ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಸಿನೆಮಾ ಬೆನ್ನಲ್ಲೇ, ಕೇರಳದ ಕೊಲ್ಲಂ ಸಮೀಪವಿರುವ ಪ್ರಸಿದ್ಧ ಜಟಾಯು ಅರ್ಥ್ ಸೆಂಟರ್ ಮತ್ತೊಮ್ಮೆ ಸುದ್ದಿಯ ಕೇಂದ್ರಬಿಂದುವಾಗಿದೆ. ಚಡಯಮಂಗಳಂನಲ್ಲಿರುವ ಈ ಪ್ರವಾಸಿ ತಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡುವ ಸಾಧ್ಯತೆಯ ಸುಳಿವು ಸಿಕ್ಕಿದೆ.

ತಿರುವನಂತಪುರಂ: ನಿತೇಶ್‌ ತಿವಾರಿ ನಿರ್ದೇಶನದ ರಾಮಾಯಣ ಸಿನಿಮಾ ತೆರೆಕಂಡ ಬೆನ್ನಲ್ಲೇ ಜನರ ಗಮನವನ್ನು ತನ್ನತ್ತ ಸೆಳೆದಿರುವ ಕೇರಳದ ಚಡಯಮಂಗಳಂನಲ್ಲಿರುವ ‘ಜಟಾಯು ಅರ್ಥ್ ಸೆಂಟರ್‌’ಗೆ ಪ್ರಧಾನಿ ನರೇಂದ್ರ ಮೋದಿ ಶೀಘ್ರ ಭೇಟಿ ನೀಡುವ ಸಾಧ್ಯತೆಯಿದೆ. ಈ ಬಗ್ಗೆ ಕೇಂದ್ರ ಪ್ರವಾಸೋದ್ಯಮ ಖಾತೆ ರಾಜ್ಯ ಸಚಿವ ಸುರೇಶ್‌ ಗೋಪಿ ಸುಳಿವು ನೀಡಿದ್ದಾರೆ.

ಸೀತೆಯನ್ನು ಅಪಹರಿಸಿ ಪುಷ್ಪಕವಿಮಾನದಲ್ಲಿ ಹೋಗುತ್ತಿದ್ದ ರಾವಣನನ್ನು ತಡೆಯಲು ಜಟಾಯು ಹೋರಾಡಿತ್ತು. ಆಗ ರಾವಣ ಅದರ ರೆಕ್ಕೆ ಕತ್ತರಿಸಿದ್ದ. ಅದು ಕೇರಳದ ಕೊಲ್ಲಂ ಸನಿಹದ ಬೆಟ್ಟದ ಮೇಲೆ ಬಿದ್ದು ಅಸುನೀಗಿತ್ತು ಎಂಬ ಪ್ರತೀತಿ ಇದೆ. ಹೀಗಾಗಿ ಜಟಾಯುವಿನ ಬೃಹತ್ ಶಿಲ್ಪವನ್ನು ಅಲ್ಲಿ ಕೆತ್ತಲಾಗಿದೆ.

ರಾಮಾಯಣ ಗಳಿಕೆ 1547 ಕೋಟಿಗೆ:

ರಣಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಯಶ್ ಅಭಿನಯದ ‘ರಾಮಾಯಣ’ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಶುಕ್ರವಾರವರೆಗೆ 1547 ಕೋಟಿ ರು. ಸಂಪಾದಿಸಿದೆ.

‘ಜಟಾಯುನ ನಿರ್ಮಾತೃ ರಾಜೀವ್‌ ಆಂಚಲ್‌ ಜತೆ 2 ದಿನಗಳ ಹಿಂದೆ ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ ಸಭೆ ನಡೆಸಿ, ದೆಹಲಿಯಲ್ಲಿ ಆ ಶಿಲ್ಪವನ್ನು ಪ್ರದರ್ಶಿಸುವ ಆಸಕ್ತಿಯನ್ನು ವ್ಯಕ್ತಪಡಿಸಿದ್ದರು. ಈ ಪ್ರಸ್ತಾವನೆಯನ್ನು ಮೋದಿಯವರ ಗಮನಕ್ಕೂ ತರಲಾಗಿದೆ’ ಎಂದು ಸುರೇಶ್‌ ಗೋಪಿ ಹೇಳಿದ್ದಾರೆ. ಇದೇ ವೇಳೆ, ಜಟಾಯುಗೆ ಶೆಖಾವತ್‌ ಭೇಟಿಯ ಬಳಿಕ ಮೋದಿಯವರೂ ಭೇಟಿ ನೀಡುವ ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದಾರೆ.

ಪುರಾಣದ ಪ್ರಕಾರ ಎಲ್ಲೆಲ್ಲಿ ಜಟಾಯುವಿನ ಗುರುತಿದೆ?

ರಾಮಾಯಣದ ಬಳಿಕ ಜಟಾಯುವಿಗೆ ಸಂಬಂಧಿಸಿದ ಈ ಜಾಗದಲ್ಲಿ ಪ್ರವಾಸಿಗರ ಸಂಖ್ಯೆಯೂ ಜಾಸ್ತಿ ಆಗುತ್ತಿದೆ.

ಕೇರಳದ ಚಡಯಮಂಗಲಂ : ಇಲ್ಲಿರುವ ಜಟಾಯು ಅರ್ಥ್ ಸೆಂಟರ್ (ಜಟಾಯು ನೇಚರ್ ಪಾರ್ಕ್) ವಿಶ್ವದ ಅತಿ ದೊಡ್ಡ ಜಟಾಯು ಪಕ್ಷಿ ಶಿಲ್ಪಕ್ಕೆ ಹೆಸರುವಾಸಿಯಾಗಿದೆ. ಇದು 200 ಅಡಿ ಉದ್ದ, 150 ಅಡಿ ಅಗಲ ಮತ್ತು 70 ಅಡಿ ಎತ್ತರವಿದೆ.

ಆಂಧ್ರಪ್ರದೇಶದ ಲೇಪಾಕ್ಷಿ : ಬೆಂಗಳೂರಿನಿಂದ ಸುಮಾರು 125 ಕಿ.ಮೀ ದೂರದಲ್ಲಿರುವ ಈ ಸ್ಥಳವು ಜಟಾಯು ಬಿದ್ದ ಸ್ಥಳವೆಂದು ಪ್ರಸಿದ್ಧವಾಗಿದೆ. ಗಾಯಗೊಂಡ ಹದ್ದನ್ನು ಕಂಡು ಶ್ರೀರಾಮನು "ಲೇ ಪಕ್ಷಿ" ಎಂದಿದ್ದರಿಂದ ಈ ಊರಿಗೆ ಲೇಪಾಕ್ಷಿ ಎಂಬ ಹೆಸರು ಬಂದಿತೆಂಬ ಪ್ರತೀತಿ ಇದೆ.

ತಮಿಳುನಾಡು: ತಿರುಪುಟ್ಕುಝಿ ಮತ್ತು ಪುಲ್ಲಭೂತಂಗುಡಿ ಸ್ಥಳಗಳೂ ಜಟಾಯುವಿನ ಕಥೆಯೊಂದಿಗೆ ಸಂಬಂಧಿಸಿವೆ.