ತಬ್ಲೀಘಿಗಳ ಪತ್ತೆಗೆ ಕೇಂದ್ರದ ಹೊಸ ಅಸ್ತ್ರ!
ತಬ್ಲೀಘಿಗಳ ಪತ್ತೆಗೆ ಜಿಪಿಎಸ್ ಬಳಕೆ| ಮೊಬೈಲ್ ಸಿಗ್ನಲ್ ಬಳಸಿ ಶೋಧ| ರಾಜ್ಯಗಳ ನೆರವನ್ನೂ ಪಡೆಯುತ್ತಿರುವ ಅಧಿಕಾರಿಗಳು| ಸೋಂಕಿತರಲ್ಲಿ ಶೇ.30ರಷ್ಟುತಬ್ಲೀಘಿಗಳೇ ಇರುವ ಹಿನ್ನೆಲೆ
ನವದೆಹಲಿ(ಏ.06): ದೇಶಾದ್ಯಂತ ಕೊರೋನಾ ಸೋಂಕು ಹಬ್ಬಿಸುತ್ತಿರುವ ತಬ್ಲೀಘಿ ಜಮಾತ್ ಕಾರ್ಯಕರ್ತರ ಪತ್ತೆಗೆ ದೆಹಲಿ ಪೊಲೀಸರು ಇದೀಗ ಮೊಬೈಲ್ ಜಿಪಿಎಸ್ ತಂತ್ರಜ್ಞಾನದ ಮೊರೆ ಹೋಗಿದ್ದಾರೆ.
ಮಾಚ್‌ರ್ ಮೊದಲ ಮತ್ತು ಎರಡನೇ ವಾರದಲ್ಲಿ ದೆಹಲಿಯ ನಿಜಾಮುದ್ದೀನ್ ಮಸೀದಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ 9000ಕ್ಕೂ ಅಧಿಕ ತಬ್ಲೀಘಿ ಜಮಾತ್ ಕಾರ್ಯಕರ್ತರು ಭಾಗವಹಿಸಿದ್ದರು. ಕಾರ್ಯಕ್ರಮ ಮುಗಿದ ಬಳಿಕ ಇವರೆಲ್ಲಾ ದೇಶದ ವಿವಿಧ ಭಾಗಗಳಿಗೆ ಚದುರಿ ಹೋಗಿದ್ದಾರೆ. ಈ ಪೈಕಿ ಈಗಾಗಲೇ ಹಲವು ಸಾವಿರ ಜಮಾತ್ ಕಾರ್ಯಕರ್ತರನ್ನು ಪತ್ತೆ ಮಾಡಿ ಅವರನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಿ ಹೋಮ್ ಕ್ವಾರಂಟೈನ್‌ಗೆ ಗುರಿಪಡಿಸಲಾಗಿದೆ. ಆದರೆ ಇನ್ನೂ ಸಾಕಷ್ಟುಪ್ರಮಾಣದ ಕಾರ್ಯಕರ್ತರ ಪತ್ತೆ ಆಗಿಲ್ಲ. ಹೀಗೆ ಪತ್ತೆಯಾಗದ ಕಾರ್ಯಕರ್ತರಿಂದ ಮತ್ತಷ್ಟುಜನರಿಗೆ ಸೋಂಕು ಹಬ್ಬಿರುವ ಭೀತಿ ಇದೆ.
ತಬ್ಲೀಘಿಗಳಿಂದ ಕೊರೋನಾ ಸೋಂಕಿತರು ಡಬಲ್!
ಹೀಗಾಗಿಯೇ ದೆಹಲಿಯಲ್ಲಿ ಕಾರ್ಯಕ್ರಮ ನಡೆದ ವೇಳೆ ಹಾಜರಿದ್ದ ವ್ಯಕ್ತಿಗಳ ಪತ್ತೆಗೆ ಮೊಬೈಲ್ ಜಿಪಿಎಸ್ ತಂತ್ರಜ್ಞಾನ ಬಳಸಲಾಗುತ್ತಿದೆ. ನಿಜಾಮುದ್ದೀನ್ ಮಸೀದಿ ಮತ್ತು ಅದರ ಆಸುಪಾಸಿನ ಪ್ರದೇಶದಲ್ಲಿ ಹಲವು ದಿನಗಳ ಕಾಲ ಪತ್ತೆಯಾಗಿದ್ದ ಮೊಬೈಲ್ ಜಿಪಿಎಸ್ ಸಿಗ್ನಲ್ ಆಧರಿಸಿ, ಅವರು ದೇಶದ ಯಾವ್ಯಾವ ಭಾಗಗಳಿಗೆ ತೆರಳಿದ್ದಾರೆ ಎಂದು ಪತ್ತೆಹಚ್ಚುವ ಕಾರ್ಯ ನಡೆಯುತ್ತಿದೆ. ಇದಕ್ಕಾಗಿ ದೆಹಲಿ ಪೊಲೀಸರು ಆಯಾ ರಾಜ್ಯಗಳ ಪೊಲೀಸರ ನೆರವನ್ನೂ ಪಡೆದುಕೊಳ್ಳುತ್ತಿದ್ದಾರೆ.
ಈಗಾಗಲೇ ದೇಶದಲ್ಲಿ ಪತ್ತೆಯಾದ 3500ಕ್ಕೂ ಹೆಚ್ಚು ಕೊರೋನಾ ಸೋಂಕಿತರ ಪೈಕಿ ಶೇ.30ಕ್ಕಿಂತ ಹೆಚ್ಚು ಪ್ರಕರಣಗಳು ತಬ್ಲೀಘಿಗಳದ್ದೇ ಆಗಿದೆ.