ಪ್ರಶಾಂತ್‌ ಕಿಶೋರ್‌ ಬಂಗಾಳದಲ್ಲಿ ಮಮತಾರನ್ನು ಗೆಲ್ಲಿಸಿದ್ದು ಹೇಗೆ?| ಹಿರಿಯ ಮುಖಂಡರನ್ನು ಕೈಬಿಟ್ಟು ಹೊಸಬರಿಗೆ ಆದ್ಯತೆ| ಸರ್ಕಾರದ ಯೋಜನೆಗಳಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ

ಕೋಲ್ಕತಾ(ಮೇ.03): ಚುನಾವಣಾ ತಂತ್ರಗಾರ ಪ್ರಶಾಂತ್‌ ಕಿಶೋರ್‌, ಮಮತ್ಟಾನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. 2019ರ ಲೋಕಸಭೆ ಚುನಾವಣೆಯಲ್ಲಿ ಟಿಎಂಸಿ ಪಕ್ಷದ ಹಿನ್ನಡೆಯ ಬಳಿಕ ಪಶ್ಚಿಮ ಬಂಗಾಳದಲ್ಲಿ ಮಮತಾ ಪರ ಚುನಾವಣೆ ತಂತ್ರಗಾರಿಕೆ ನಡೆಸುವ ಹೊಣೆಯನ್ನು ಪ್ರಶಾಂತ್‌ ವಹಿಸಿಕೊಂಡಿದ್ದರು.

ಟಿಎಂಸಿ ಸರ್ಕಾರದ ಸಮಾಜ ಕಲ್ಯಾಣ ಯೋಜನೆಗಳಲ್ಲಿನ ಭ್ರಷ್ಟಾಚಾರ ಸರ್ಕಾರ ವಿರುದ್ಧ ಜನರ ಆಕ್ರೋಶಕ್ಕೆ ಕಾರಣವಾಗುತ್ತಿದೆ ಎಂಬುದನ್ನು ಅರಿತ ಪ್ರಶಾಂತ್‌, ‘ದೀದಿಗೆ ಹೇಳಿ’ ಎಂಬ ಅಭಿಯಾನ ಆರಂಭಿಸಿದರು. ಇದರಿಂದಾಗಿ ಜನರು ತಮ್ಮ ಕುಂದುಕೊರತೆಗಳನ್ನು ಮಮತಾ ಬಳಿ ಹೇಳಿಕೊಳ್ಳಲು ಸಾಧ್ಯವಾಯಿತು. ಅದೇ ರೀತಿ ಅಭ್ಯರ್ಥಿಗಳು ಯಾರಾಗಬೇಕು ಎಂಬ ಬಗ್ಗೆ ನಾಗರಿಕರ ಅಭಿಪ್ರಾಯ ಸಂಗ್ರಹಿಸಲಾಯಿತು. ಅದೇ ರೀತಿ ಪಕ್ಷದ ಆಂತರಿಕ ವಲಯದಿಂದಲೂ ಅಭಿಪ್ರಾಯ ಸಂಗ್ರಹಿಸಲಾಯಿತು. ಈ ವೇಳೆ ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ಹಿರಿಯ ಮುಖಂಡರನ್ನು ಕೈಬಿಟ್ಟು ಹೊಸ ಮುಖಗಳಿಗೆ ಆದ್ಯತೆ ನೀಡಲಾಯಿತು. ಇದು ಪಕ್ಷದ ಮೇಲೆ ಜನರಿಗೆ ಇದ್ದ ಭಾವನೆಯನ್ನು ಬದಲಿಸಿತು.

ಮನೆಯ ಬಾಗಿಲಿಗೇ ಸರ್ಕಾರದ ಸೌಲಭ್ಯಗಳನ್ನು ಕಲ್ಪಿಸುವ ‘ದ್ವಾರೆ ಸರ್ಕಾರ್‌’ ಯೋಜನೆಯನ್ನು ಜಾರಿಗೊಳಿಸಲು ಪ್ರಶಾಂತ್‌ ಕಾರಣರಾದರು. ಇದು ಬಡವರಿಗೆ ಸರ್ಕಾರದ ಮೇಲಿನ ವಿಶ್ವಾಸಾರ್ಹತೆಯನ್ನು ಹೆಚ್ಚಿಸಿತು. ಮಮತಾ ಸರ್ಕಾರ ಜನಪ್ರಿಯ ಯೋಜನೆಗಳ ಪೈಕಿ ಒಂದಾದ ‘ಕನ್ಯಾಶ್ರೀ’ ಯೋಜನೆ, ಎಲ್ಲರಿಗೂ ವಿಮಾ ಸೌಲಭ್ಯ ಕಲ್ಪಿಸುವ ಸ್ವಾಸ್ಥ್ಯ ಸಾಥಿ ಯೋಜನೆಗಳ ಬಗ್ಗೆ ಚುನಾವಣೆಯಲ್ಲಿ ಹೆಚ್ಚು ಪ್ರಚಾರ ನೀಡಲಾಯಿತು. ಈ ಮೂಲಕ ಸರ್ಕಾರ ಮಹಿಳೆಯ ಪರ ಎಂಬುದನ್ನು ಬಿಂಬಿಸಲಾಯಿತು.

ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ಅವರ ಅಬ್ಬರದ ಪ್ರಚಾರ ನಡೆಸಿದ್ದರಿಂದ ತಮ್ಮ ತಂತ್ರಗಾರಿಕೆ ಬದಲಿಸಿದ ಪ್ರಶಾಂತ್‌ ಕಿಶೋರ್‌, ‘ಬಂಗಾಳ ತನ್ನ ಪುತ್ರಿಯನ್ನು ಬಯಸಿದೆ’ ಎಂಬ ಘೋಷಣೆಯನ್ನು ಹರಿಬಿಟ್ಟರು. ಚುನಾವಣೆಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿದ್ದು ಕೂಡ ಮಮತಾ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿತು. ಅಲ್ಲದೇ ಮಮತಾ ಬಿಜೆಪಿಗರನ್ನು ಹೊರಗಿನವರು ಎಂದು ಕರೆದಿದ್ದು ಚುನಾವಣೆಯ ದಿಕ್ಕನ್ನು ಬದಲಿಸಿತು.