ನವದೆಹಲಿ(ಜ.14): ಕೊರೋನಾ ಮಹಾಮಾರಿ ಹೊಡೆದೋಡಿಸಲು ಕೇಂದ್ರ ಸರ್ಕಾರ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಜನವರಿ 16 ರಂದು ಲಸಿಕೆ ನೀಡುವಿಕೆ ಆರಂಭಗೊಳ್ಳಲಿದೆ. ವಿಶ್ವದ ಅತೀ ದೊಡ್ಡ ಲಸಿಕೆ ನೀಡುವಿಕೆಗೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ. ವರ್ಚುವಲ್ ಕಾರ್ಯಕ್ರಮದ ಮೂಲಕ ಮೋದಿ ಚಾಲನೆ ನೀಡಲಿದ್ದಾರೆ.ಬೆಳಗ್ಗೆ 10.30ಕ್ಕೆ ಲಸಿಕೆ ವಿತರಣಾ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ.

ಮುಖ್ಯಮಂತ್ರಿಗಳ ಜೊತೆ ಮೋದಿ ಸಭೆ; ಉಚಿತ ಲಸಿಕೆ ಜೊತೆಗೆ ವಿಶೇಷ ಮನವಿ ಮಾಡಿದ ಪ್ರಧಾನಿ!.

ಜನವರಿ 16 ರಂದು  ದೇಶದ ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತದ ಒಟ್ಟು 3006 ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತಿದೆ. ವಿಶೇಷ ಅಂದರೆ ಅಷ್ಟೂ ಕೇಂದ್ರಗಳನ್ನು ವಿಡಿಯೋ ಕಾನ್ಪೆರನ್ಸ್ ಮೂಲಕ ಮೋದಿ ಉದ್ಘಾಟನಾ ವೇಳೆ ಸಂಪರ್ಕಿಸಲಿದ್ದಾರೆ. ಇನ್ನು ಉದ್ಘಾಟನಾ ದಿನ ಪ್ರತಿ ಕೇಂದ್ರದಲ್ಲಿ 100 ಮಂದಿಗೆ ಲಸಿಕೆ ನೀಡಲಾಗುವುದು. 

ಲಸಿಕೆ ಪಡೆಯುವ ಕೆಲವರಲ್ಲಿ ಮೋದಿ ಸಂವಹನ ನಡೆಸುವ ಸಾಧ್ಯತೆ ಇದೆ. ಈಗಾಗಲೇ ಮೋದಿ ತಿಳಿಸಿದಂತೆ ಮೊದಲ ಹಂತದ ಲಸಿಕಾ ಕಾರ್ಯಕ್ರಮದಲ್ಲಿ ಆರೋಗ್ಯ ಕಾರ್ಯಕರ್ತರು, ಆಸ್ಪತ್ಬೆ ಸಿಬ್ಬಂಧಿಗಳು, ವೈದ್ಯರು ಸೇರಿದಂತೆ ಫ್ರಂಟ್ ಲೈನ್ ವರ್ಕಸ್ ಲಸಿಕೆ ಪಡೆಯಲಿದ್ದಾರೆ. ಇದು ಉಚಿತವಾಗಿರಲಿದೆ.

ಕೊರೋನಾ ಲಸಿಕೆ ವಿತರಣೆ, ಮೇಲ್ವಿಚಾರಣೆ ಸೇರಿದಂತೆ ಎಲ್ಲಾ ಮಾಹಿತಿಗಳು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಭಿವೃದ್ಧಿ ಪಡಿಸಿರುವ ಕೋವಿ-ವಿನ್(Co-WIN)ಆನ್‌ಲೈನ್ ಡಿಜಿಟಲ್ ಪ್ಲಾಟ್‌ಫಾರ್ಮ್  ಮೂಲಕ ಎಲ್ಲಾ ಮಾಹಿತಿಗಳು ಲಭ್ಯವಾಗಲಿದೆ.  ಕೊರೋನಾ ಲಸಿಕೆ, ವಿತರಣೆ, ಕೋ-ವಿನ್ ಡಿಜಿಟಲ್ ಪ್ಲಾಟ್‌ಪಾರ್ಮ್ ಸಂಬಂಧಿಸಿದ ಎಲ್ಲಾ ಪ್ರಶ್ನೆಗಳನ್ನು ಪರಿಹರಿಸಲು ದಿನದ 24 ಗಂಟೆಯೂ ಲಭ್ಯವಿರುವ ಗ್ರಾಹಕ ಸೇವಾ ಕೇಂದ್ರ(1075)ತೆರೆಯಲಾಗಿದೆ.

ಈಗಾಗಲೇ ಎಲ್ಲಾ ರಾಜ್ಯಗಳಿಗೆ, ಕೇಂದ್ರಾಡಳಿತ ಪ್ರದೇಶಗಳಿಗೆ ಕೋವಿಶೀಲ್ಡ್ ಹಾಗೂ ಕೋವಾಕ್ಸಿನ್ ಲಸಿಕೆ ರವಾನಿಸಲಾಗಿದೆ. ಕರ್ನಾಟಕದಲ್ಲಿ ಬೆಂಗಳೂರು ಹಾಗೂ ಬೆಳಗಾವಿಯಲ್ಲಿ ಈ ಲಸಿಕೆಗಳನ್ನು ಶೇಖರಣೆ ಮಾಡಿ ಇಡಲಾಗಿದೆ.