*ಪುಟಿನ್‌, ಜೆಲೆನ್‌ಸ್ಕಿಗೆ ಫೋನ್‌ ಮಾಡಿದ್ದು ತಿರುವಿಗೆ ಕಾರಣ*ಉಕ್ರೇನ್‌ನಿಂದ ಬಾಂಗ್ಲನ್ನರ ರಕ್ಷಣೆ: ಮೋದಿಗೆ ಶೇಖ್‌ ಹಸೀನಾ ಧನ್ಯವಾದ*ಉಕ್ರೇನ್‌ನಿಂದ ಸ್ಥಳಾಂತರ: ಭಾರತ ಸರ್ಕಾರಕ್ಕೆ ಪಾಕ್‌ ವಿದ್ಯಾರ್ಥಿನಿ ಧನ್ಯವಾದ

ನವದೆಹಲಿ (ಮಾ. 10): ನರಕಸದೃಶವಾಗಿದ್ದ ಸುಮಿ ನಗರದಿಂದ 650ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳನ್ನು ಸ್ಥಳಾಂತರ ಮಾಡುವಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ 2 ಫೋನ್‌ ಕರೆಗಳು ಮಹತ್ವದ ಪಾತ್ರ ವಹಿಸಿವೆ. ಸುಮಿಯಲ್ಲಿನ ಪರಿಸ್ಥಿತಿ ಘೋರವಾಗಿತ್ತು. ಮೋದಿ ಅವರ ಕರೆ ಸ್ಥಳಾಂತರಕ್ಕೆ ಸಹಾಯ ಮಾಡಿತು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಸುಮಿಯಲ್ಲಿ ಭಾರತೀಯರ ಸ್ಥಳಾಂತರ ಕೈಗೊಳ್ಳುವ ಮೊದಲು, ಭಾರತೀಯರ ಸುರಕ್ಷಿತ ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಪ್ರಧಾನಿ ಅವರು ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಮತ್ತು ಉಕ್ರೇನ್‌ ಅಧ್ಯಕ್ಷ ವೊಲೊದಿಮಿರ್‌ ಜೆಲೆನ್‌ಸ್ಕಿ ಅವರ ಜೊತೆ ಫೋನ್‌ನಲ್ಲಿ ಮಾತನಾಡಿದ್ದರು. ಮೋದಿ ಅವರೊಂದಿಗೆ ಮಾತಾನಾಡಿದ ನಂತರ ಉಭಯ ದೇಶಗಳ ನಾಯಕರು ಸುರಕ್ಷಿತ ಸ್ಥಳಾಂತರಕ್ಕೆ ಹಸಿರು ನಿಶಾನೆ ತೋರಿಸಿದರು ಎಂದು ಅವರು ಹೇಳಿದ್ದಾರೆ.

ಉಕ್ರೇನ್‌ನಿಂದ ಬಾಂಗ್ಲನ್ನರ ರಕ್ಷಣೆ: ಮೋದಿಗೆ ಶೇಖ್‌ ಹಸೀನಾ ಧನ್ಯವಾದ: ಯುದ್ಧಪೀಡಿತ ಉಕ್ರೇನ್‌ನಿಂದ ಭಾರತೀಯ ಪ್ರಜೆಗಳ ಜೊತೆಗೆ ಬಾಂಗ್ಲಾಪ್ರಜೆಗಳನ್ನೂ ಸುರಕ್ಷಿತವಾಗಿ ಕರೆತಂದಿದ್ದಕ್ಕಾಗಿ ಬಾಂಗ್ಲಾದೇಶದ ಪ್ರಧಾನಿ ಶೇಕ್‌ ಹಸೀನಾ ಪ್ರಧಾನಿ ಮೋದಿಯವರಿಗೆ ಧನ್ಯವಾದ ತಿಳಿಸಿದ್ದಾರೆ.

ಇದನ್ನೂ ಓದಿ:Russia Ukraine War: ಕದನವಿರಾಮದಿಂದ ತಗ್ಗಿದ ಯುದ್ಧ ಅಬ್ಬರ!

‘ಆಪರೇಶನ್‌ ಗಂಗಾ’ ಕಾರ್ಯಾಚರಣೆ ವೇಳೆ ಸಮರ ಭೂಮಿ ಉಕ್ರೇನ್‌ನಲ್ಲಿ ಸಿಲುಕಿದ್ದ ಭಾರತೀಯರನ್ನು ಏರ್‌ಲಿಫ್ಟ್‌ ಮಾಡುವಾಗ ಅವರ ಜೊತೆ ಬಾಂಗ್ಲಾ ದೇಶದ 9 ಯುದ್ಧ ಸಂತ್ರಸ್ತರನ್ನು ಭಾರತ ಏರ್‌ಲಿಫ್ಟ್‌ ಮಾಡಿತ್ತು. ಜೊತೆಗೆ ಹಲವಾರು ನೇಪಾಳಿ ಪ್ರಜೆಗಳನ್ನು, ಉಕ್ರೇನ್‌ನಲ್ಲಿದ್ದ ಟ್ಯುನೇಶಿಯಾದ ವಿದ್ಯಾರ್ಥಿಗಳನ್ನು, ಪಾಕಿಸ್ತಾನಿ ಪ್ರಜೆಗಳನ್ನೂ ಭಾರತೀಯ ಅಧಿಕಾರಿಗಳು ವಿಶೇಷ ವಿಮಾನದ ಮೂಲಕ ಸುರಕ್ಷಿತವಾಗಿ ಸ್ಥಳಾಂತರಿಸಿದ್ದರು. ಸದ್ಯ ಪಶ್ಚಿಮ ಉಕ್ರೇನ್‌ನಲ್ಲಿ ಭಾರತ ಸಂತ್ರಸ್ತರ ಸ್ಥಳಾಂತರ ಕಾರ್ಯಾಚರಣೆ ನಡೆಸುತ್ತಿದೆ.

ಫೆಬ್ರವರಿ ಅಂತ್ಯದಲ್ಲಿ ಆರಂಭಗೊಂಡ ರಷ್ಯಾ-ಉಕ್ರೇನ್‌ ಯುದ್ಧದಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ತನ್ನ ಪ್ರಜೆಗಳನ್ನು ಭಾರತ ಕರೆತರಲು ಪ್ರಯತ್ನಿಸುತ್ತಿದೆ ಅದರಲ್ಲೂ ಮುಖ್ಯವಾಗಿ ಉಕ್ರೇನ್‌ನ ಪೂರ್ವಭಾಗದಲ್ಲಿನ ಸುಮಿ ಭಾಗದಲ್ಲಿ ಸುಮಾರು 700 ಭಾರತೀಯ ವಿದ್ಯಾರ್ಥಿಗಳು ಸಂಕಷ್ಟಕ್ಕೊಳಗಾಗಿದ್ದು, ಅವರ ಸ್ಥಳಾಂತರಕ್ಕೆ ಹರಸಾಹಸ ಪಡುತ್ತಿದೆ. ಫೆ.22 ರಿಂದ ಈಚೆಗೆ ಸುಮಾರು 18 ಸಾವಿರ ಮಂದಿಯನ್ನು ವಿಶೇಷ ವಿಮಾನಗಳ ಮೂಲಕ ಉಕ್ರೇನ್‌ನಿಂದ ಕರೆತರಲಾಗಿದೆ.

ಇದನ್ನೂ ಓದಿ: ಉಕ್ರೇನ್‌ ವಿರುದ್ಧ ಯುದ್ದ ಸಾರಿದಾಗ ಮೌನವಿದ್ದ ಅಮೆರಿಕದಿಂದ ಮಹತ್ವದ ಹೆಜ್ಜೆ, ರಷ್ಯಾಗೆ ಶಾಕ್!

ಉಕ್ರೇನ್‌ನಿಂದ ಸ್ಥಳಾಂತರ: ಭಾರತ ಸರ್ಕಾರಕ್ಕೆ ಪಾಕ್‌ ವಿದ್ಯಾರ್ಥಿನಿ ಧನ್ಯವಾದ: ರಷ್ಯಾ-ಉಕ್ರೇನ್‌ ಸಮರದ ತೀವ್ರತೆ ಹೆಚ್ಚುತ್ತಲೇ ಇದೆ. ಈ ಮಧ್ಯೆ ಭಾರತದ ರಾಯಭಾರ ಕಚೇರಿ ಸಹಾಯದಿಂದ ಉಕ್ರೇನ್‌ನಿಂದ ಸುರಕ್ಷಿತವಾಗಿ ಸ್ಥಳಾಂತರಗೊಂಡ ಪಾಕಿಸ್ತಾನಿ ವಿದ್ಯಾರ್ಥಿನಿಯೋರ್ವಳು, ಭಾರತ ದೂತವಾಸ ಕಚೇರಿಗೆ ಹಾಗೂ ಪ್ರಧಾನಿ ಮೋದಿಗೆ ಧನ್ಯವಾದ ಅರ್ಪಿಸಿದ್ದಾಳೆ.

ಪಾಕಿಸ್ತಾನದ ಅಸ್ಮಾ ಶಫೀಕ್‌ ಎಂಬ ವಿದ್ಯಾರ್ಥಿಯನ್ನು ಪಶ್ಚಿಮ ಉಕ್ರೇನ್‌ನಿಂದ ಅಧಿಕಾರಿಗಳು ಸುರಕ್ಷಿತವಾಗಿ ಕರೆತಂದಿದ್ದರು ಎಂದು ಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ಸಂಕಷ್ಟದ ಸಮಯದಲ್ಲಿ ನೆರವಿಗೆ ಬಂದ ಕೀವ್‌ನಲ್ಲಿನ ಭಾರತ ರಾಯಭಾರ ಕಚೇರಿ ಹಾಗೂ ಪ್ರಧಾನಿ ಮೋದಿಯವರಿಗೆ ಕೃತಜ್ಞತೆ ಸಲ್ಲಿಸಿರುವ ಅಸ್ಮಾ, ಭಾರತೀಯ ರಾಯಭಾರ ಕಚೇರಿಯಿಂದಾಗಿ ಉಕ್ರೇನ್‌ನಿಂದ ಬಂದ ನಾವು ಸುರಕ್ಷಿತವಾಗಿ ಮನೆ ತಲುಪುತ್ತೇವೆಂಬ ಭರವಸೆ ಮೂಡಿದೆ ಎಂದಿದ್ದಾಳೆ.

ಯುದ್ಧಪೀಡಿತ ಪ್ರದೇಶದಿಂದ ಕೇವಲ ತನ್ನ ಪ್ರಜೆಗಳನ್ನಷ್ಟೇ ಅಲ್ಲ, ತನ್ನ ನೆರೆ ರಾಷ್ಟ್ರಗಳ ಪ್ರಜೆಗಳ ರಕ್ಷಣೆಗೂ ಭಾರತ ಮುಂದಾಗಿದ್ದು, ಈ ಮೊದಲು ಉಕ್ರೇನ್‌ನಿಂದ ಬಾಂಗ್ಲಾದೇಶಿ, ನೇಪಾಳ ಪ್ರಜೆಗಳನ್ನು ಸುರಕ್ಷಿತವಾಗಿ ಕರೆತಂದಿತ್ತು.