ನವದೆಹಲಿ (ಡಿ. 25): ಸುಮಾರು 6 ಸಾವಿರ ಕೋಟಿ ರು.ಗಳ ವೆಚ್ಚದ ‘ಅಟಲ್‌ ಭೂಜಲ ಯೋಜನೆ’ಗೆ ಕೇಂದ್ರ ಸಚಿವ ಸಂಪುಟ ಮಂಗಳವಾರ ಒಪ್ಪಿಗೆ ನೀಡಿದೆ. ಅಂತರ್ಜಲ ಮಿತಿಮೀರಿ ಬಳಕೆಯಾಗುತ್ತಿರುವ ಕರ್ನಾಟಕ ಸೇರಿದಂತೆ 7 ರಾಜ್ಯಗಳಲ್ಲಿ ಯೋಜನೆ ಅನುಷ್ಠಾನವಾಗಲಿದೆ.

ಅಂತರ್ಜಲ ಮಿತಿಮೀರಿ ಬಳಕೆಯಾಗಿರುವ ರಾಜ್ಯಗಳಲ್ಲಿ ಅಂತರ್ಜಲ ಸಂಪನ್ಮೂಲದ ಸುಸ್ಥಿರ ನಿರ್ವಹಣೆಗಾಗಿ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ಗುಜರಾತ್‌, ರಾಜಸ್ಥಾನ, ಹರ್ಯಾಣ ಹಾಗೂ ಉತ್ತರ ಪ್ರದೇಶದ 8350 ಹಳ್ಳಿಗಳಲ್ಲಿ ಇದು ಕಾರ್ಯಗತಗೊಳ್ಳಲಿದೆ.

ಭಾರೀ ಪ್ರಮಾಣದಲ್ಲಿ ಅಂತರ್ಜಲ ಕುಸಿತ ದಾಖಲಾಗಿರುವ ಈ ರಾಜ್ಯಗಳಲ್ಲಿ ಈ ಯೋಜನೆಯಿಂದ ನೀರಿನ ದುರ್ಬಳಕೆ ತಡೆಯಬಹುದು ಎಂದು ನಿರೀಕ್ಷಿಸಲಾಗಿದೆ. ಈ ಪ್ರಕಾರ, ನೀರಿನ ಬಳಕೆದಾರರ ಸಂಘಗಳ ರಚನೆ, ಮೇಲ್ವಿಚಾರಣೆ ಹಾಗೂ ಅಂತರ್ಜಲ ದತ್ತಾಂಶ ಪ್ರಸಾರ, ನೀರಿನ ಆಯವ್ಯಯ, ಗ್ರಾಮ ಪಂಚಾಯ್ತಿ ಹಂತದಲ್ಲಿ ನೀರಿನ ಭದ್ರತೆಯ ಯೋಜನೆಗಳ ಸಿದ್ಧತೆ ಮತ್ತು ಜಾರಿಯಲ್ಲಿ ಸಮುದಾಯಗಳನ್ನು ಸದ್ಬಳಕೆ ಮಾಡಿಕೊಳ್ಳುವುದು ಈ ಯೋಜನೆಯ ಉದ್ದೇಶವಾಗಿದೆ.

ಏನಿದು ಅಟಲ್‌ ಭೂಜಲ ಯೋಜನೆ?

ವಿಶ್ವ ಸಂಸ್ಥೆಯ ವರದಿಯೊಂದರ ಪ್ರಕಾರ ದೇಶದ ಶೇ.80ರಷ್ಟುಗ್ರಾಮೀಣ ಮತ್ತು ನಗರದ ಜಲ ಸಂಪನ್ಮೂಲ ಗಣನೀಯವಾಗಿ ಕುಸಿಯುತ್ತಿದೆ. ಹೀಗಾಗಿ ವೇಗವಾಗಿ ಕುಸಿಯುತ್ತಿರುವ ಅಂತರ್ಜಲ ಸಂಪನ್ಮೂಲ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಿಂದ ಸರ್ಕಾರ ಅಟಲ್‌ ಭೂಜಲ ಯೋಜನೆಯನ್ನು ಜಾರಿಗೊಳಿಸಲು ಯೋಜಿಸಿದೆ. ಹಳ್ಳಿಗಳಲ್ಲಿ ಸ್ಥಳೀಯ ಹಾಗೂ ವಿವಿಧ ಸಂಘ ಸಂಸ್ಥೆಗಳ ನೆರವಿನೊಂದಿಗೆ ಅಂತರ್ಜಲ ಮರು ಪೂರಣ ಹಾಗೂ ನೀರಿನ ದುರ್ಬಳಕೆ ತಡೆಗೆ ಸರ್ಕಾರ ಒತ್ತು ನೀಡಲಿದೆ. ಈ ಯೋಜನೆಗೆ ತಗಲುವ ಅರ್ಧ ವೆಚ್ಚವನ್ನು ಭಾರತ ಸರ್ಕಾರ ಭರಿಸಲಿದೆ. ವಿಶ್ವಬ್ಯಾಂಕ್‌ ಸಾಲದ ಮೂಲಕ ಉಳಿದ ಹಣವನ್ನು ಒದಗಿಸಲಾಗುತ್ತದೆ.