Asianet Suvarna News Asianet Suvarna News

Mann Ki Baat: ಮೈಸೂರಿನ ಅಂಧ ವಿದ್ಯಾರ್ಥಿನಿಗೆ ಪ್ರಧಾನಿ ಮೋದಿ ಶಹಬ್ಬಾಸ್‌ಗಿರಿ!

ಉತ್ತರಾಖಂಡ ಮೂಲದವಳಾದರೂ ಮೈಸೂರಿನಲ್ಲಿ 3 ತಿಂಗಳಲ್ಲಿ ಕನ್ನಡ ಕಲಿತು, ಕನ್ನಡದಲ್ಲೇ 10ನೇ ತರಗತಿ ಪರೀಕ್ಷೆ ಪಾಸು ಮಾಡಿದ ಕಲ್ಪನಾ ಎಂಬ ಅಂಧ ವಿದ್ಯಾರ್ಥಿನಿಯ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ಕೊಂಡಾಡಿದ್ದಾರೆ.

Pm Narendra Modi Praises Kannada Learned Student Of Karnataka In Mann Ki Baat gvd
Author
Bangalore, First Published May 30, 2022, 3:25 AM IST

ನವದೆಹಲಿ (ಮೇ.30): ಉತ್ತರಾಖಂಡ ಮೂಲದವಳಾದರೂ ಮೈಸೂರಿನಲ್ಲಿ 3 ತಿಂಗಳಲ್ಲಿ ಕನ್ನಡ ಕಲಿತು, ಕನ್ನಡದಲ್ಲೇ 10ನೇ ತರಗತಿ ಪರೀಕ್ಷೆ ಪಾಸು ಮಾಡಿದ ಕಲ್ಪನಾ ಎಂಬ ಅಂಧ ವಿದ್ಯಾರ್ಥಿನಿಯ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ಕೊಂಡಾಡಿದ್ದಾರೆ. ಈಕೆಯ ಸಾಧನೆ ಇತರ ವಿದ್ಯಾರ್ಥಿಗಳಿಗೆ ಸ್ಫೂರ್ತಿ ಎಂದಿರುವ ಅವರು, ಆಕೆಗೆ ಕನ್ನಡ ಕಲಿಸಿದ ಮೈಸೂರಿನ ಶಿಕ್ಷಕರಾದ ತಾರಾಮೂರ್ತಿ ಅವರನ್ನೂ ಶ್ಲಾಘಿಸಿದ್ದಾರೆ.

ಭಾನುವಾರ ತಮ್ಮ ಮಾಸಿಕ ‘ಮನ್‌ ಕೀ ಬಾತ್‌’ ರೇಡಿಯೋ ಭಾಷಣ ಮಾಡಿದ ಮೋದಿ, ‘ಈ ದೇಶ ಅನೇಕ ಭಾಷಾ ವೈವಿಧ್ಯತೆ ಹಾಗೂ ಸಂಸ್ಕೃತಿಗಳಿಂದ ಕೂಡಿದೆ. ಇಂಥ ಭಾಷಾ ವೈವಿಧ್ಯತೆ ವಿಷಯದಲ್ಲಿ ಉತ್ತರಾಖಂಡದವಳಾದರೂ ಕನ್ನಡದಲ್ಲೇ ಪರೀಕ್ಷೆ ಪಾಸಾದ ಕಲ್ಪನಾಳ ಕತೆಯು ‘ಏಕ ಭಾರತ, ಶ್ರೇಷ್ಠ ಭಾರತ’ಕ್ಕೆ ತಾಜಾ ನಿದರ್ಶನ’ ಎಂದು ಹೇಳಿದರು.

Mann Ki Baat: ಚಾರ್‌ ಧಾಮ್‌ ಯಾತ್ರೆ, ಸ್ವಚ್ಛತೆ ಕಾಪಾಡಲು ಭಕ್ತರಿಗೆ ಮೋದಿ ಮನವಿ

‘ಕಲ್ಪನಾ ಇತ್ತೀಚೆಗೆ 10ನೇ ತರಗತಿಯನ್ನು ಕರ್ನಾಟಕದಲ್ಲಿ ಪಾಸು ಮಾಡಿದ್ದಾಳೆ. ವಿಚಿತ್ರವೆಂದರೆ ಕೆಲ ತಿಂಗಳ ಮುನ್ನ ಆಕೆಗೆ ಕನ್ನಡವೇ ಗೊತ್ತಿರಲಿಲ್ಲ. ಆದರೆ ಛಲ ಬಿಡದ ಆಕೆ 3 ತಿಂಗಳಲ್ಲಿ ಕನ್ನಡ ಕಲಿತಳು ಹಾಗೂ ಕನ್ನಡ ಭಾಷೆಯಲ್ಲಿ 92 ಅಂಕ ಪಡೆದಳು. ಇದನ್ನು ಕೇಳಿ ನಿಮಗೆ ಅಚ್ಚರಿ ಎನ್ನಿಸಬಹುದು. ಆದರೂ ಇದು ನಿಜ’ ಎಂದರು. ‘ಕಲ್ಪನಾ ಉತ್ತರಾಖಂಡದ ಜೋಶಿಮಠ ಮೂಲದವಳು. ಆಕೆಗೆ ಮೊದಲು ಕ್ಷಯರೋಗ ಇತ್ತು. ನಂತರ 3ನೇ ಕ್ಲಾಸ್‌ಗೆ ಬಂದಾಗ ದೃಷ್ಟಿಕಳೆದುಕೊಂಡಳು. ಆದರೆ ಛಲ ಬಿಡದ ಆಕೆ ‘ಮನಸ್ಸಿದ್ದರೆ ಮಾರ್ಗ’ ಎಂಬಂತೆ ಮುನ್ನುಗ್ಗಿದಳು.

ಆಕೆಗೆ ಆಕಸ್ಮಿಕವಾಗಿ ಉತ್ತರಾಖಂಡ ಪ್ರವಾಸಕ್ಕೆ ಬಂದಿದ್ದ ಮೈಸೂರು ಮೂಲದ ಪ್ರೊ.ತಾರಾಮೂರ್ತಿ ಎಂಬುವರ ಪರಿಚಯವಾಯಿತು. ಆವರು ಕಲ್ಪನಾಳಲ್ಲಿದ್ದ ಛಲವನ್ನು ಗಮನಿಸಿ, ಕುಟುಂಬದ ಕೋರಿಕೆ ಮೇರೆಗೆ ಮೈಸೂರಿಗೆ ಕರೆದುಕೊಂಡು ಹೋದರು. ಪ್ರತಿ ನಿತ್ಯ ಶಿಕ್ಷಣದಲ್ಲಿ ಸಹಾಯ ಸಹಾಯ ಮಾಡಿದರು. ಕೊನೆಗೆ ಕಠಿಣ ಪರಿಶ್ರಮದಿಂದ 3 ತಿಂಗಳಲ್ಲಿ ಕನ್ನಡ ಕಲಿತು ಕಲ್ಪನಾ ಎಸ್ಸೆಸ್ಸೆಲ್ಸಿ ತೇರ್ಗಡೆಯಾಗಿದ್ದಾಳೆ. ಆಕೆ ನಮಗೆಲ್ಲ ಮಾದರಿ. ಇದಕ್ಕಾಗಿ ಆಕೆಗೆ ನನ್ನ ಅಭಿನಂದನೆ’ ಎಂದು ಭಾವುಕರಾಗಿ ಮೋದಿ ನುಡಿದರು.

ಎಸ್ಸೆಸ್ಸೆಲ್ಸಿಯಲ್ಲಿ 514 ಅಂಕ ಪಡೆದ ಕಲ್ಪನಾ: ಕಲ್ಪನಾ ಮೈಸೂರಿನ ರಂಗರಾವ್‌ ಸ್ಮಾರಕ ಅಂಗವಿಕಲರ ಶಾಲೆಯ ವಿದ್ಯಾರ್ಥಿನಿಯಾಗಿದ್ದಳು. ಎಸ್ಸೆಸ್ಸೆಲ್ಸಿಯಲ್ಲಿ ಕನ್ನಡದಲ್ಲಿ 92 ಅಂಕ ಸೇರಿದಂತೆ ಒಟ್ಟಾರೆ 514 ಅಂಕ ಪಡೆದು ಉತ್ತಮ ದರ್ಜೆಯಲ್ಲಿ ಪಾಸಾಗಿದ್ದಳು.

Mann Ki Baat: ರೇಡಿಯೋ ಕಾರ್ಯಕ್ರಮದಲ್ಲಿ ದೇಶದ ಜನತೆಗೆ ಮೋದಿಯಿಂದ ಸಪ್ತ ಪ್ರಶ್ನೆ, ನಿಮಗೆ ಉತ್ತರ ಗೊತ್ತಾ?

3 ಅಕ್ಟೋಬರ್ 2014ರಂದು ಮನ್ ಕೀ ಬಾತ್  ಪ್ರಾರಂಭ: ಮನ್ ಕಿ ಬಾತ್ ನ ಮೊದಲ ಶೋ 3 ಅಕ್ಟೋಬರ್ 2014 ರಂದು ಪ್ರಸಾರವಾಯಿತು. ಪ್ರಧಾನಿ ಆಯೋಜಿಸುವ ರೇಡಿಯೋ ಕಾರ್ಯಕ್ರಮ ಪ್ರತಿ ತಿಂಗಳ ಕೊನೆಯ ಭಾನುವಾರದಂದು ಪ್ರಸಾರವಾಗುತ್ತದೆ. ದೈನಂದಿನ ಆಡಳಿತದ ವಿಷಯಗಳ ಕುರಿತು ನಾಗರಿಕರೊಂದಿಗೆ ಸಂವಾದವನ್ನು ಸ್ಥಾಪಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.

Follow Us:
Download App:
  • android
  • ios