ರಕ್ತಸಂಬಂಧಿಗಳ ನಡುವಿನ ಮದುವೆ ನಿಷೇಧಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ಕುರಿತು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಆದರೆ ಇಂತಹ ಮದುವೆಗಳನ್ನು ನ್ಯಾಯಾಲಯವು ನೇರವಾಗಿ ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

ನವದೆಹಲಿ: ಹತ್ತಿರದ ರಕ್ತ ಸಂಬಂಧಿ ಅಥವಾ ಸೋದರ ಸಂಬಂಧಿಗಳಲ್ಲಿನ ಮದುವೆ ನಿಯಂತ್ರಣ ಕಾನೂನು ಜಾರಿಗೆ ಸೂಕ್ತ ಕಾನೂನು ತರಬೇಕು’ ಎಂಬ ಅರ್ಜಿ ಕುರಿತು ಪ್ರತಿಕ್ರಿಯೆ ನೀಡುವಂತೆ ಕೇಳಿ ಸುಪ್ರೀಂ ಕೋರ್ಟ್‌ ಶುಕ್ರವಾರ ಕೇಂದ್ರ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದೆ. ಆದರೆ ಇದೇ ವೇಳೆ ‘ನಾವು ಈ ವಿಚಾರದಲ್ಲಿ ಸರ್ಕಾರಕ್ಕೆ ನಿರ್ದೇಶನ ನೀಡಲ್ಲ. ಏಕೆಂದರೆ ಇದು ಸಂಸತ್ತಿಗೆ ಸಂಬಂಧಿಸಿದ ವಿಷಯ. ಅದರ ಬದಲಾಗಿ ಸರ್ಕಾರವನ್ನು ಜಾಗೃತಗೊಳಿಸುವುದಷ್ಟೇ ನಮ್ಮ ಉದ್ದೇಶ’ ಎಂದು ಕೋರ್ಟ್‌ ಸ್ಪಷ್ಟಪಡಿಸಿದೆ.

ಬೆಂಗಳೂರಿನ ಕಾನೂನು ವಿದ್ಯಾರ್ಥಿ ಸಲ್ಲಿಸಿದ್ದ ಅರ್ಜಿ

‘ರಕ್ತಸಂಬಂಧಿಗಳಲ್ಲಿನ ಮದುವೆ ಆನುವಂಶೀಯ ಸಮಸ್ಯೆ, ವಿವಿಧ ರೀತಿಯ ಅಂಗವೈಕಲ್ಯ, ಶಿಶುಸಾವು ಮತ್ತು ಮಕ್ಕಳಲ್ಲಿ ಇತರೆ ಋಣಾತ್ಮಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹೀಗಾಗಿ ಅದನ್ನು ನಿಯಂತ್ರಿಸಬೇಕು’ ಎಂದು ಬೆಂಗಳೂರಿನ ಕಾನೂನು ವಿದ್ಯಾರ್ಥಿ ಚಾರ್ವಿ ಎಸ್‌. ಅರ್ಜಿ ಸಲ್ಲಿಸಿದ್ದರು.

ಇದು ನಿರ್ದೇಶನ ಅಲ್ಲ, ಜಾಗೃತಿಯ ಉದ್ದೇಶವಷ್ಟೆ

ಇದರ ವಿಚಾರಣೆ ನಡೆಸಿದ ಮುಖ್ಯ ನ್ಯಾ। ಸೂರ್ಯಕಾಂತ್‌ ಮತ್ತು ನ್ಯಾ। ಜಯಮಾಲ್ಯ ಬಾಗ್ಜಿ ಹಾಗೂ ನ್ಯಾ.ವಿಮೋಹನ ಅವರಿದ್ದ ಪೀಠವು, ‘ಇಂಥ ಮದುವೆಯನ್ನು ನ್ಯಾಯಾಲಯವು ನಿಯಂತ್ರಿಸಲು ಸಾಧ್ಯವಿಲ್ಲ, ಈ ರೀತಿಯ ಮದುವೆಗಳನ್ನು ಸಾಮಾಜಿಕ ಜಾಗೃತಿ ಕಾನೂನುಗಳ ಮೂಲಕ ನಿಯಂತ್ರಿಸುವ ಅಧಿಕಾರವು ಶಾಸಕಾಂಗದ ವ್ಯಾಪ್ತಿಗೆ ಬರುತ್ತದೆ, ಇದರ ಬದಲು ಸೂಕ್ತ ಕಾನೂನು ಜಾರಿ ಅಥವಾ ಪಠ್ಯದಲ್ಲಿ ಸೇರ್ಪಡೆ ಸೇರಿ ವಿವಿಧ ಮಾಧ್ಯಮಗಳ ಮೂಲಕ ವ್ಯಾಪಕ ಜನಜಾಗೃತಿ ಮಾಡಬಹುದು. ಈ ಸೀಮಿತ ಉದ್ದೇಶದೊಂದಿಗೆ ಈ ನೋಟಿಸ್‌ ಅನ್ನು ಜಾರಿ ಮಾಡುತ್ತಿದ್ದೇವೆ’ ಎಂದು ಹೇಳಿತು.

‘ವಂದೇ ಮಾತರಂ’ ಬರೆದ ಮನೇಲಿ ಲಗ್ನ ಮಾಡಿಸಲು ಒಪ್ಪದ ಮೌಲ್ವಿ ವಶಕ್ಕೆ

ವಧುವಿನ ಮನೆಯ ನಾಮಫಲಕದಲ್ಲಿ ‘ವಂದೇ ಮಾತರಂ’ ಮತ್ತು ‘ಜೈ ಹಿಂದ್‌’ ಎಂದು ಬರೆದಿದ್ದುದನ್ನು ನೆಪವಾಗಿಟ್ಟುಕೊಂಡು, ಆಕೆಯ ಮದುವೆ ಮಾಡಿಸುವುದರಿಂದ ಹಿಂದೆ ಸರಿದಿದ್ದ ಮೌಲ್ವಿ ಸುರ್ಖಾನ್ ವಿರುದ್ಧ ಪ್ರಕರಣ ದಾಖಲಾಗಿದೆ. ಆತನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

ಶಹಜಹಾನ್‌ಪುರದ ರೋಜಾ ಪೊಲೀಸ್‌ ಠಾಣಾ ವ್ಯಾಪ್ತಿಯ ನಿವಾಸಿ ಮಹಿಳೆಯ ಮದುವೆ ನ.15ರಂದು ನಿಗದಿಯಾಗಿತ್ತು. ಎಲ್ಲಾ ಸಿದ್ಧತೆಗಳಾದ ಬಳಿಕ, ವಿವಾಹ ನೆರವೇರಿಸಲು ಸ್ಥಳೀಯ ಮೌಲ್ವಿಯಾದ ಸುರ್ಖಾನ್‌ನನ್ನು ಆಹ್ವಾನಿಸಿದಾಗ ಆತ ನಿರಾಕರಿಸಿದ್ದಾನೆ. ಕಾರಣ ಕೇಳಿದರೆ, ‘ನೇಮ್‌ಪ್ಲೇಟ್‌ನಲ್ಲಿ ವಂದೇ ಮಾತರಂ, ಜೈ ಹಿಂದ್‌ ಎಂದು ಬರೆದಿರುವುದರಿಂದ ನಾನು ಆ ಮನೆಯವರ ಮದುವೆ ಮಾಡಿಸಲಾರೆ’ ಎಂದಿದ್ದಾನೆ. ಬಳಿಕ ಇನ್ನೋರ್ವ ಮೌಲ್ವಿ ಆ ಮದುವೆ ಮಾಡಿಸಿದ್ದರು.