ಆಸ್ಪತ್ರೆ ದಾಖಲಾತಿಗೆ ಕೋವಿಡ್ ವರದಿ ಕಡ್ಡಾಯವಲ್ಲ!
ಆಸ್ಪತ್ರೆ ದಾಖಲಾತಿಗೆ ಕೋವಿಡ್ ವರದಿ ಕಡ್ಡಾಯವಲ್ಲ| ಸೋಂಕಿತರ ದಾಖಲಾತಿ ಸಂಬಂಧ ಕೇಂದ್ರದಿಂದ ಹೊಸ ಮಾರ್ಗಸೂಚಿ
ನವದೆಹಲಿ(ಮಢ.09): ಕೋವಿಡ್ ಸೋಂಕಿತರನ್ನು ಆಸ್ಪತ್ರೆಗೆ ದಾಖಲು ಮಾಡಿಕೊಳ್ಳುವ ವೇಳೆ, ಕೋವಿಡ್ ಪಾಸಿಟಿವ್ ವರದಿ ಕಡ್ಡಾಯವಲ್ಲ ಎಂದು ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಸೋಂಕಿತರ ಆಸ್ಪತ್ರೆ ದಾಖಲಾತಿ ಸಂಬಂಧ ಕೇಂದ್ರ ಆರೋಗ್ಯ ಸಚಿವಾಲಯವು ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪರಿಷ್ಕೃತ ಮಾರ್ಗಸೂಚಿ ರವಾನಿಸಿದ್ದು, ಅದರಲ್ಲಿ ಈ ಅಂಶವನ್ನು ಸ್ಪಷ್ಟಪಡಿಸಿದೆ. ಅಲ್ಲದೆ ರೋಗಿ ಯಾವುದೇ ಪ್ರದೇಶಕ್ಕೆ ಸೇರಿದರೂ ಆತನಿಗೆ ಕಡ್ಡಾಯ ಚಿಕಿತ್ಸೆ ನೀಡಬೇಕು ಎಂದು ಸ್ಪಷ್ಟಪಡಿಸಿದೆ.
ಪರೀಕ್ಷಾ ವರದಿ ವಿಳಂಬವಾಗಿ ಸೋಂಕಿತರ ಆಸ್ಪತ್ರೆ ದಾಖಲಾತಿಗೆ ಅಡ್ಡಿಯಾಗುತ್ತಿರುವ ಪ್ರಕರಣಗಳು ಹೆಚ್ಚಿದ ಮತ್ತು ಬೇರೆ ಬೇರೆ ಪ್ರದೇಶಗಳ ಸೋಂಕಿತರಿಗೆ ಚಿಕಿತ್ಸೆ ನಿರಾಕರಿಸುತ್ತಿರುವ ಪ್ರಕರಣಗಳು ಹೆಚ್ಚಿದ ಬೆನ್ನಲ್ಲೇ ಆರೋಗ್ಯ ಸಚಿವಾಲಯ ಹೊಸ ಮಾರ್ಗ ಸೂಚಿ ಬಿಡುಗಡೆ ಮಾಡಿದೆ. ಸೋಂಕಿತರಿಗೆ ಕ್ಷಿಪ್ರ, ಪರಿಣಾಮಕಾರಿ ಮತ್ತು ಸಮಗ್ರ ಚಿಕಿತ್ಸೆ ಖಾತರಿಪಡಿಸಿಕೊಳ್ಳಲು ಪರಿಷ್ಕೃತ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದೆ.
"
ಮಾರ್ಗಸೂಚಿಯಲ್ಲೇನಿದೆ?:
ಆಸ್ಪತ್ರೆಗೆ ದಾಖಲೆ ಮಾಡಿಕೊಳ್ಳಲು ಸೋಂಕಿತರು ಕೋವಿಡ್ ಪಾಸಿಟಿವ್ ವರದಿ ತರುವುದು ಕಡ್ಡಾಯವಲ್ಲ.
ಶಂಕಿತ ಸೋಂಕಿತರನ್ನು, ಕೋವಿಡ್ ಆರೈಕೆ ಕೇಂದ್ರಗಳ ಶಂಕಿತ ಸೋಂಕಿತರ ವಾರ್ಡ್‌ಗೆ ದಾಖಲಿಸಿಕೊಳ್ಳಬೇಕು.
ಆಕ್ಸಿಜನ್ ಅಥವಾ ಇತರೆ ಔಷಧಿ ಇಲ್ಲ ಎಂದು ಯಾವುದೇ ವ್ಯಕ್ತಿಗಳ ದಾಖಲಾತಿಗೆ ನಿರಾಕರಿಸುವಂತಿಲ್ಲ.
ಸೋಂಕಿತರು ಬೇರೆ ಪ್ರದೇಶ, ನಗರ ಎಂಬ ಕಾರಣಕ್ಕೆ ಯಾವುದೇ ಆಸ್ಪತ್ರೆ ದಾಖಲಾತಿ ನಿರಾಕರಿಸುವಂತಿಲ್ಲ.
ಆಸ್ಪತ್ರೆಗಳಲ್ಲಿ ದಾಖಲಾತಿಯು, ಅಗತ್ಯವನ್ನು ಆಧರಿಸಿ ಮಾಡಿಕೊಳ್ಳಬೇಕು.
ಆಸ್ಪತ್ರೆ ದಾಖಲಾತಿ ಅಗತ್ಯವಿಲ್ಲದವರು, ಆಸ್ಪತ್ರೆ ಬೆಡ್ ಆಕ್ರಮಿಸಿಕೊಳ್ಳದಂತೆ ಕ್ರಮ ವಹಿಸಬೇಕು.
ಶಂಕಿತರು/ ಸೋಂಕಿತರ ಚಿಕಿತ್ಸೆ ಸಂಬಂಧ ಮೂರು ಹಂತದ ಮೂಲಸೌಕರ್ಯ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು
ಈ ಪರಿಷ್ಕೃತ ಮಾರ್ಗ ಸೂಚಿ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೂ ಅನ್ವಯ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona