ವಿಭಿನ್ನವಾಗಿ ದೀಪಾವಳಿ ಆಚರಿಸಲು ಹೋದ ದಂತವೈದ್ಯೆಯ ವಿರುದ್ಧ ಕೇಸ್

ಮಾಲಿನ್ಯ ಮುಕ್ತ ದೀಪಾವಳಿ ಆಚರಿಸಲು ಗಾಳಿಯಲ್ಲಿ ಗುಂಡು ಹಾರಿಸಿ, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡ ಉತ್ತರಾಖಂಡದ ದಂತವೈದ್ಯೆಯನ್ನು ಪೊಲೀಸರು ಬಂಧಿಸಿದ್ದಾರೆ. ಲೈಸೆನ್ಸ್ಡ್ ಪಿಸ್ತೂಲಿನಿಂದ ಗುಂಡು ಹಾರಿಸಿದ್ದಕ್ಕಾಗಿ ಶಸ್ತ್ರಾಸ್ತ್ರ ಕಾಯ್ದೆಯಡಿ ಕೇಸ್ ದಾಖಲಾಗಿದೆ.

police booked dentist for celebrating pollution free diwali by gunfire

ಪಟಾಕಿ ಸಿಡಿಸುವುದರಿಂದ ವಾಯುಮಾಲಿನ್ಯದ ಜೊತೆ ನಾಯಿಗಳು, ಪ್ರಾಣಿ ಪಕ್ಷಿಗಳು ಭಯಂಕರವಾದ ಸದ್ದು ಕೇಳಲಾಗದೇ ಚಡಪಡಿಸುತ್ತವೆ. ದೀಪಾವಳಿ ಸಮಯದಲ್ಲಿ ಮಾಲಿನ್ಯ ಮುಕ್ತ ಪರಿಸರ ಸ್ನೇಹಿ ಪಟಾಕಿ ಹಾರಿಸಿ ದೀಪಾವಳಿ ಆಚರಿಸುವಂತೆ ಅನೇಕ ಸೆಲೆಬ್ರಿಟಿಗಳು ಮನವಿ ಮಾಡುವುದನ್ನು ನೀವು ಕೇಳಿರುತ್ತೀರಿ. ಆದರೆ ಇಲ್ಲೊಬ್ಬಳು ಮಾಲಿನ್ಯ ಮುಕ್ತ ದೀಪಾವಳಿಯನ್ನು ವಿಭಿನ್ನವಾಗಿ ಆಚರಿಸಲು ಹೋಗಿ ಈಗ ಪೊಲೀಸರ ಅತಿಥಿಯಾಗಿದ್ದಾಳೆ. ಉತ್ತರಾಖಂಡ್‌ನ ದಂತವೈದ್ಯೆಯೊಬ್ಬರು ಮಾಲಿನ್ಯ ಮುಕ್ತ ದೀಪಾವಳಿ ಆಚರಿಸುತ್ತಿದ್ದೇನೆ ಎಂದು ಹೇಳಿ ಗಾಳಿಯಲ್ಲಿ  ಹಲವು ಸುತ್ತುಗಳ ಗುಂಡು ಹಾರಿಸಿದ್ದಾಳೆ. ಬರೀ ಇಷ್ಟೇ ಅಲ್ಲ ಈ ದೃಶ್ಯವನ್ನು ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದು, ಅದು ವೈರಲ್ ಆಗಿದೆ. ಇದಾದ ನಂತರ  ಪೊಲೀಸರು ದಂತ ವ್ಯದ್ಯೆಯನ್ನು ಬಂಧಿಸಿ ಕಂಬಿ ಹಿಂದೆ ಕಳುಹಿಸಿದ್ದಾರೆ. ಉತ್ತರಾಖಂಡ್‌ನಲ್ಲಿ ಈ ಘಟನೆ ನಡೆದಿದೆ. 

ಉತ್ತರಾಖಂಡ್‌ನ ರುದ್ರಾಪುರದ ಡಾಕ್ಟರ್ ಅಂಚಲ್ ಧಿಂಗ್ರಾ ಎಂಬಾಕೆಯೇ ಹೀಗೆ ಗಾಳಿಯಲ್ಲಿ ಗುಂಡು ಹಾರಿಸಿ ಎಡವಟ್ಟು ಮಾಡಿಕೊಂಡ ದಂತವ್ಯೆದ್ಯೆ.  ಮಾಲಿನ್ಯ ಮುಕ್ತ ದೀಪಾವಳಿ ಎಂದು ಹೇಳಿ ಈಕೆ ಗಾಳಿಯಲ್ಲಿ ಗುಂಡು ಹಾರಿಸಿದ್ದಾಳೆ. ತಮ್ಮ ಬಳಿ ಇದ್ದ ಲೈಸೆನ್ಸ್ಡ್‌ ಪಿಸ್ತೂಲ್ ಮೂಲಕ ಆಕೆ ಗುಂಡು ಹಾರಿಸಿದ ನಂತರ ಆಕೆಯ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ ಕೇಸ್ ದಾಖಲಾಗಿದೆ.  ಗದರ್‌ಪುರದಲ್ಲಿರುವ ವೈದ್ಯೆಯ ಫಾರ್ಮ್‌ಹೌಸ್‌ನಲ್ಲಿ ಈ ಘಟನೆ ನಡೆದಿದೆ. ಈ ವೀಡಿಯೋ ವೈರಲ್‌ ಆಗುತ್ತಿದ್ದಂತೆ ಘಟನೆ ಬಗ್ಗೆ ಯಾರೋ ವರದಿ ಮಾಡಿದ್ದು, ಪೊಲೀಸರು ಆಕೆಯ ವಿರುದ್ಧ ಕೇಸ್ ದಾಖಲಿಸಿದ್ದಾರೆ.

ಡಾಕ್ಟರ್‌ ಅಂಚಲ್ ಧಿಂಗ್ರಾ ದಂತ ವೈದ್ಯೆಯಾಗಿದ್ದು, ರುದ್ರಾಪುರದ ಗುರು ಮಾ ಅಡ್ವಾನ್ಸ್‌ಡ್‌ ಡೆಂಟಲ್ ಕೇರ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಉದ್ಯಮಿ ಅಭಿಮನ್ಯು ಧಿಂಗ್ರಾ ಅವರ ಪತ್ನಿಯಾಗಿದ್ದಾರೆ. ವೈರಲ್ ಆದ ವೀಡಿಯೋದಲ್ಲಿ ಅವರು ಮಹೀಂದ್ರಾ ಥಾರ್ ಗಾಡಿಗೆ ಒರಗಿ ನಿಂತುಕೊಂಡು ಆಕಾಶದತ್ತ ಗುರಿ ಮಾಡಿ ಐದು ಬಾರಿ ಗುಂಡು ಹಾರಿಸಿದ್ದಾಳೆ. ಇದು ಪೊಲೀಸರ ಗಮನವನ್ನು ಸೆಳೆದಿದ್ದು,  ಅವರ ಗನ್ ಪರವಾನಗಿ ರದ್ದಾಗುವ ಸಾಧ್ಯತೆ ಇದೆ. 

ವೀಡಿಯೊವನ್ನು ಪರಿಶೀಲಿಸಿದ ನಂತರ, ಆಂಚಲ್ ಗುಂಡು ಹಾರಿಸಿರುವುದನ್ನು ನಾವು ದೃಢಪಡಿಸಿದ್ದೇವೆ. ಆಕೆಯ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 27(1) ಹಾಗೂ 30ರ ಅಡಿ ಕೇಸ್ ದಾಖಲಾಗಿದೆ. ಆಕೆಯ ಗನ್ ಲೈಸೆನ್ಸ್ ಕ್ಯಾನ್ಸಲ್ ಮಾಡುವ  ಪ್ರಕ್ರಿಯೆ ಆರಂಭಿಸಿದ್ದೇವೆ ಎಂದು ರುದ್ರಪುರ ಸ್ಟೇಷನ್ ಹೌಸ್ ಆಫೀಸ್ (ಎಸ್‌ಎಚ್‌ಒ) ಮನೋಜ್ ರಾತುರಿ ತಿಳಿಸಿದ್ದಾರೆ.

 

Latest Videos
Follow Us:
Download App:
  • android
  • ios