಡಿಕೊಂಡಿದ್ದ ಪ್ರಶಾಂತ್ ಕಿಶೋರ್, ಪಾಲ್ಗೊಳ್ಳದಿದ್ದರೆ ಸೋನಿಯಾ ಗಾಂಧಿ ಬಿಡುಗಡೆಗೊಳಿಸಿರುವ ವಿಡಿಯೋಗೆ ಯಾವುದೇ ಅರ್ಥವಿಲ್ಲದಂತಾಗುತ್ತದೆ ಎಂದಿದ್ದರು.

ಪ್ರಶಾಂತ್ ಕಿಶೋರ್ ಈ ಟ್ವೀಟ್ ಬೆನ್ನಲ್ಲೇ ಕಾಂಗ್ರೆಸ್ ಸೋಮವಾರದಂದು ರಾಜ್ ಘಾಟ್ ನಲ್ಲಿ ಧರಣಿ ನಡೆಸುವ ಘೋಷಣೆ ಮಾಡಿತ್ತು. ಇದರಲ್ಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹಾಗೂ ಪಕ್ಷದ ಇನ್ನೂ ಹಲವಾರು ಹಿರಿಯ ನಾಯಕರು ಭಾಗಿಯಾಗುವುದಾಗಿ ತಿಳಿಸಿದ್ದರು. ಆದರೀಗ ಈ ಪ್ರತಿಭಟನೆಯನ್ನು ಮುಂದೂಡಲಾಗಿದೆ.