ನವದೆಹಲಿ[ಫೆ.25]: ಸೋಮವಾರದಂದು ಈಶಾನ್ಯ ದೆಹಲಿಯಲ್ಲಿ ನಡೆದ ಹಿಂಸಾಚಾರದಲ್ಲಿ ಯಾವುದೇ ತಪ್ಪು ಮಾಡದ ಪೇದೆ ರತನ್ ಲಾಲ್ ಬಲಿಯಾಗಿದ್ದಾರೆ. ಇನ್ನು ತನ್ನ ಪತಿ ತನ್ನದಲ್ಲದ ತಪ್ಪಿಗೆ ಪೂನಂ ಬಲಿಯಾಗಿದ್ದಾರೆ ಎಂಬ ವಿಚಾರ ತಿಳಿದ ಪತ್ನಿ ಪ್ರಜ್ಞಾಹೀನರಾಗಿದ್ದಾರೆ. ಇನ್ನು ಪೊಲೀಸ್ ಪೇದೆ ಸಾವಿನ ಸುದ್ದಿ ಕೇಳಿ ಮನೆಯತ್ತ ಧಾವಿಸಿದ ಸ್ಥಳೀಯರ ನಡುವೆ ಕಂಬನಿ ಹಾಕುತ್ತಿರುವ ಈ ಪೇದೆಯ ಮೂವರು ಮಕ್ಕಳು ಒದ್ದೆ ಕಣ್ಣುಗಳಿಂದಲೇ ಪೊಲೀಸ್ ಕಮಿಷನರ್ ಬಳಿ ನಮ್ಮ ತಂದೆಯ ತಪ್ಪೇನು? ಎಂದು ಪ್ರಶ್ನಿಸಿವೆ.

ಹೌದು ದೆಹಲಿ ಹಿಂಸಾಚಾರಕ್ಕೆ ಬಲಿಯಾದ ಪೊಲೀಸ್ ಪೇದೆ ರತನ್ ಲಾಲ್ ಓರ್ವ ಶಾಂತಿ ಪ್ರಿಯ ಹಾಗೂ ಸ್ನೇಹಜೀವಿ ವ್ಯಕ್ತಿ. ಜಗಳವಾಡುವುದಿರಲಿ, ಧ್ವನಿ ಎತ್ತಿ ಮಾತನಾಡುತ್ತಿರಲಿಲ್ಲ. ಹೀಗಿದ್ದರೂ ಈಶಾನ್ಯ ದೆಹಲಿಯಲ್ಲಿ ಉದ್ರಿಕ್ತರು ಅವರನ್ನು ಸುತ್ತುವರಿದು ಹತ್ಯೆಗೈದಿದ್ದಾರೆ. ಮೂಲತಃ ರಾಜಸ್ಥಾನದ ಸೀಕರ್ ಜಿಲ್ಲೆಯವರಾಗಿದ್ದ ರತನ್ 1998ರಲ್ಲಿ ದೆಹಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡಿದ್ದರು. 2004ರಲ್ಲಿ ಜೈಪುರದ ಪೂನಂ ಜೊತೆ ಇವರ ವಿವಾಹವಾಗಿತ್ತು.

ಇನ್ನು ರತನ್ ಮೃತಪಟ್ಟಿರುವ ಸುದ್ದಿ ದೆಹಲಿಯ ಬುರಾರಿ ಹಳ್ಳಿಯಮೃತ ವಿಹಾರ ಕಾಲೋನಿಯಲ್ಲಿರುವ ಅವರ ಮನೆ ತಲುಪುತ್ತಿದ್ದಂತೆಯೇ ಕಂಗಾಲಾದ ಪತ್ನಿ ಪ್ರಜ್ಞಾಹೀನರಾಗಿದ್ದಾರೆ. ಮಖ್ಖಲು ತಂದೆ ಇಲ್ಲವೆನ್ನುವ ನೋವಿನಿಂದ ಅಳತೊಡಗಿದ್ದಾರೆ. ಇಡೀ ಹಳ್ಳಿಯಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಕುಟುಂಬಸ್ಥರು ಮಾಹಿತಿ ಪಡೆಯುತ್ತಿದ್ದಂತೆಯೇ ದೆಹಲಿಗೆ ದೌಡಾಯಿಸಿದ್ದಾರೆ. ಇತ್ತ ಬೆಂಗಳೂರಿನಲ್ಲಿದ್ದ ರತನ್ ಸಹೋದರ ಮನೋಜ್ ಕೂಡಾ ದೆಹಲಿಯತ್ತ ಹೆಜ್ಜೆ ಹಾಕಿದ್ದಾರೆ. 

ರತನ್ ತಮ್ಮ ಈ ಸಂಬಂಧ ಪ್ರತಿಕ್ರಿಯಿಸುತ್ತಾ 'ಇಲ್ಲಿಯವರೆಗೂ ನಮ್ಮಣ್ಣ ಬೈದು ಮಾತಾಡಿರುವುದನ್ನೂ ನಾವು ನೋಡಿಲ್ಲ. ಅವರ ಸ್ವಭಾವದಿಂದ ಅವರೊಬ್ಬ ಪೊಲೀಸ್ ಎಂದೂ ಗೊತ್ತಾಗುತ್ತಿರಲಿಲ್ಲ' ಎಂದಿದ್ದಾರೆ.