ನವದೆಹಲಿ(ಡಿ.25): ಮಾಜಿ ಪ್ರಧಾನಿ, ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ 95ನೇ ಜನ್ಮ ದಿನಾಚರಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸೇರಿದಂತೆ ವಿವಿಧ ಗಣ್ಯರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ನವದೆಹಲಿಯ ಸದೈವ್ ಅಟಲ್ ಸ್ಮಾರಕ ಬಳಿ ಬಿಜೆಪಿ ಶ್ರದ್ಧಾಂಜಲಿ ಸಭೆ ಹಮ್ಮಿಕೊಂಡಿದ್ದು, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ವಿವಿಧ ಗಣ್ಯರು ಬಾಗವಹಿಸಿದ್ದರು.

ಅಟಲ್ ಸ್ಮಾರಕದ ಬಳಿ ಭಜನೆ, ಗೀತ ಗಾಯನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ದೇಶ ಕಂಡ ಅಪರೂಪದ ರಾಜಕಾರಣಿಯನ್ನು ಅತ್ಯಂತ ಗೌರವಯುತವಾಗಿ ಸ್ಮರಿಸಿಕೊಳ್ಳಲಾಗಿದೆ.

ಇನ್ನು ಅಟಲ್ ಜನ್ಮ ದಿನಾಚರಣೆ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ 'ಅಟಲ್ ಭೂಜಲ ಯೋಜನೆ'ಯನ್ನು ಅಧಿಕೃತವಾಗಿ ಜಾರಿಗೊಳಿಸಿದ್ದಾರೆ. ಒಟ್ಟು 5 ವರ್ಷದ ಈ ಯೋಜನೆಗೆ 6 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ.

ರ್ನಾಟಕ ಸೇರಿ 7 ರಾಜ್ಯದಲ್ಲಿ ಅಟಲ್‌ ಭೂಜಲ ಯೋಜನೆ ಜಾರಿ

ಒಟ್ಟು ಏಳು ರಾಜ್ಯಗಳ 78 ಜಿಲ್ಲೆಗಳ 8,350 ಗ್ರಾಮ ಪಂಚಾಯ್ತಿಗಳಲ್ಲಿ ಅಟಲ್ ಭೂಜಲ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ಪ್ರಧಾನಿ ಮೋದಿ ಈ ವೇಳೆ ಹೇಳಿದರು.

ಇನ್ನು ಪ್ರಧಾನಿ ಮೋದಿ ಇಂದು ಲಕ್ನೋದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಪ್ರತಿಮೆ ಹಾಗೂ ವೈದ್ಯಕೀಯ ವಿವಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.