ಮುಂಬೈ [ನ.11]: ಮಹಾರಾಷ್ಟ್ರದಲ್ಲಿ ಭಾನುವಾರ ಮಹತ್ವದ ವಿದ್ಯಮಾನಗಳು ನಡೆದಿದ್ದು, ‘ಸರ್ಕಾರ ರಚಿಸಲು ನಾನು ಸಿದ್ಧವಿಲ್ಲ. ವಿಪಕ್ಷದಲ್ಲಿ ಕೂಡಲಿದ್ದೇನೆ’ ಎಂದು ಬಿಜೆಪಿ ಅಧಿಕೃತವಾಗಿ ಘೋಷಿಸಿದೆ. ಇದರ ಬೆನ್ನಲ್ಲೇ ಶಿವಸೇನೆಗೆ ರಾಜ್ಯಪಾಲರು ಸರ್ಕಾರ ರಚನೆಗೆ ಆಹ್ವಾನಿಸಿದ್ದು, ‘ಆಸಕ್ತರಾಗಿದ್ದರೆ ಸೋಮವಾರ ಸಂಜೆ 7.30ರೊಳಗೆ ಸರ್ಕಾರ ರಚನೆಗೆ ಹಕ್ಕು ಮಂಡಿಸಿ’ ಎಂದು ಸೂಚಿಸಿದ್ದಾರೆ. ಹೀಗಾಗಿ ಶಿವಸೇನೆ, ಎನ್ ಸಿಪಿ ಹಾಗೂ ಕಾಂಗ್ರೆಸ್ ಮೈತ್ರಿ ಸರ್ಕಾರ ಬರಬಹುದು ಎಂಬ ಸಾಧ್ಯತೆಗಳು ಹೆಚ್ಚಿವೆ. ಅದಕ್ಕೆ ಪೂರಕವಾಗಿಯೇ ವಿದ್ಯಮಾನಗಳು ಆರಂಭವಾಗಿವೆ.

ಶಿವಸೇನೆ ಮುಖಂಡ ಸಂಜಯ ರಾವುತ್ ಪ್ರತಿ ಕ್ರಿಯಿಸಿ, ‘ಯಾವುದೇ ಬೆಲೆ ತೆತ್ತಾದರೂ ನಾವು ಶಿವಸೇನೆ ಮುಖ್ಯಮಂತ್ರಿಯನ್ನು ಪ್ರತಿ ಷ್ಠಾಪಿಸುತ್ತೇವೆ’ ಎಂದಿದ್ದಾರೆ. ಶರದ್ ಪವಾರ್‌ರ ಎನ್‌ಸಿಪಿ ಕೂಡ ಇದಕ್ಕೆ ಪೂರಕವಾಗಿ ಪ್ರತಿ ಕ್ರಿಯಿಸಿ, ‘ಸರ್ಕಾರ ರಚನೆಗೆ ನಮ್ಮ ನೆರವನ್ನು ಶಿವಸೇನೆ ಬಯಸಿದೆ. ಆದರೆ ಎನ್‌ಡಿಎ ಜತೆಗಿನ ನಂಟನ್ನು ಅದು ಸಂಪೂರ್ಣ ಕಡಿದುಕೊಳ್ಳ ಬೇಕು’ ಎಂಬ ಷರತ್ತು ವಿಧಿಸಿದೆ. ಕಾಂಗ್ರೆಸ್‌ನ ರಾಜ್ಯ ಮುಖಂಡ ಅಶೋಕ್ ಚವಾಣ್ ಅವರು, ‘ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಪಕ್ಷ ಬಯಸುವುದಿಲ್ಲ’ ಎಂದಿದ್ದಾರೆ. ಇದರಿಂದಾಗಿ ಸೇನೆ-ಎನ್‌ಸಿಪಿ-ಕಾಂಗ್ರೆಸ್ ಸರ್ಕಾರ ರಚನೆ ಆಗಬ ಹುದಾ ಎಂಬ ಚರ್ಚೆ ಆರಂಭವಾಗಿದೆ.

ಸರ್ಕಾರ ರಚಿಸಲ್ಲ- ಬಿಜೆಪಿ: ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರನ್ನು ಭೇಟಿ ಮಾಡಿದ ರಾಜ್ಯ ಬಿಜೆಪಿ ಅಧ್ಯಕ್ಷ ಚಂದ್ರಕಾಂತ ಪಾಟೀಲ್ ಅವರು, ‘ಸರ್ಕಾರ ರಚನೆಗೆ ಬಿಜೆಪಿ ಸಿದ್ಧವಿಲ್ಲ’ ಎಂದು ಸ್ಪಷ್ಟಪಡಿಸಿದರು. ಏಕೈಕ ಅತಿದೊಡ್ಡ ಪಕ್ಷವಾದ ಬಿಜೆಪಿಯನ್ನು ಸರ್ಕಾರ ರಚನೆಗೆ ಕೋಶಿಯಾರಿ ಅವರು ಶನಿವಾರ ಆಹ್ವಾನಿಸಿದ್ದರು. ಭೇಟಿ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಪಾಟೀಲ್, ‘ಬಿಜೆಪಿ-ಶಿವಸೇನೆ ಮೈತ್ರಿಕೂಟಕ್ಕೆ ಜನಾದೇಶ ಲಭಿಸಿತ್ತು. ಆದರೆ ಶಿವಸೇನೆ ಪ್ರಮುಖ ಉದ್ಧವ್ ಠಾಕ್ರೆ ಅವರು ಎರಡೂವರೆ ವರ್ಷ ಶಿವಸೇನೆಗೂ ಮುಖ್ಯಮಂತ್ರಿ ಹುದ್ದೆ ಸಿಗಬೇಕು ಎಂಬ ಪಟ್ಟು ಹಿಡಿದರು.ಇದು ಜನಾದೇಶಕ್ಕೆ ತೋರಿದ ಅಗೌರವ. ಹೀಗಾಗಿ ನಾವು ಸರ್ಕಾರ ರಚನೆಗೆ ಸಿದ್ಧರಿಲ್ಲ ಎಂದು ರಾಜ್ಯಪಾಲರಿಗೆ ತಿಳಿಸಿದ್ದೇವೆ’ ಎಂದರು. ‘ಬೇಕಿದ್ದರೆ ಶಿವಸೇನೆ ಸರ್ಕಾರ ರಚಿಸಿಕೊಳ್ಳಲಿ. ಅವರಿಗೆ ಒಳ್ಳೆಯದಾಗಲಿ’ ಎಂದು ಪಾಟೀಲ್ ವ್ಯಂಗ್ಯವಾಡಿದರು. ಈ ವಿದ್ಯಮಾನದ ಬೆನ್ನಲ್ಲೇ ರಾಜ್ಯಪಾಲರು ಸರ್ಕಾರ ರಚನೆಗೆ ಶಿವಸೇನೆಯನ್ನು ಆಹ್ವಾನಿಸಿ, ‘ಸರ್ಕಾರ ರಚನೆ ಪ್ರಸ್ತಾಪವನ್ನು ಸೋಮವಾರ ಸಂಜೆ 7.30ರೊಳಗೆ ಸಲ್ಲಿಸಿ’ ಎಂದು ಸೂಚಿಸಿದರು. 

ಮಹಾರಾಷ್ಟ್ರದಲ್ಲಿ ಟ್ರೈ-ಆ್ಯಂಗಲ್ ಸರ್ಕಾರ?: ಬಿಜೆಪಿ ತಲೆ ಗಿರಗಿರ! ...

ಶಿವಸೇನೆಯವರೇ ಸಿಎಂ: ಬಿಜೆಪಿ ಹೇಳಿಕೆ ಬೆನ್ನಲ್ಲೇ ಪ್ರತಿಕ್ರಿಯಿಸಿದ ಶಿವಸೇನೆ ಮುಖಂಡ ಸಂಜಯ ರಾವುತ್, ‘ಯಾವುದೇ ಬೆಲೆ ತೆತ್ತಾದರೂ ಶಿವಸೇನೆಯವರೇ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ. ಶಿವಸೇನೆ ಶಾಸಕರಿಗೆ ಇದನ್ನು ಭಾನುವಾರ ಉದ್ಧವ್ ಠಾಕ್ರೆ ಅವರೇ ಸ್ಪಷ್ಟವಾಗಿ ಹೇಳಿದ್ದಾರೆ’ ಎಂದರು. 

ಶಿವಸೇನೆಗೆ ಎನ್‌ಸಿಪಿ ಷರತ್ತು: ಶಿವಸೇನೆ ಜತೆ ಮೈತ್ರಿ ಮಾಡಿಕೊಳ್ಳಲು ಎನ್‌ಸಿಪಿ ಉತ್ಸುಕವಾಗಿದೆ. ‘ಸರ್ಕಾರ ರಚನೆಗೆ ಶಿವಸೇನೆಯು ನಮ್ಮನ್ನು ಸಂಪರ್ಕಿಸಿದೆ’ ಎಂದು ಎನ್‌ಸಿಪಿ ಹೇಳಿದೆ. ಆದರೆ, ‘ಶಿವಸೇನೆಯು ಎನ್‌ಡಿಎ ಜತೆಗಿನ ಮೈತ್ರಿಯನ್ನು ಸಂಪೂರ್ಣ ಕಡಿದುಕೊಳ್ಳಬೇಕು. ಕೇಂದ್ರ ಸರ್ಕಾರದಲ್ಲಿರುವ ಶಿವಸೇನೆಯ ಸಚಿವರು ರಾಜೀನಾಮೆ ನೀಡಬೇಕು’ ಎಂಬ ಷರತ್ತು ವಿಧಿಸಿದೆ. ಈ ನಡುವೆ, ಶಿವಸೇನೆ-ಎನ್‌ಸಿಪಿ ಕೈಜೋಡಿಸಿದರೆ ಅದಕ್ಕೆ ಸಾಥ್ ನೀಡಲು ಕಾಂಗ್ರೆಸ್ ಕೂಡ ಮನಸ್ಸು ಮಾಡಿದಂತಿದೆ.