* ರಷ್ಯಾ ಯುದ್ಧ ಸಾರಿದಾಗ ಉಕ್ರೇನ್‌ನ ನೆರವಿಗೆ ಬರಲಿಲ್ಲ ಅಮೆರಿಕ * ಯುದ್ಧ ನಡೆಸಲು ಹಾಗೂ ನಿರಾಶ್ರಿತರ ರಕ್ಷಿಸಲು ಹಣ ಬಳಕೆ* ಉಕ್ರೇನ್‌ಗೆ ಅಮೆರಿಕ ಬರೋಬ್ಬರಿ .1 ಲಕ್ಷ ಕೋಟಿ ನೆರವು

ವಾಷಿಂಗ್ಟನ್‌(ಮಾ.10): ರಷ್ಯಾ ಯುದ್ಧ ಸಾರಿದಾಗ ಉಕ್ರೇನ್‌ನ ನೆರವಿಗೆ ಬರಲಿಲ್ಲ ಎಂಬ ಟೀಕೆ ಎದುರಿಸುತ್ತಿರುವ ಜಗತ್ತಿನ ದೊಡ್ಡಣ್ಣ ಅಮೆರಿಕ ಇದೀಗ ಉಕ್ರೇನ್‌ಗೆ ಬರೋಬ್ಬರಿ 1 ಲಕ್ಷ ಕೋಟಿ ರು. (13.6 ಬಿಲಿಯನ್‌ ಡಾಲರ್‌) ನೆರವು ಘೋಷಿಸಿದೆ. ಉಕ್ರೇನ್‌ ಹಾಗೂ ಅದರ ಯುರೋಪಿಯನ್‌ ಸ್ನೇಹಿತ ರಾಷ್ಟ್ರಗಳಿಗೆ ಈ ಹಣ ಲಭಿಸಲಿದೆ.

ಒಟ್ಟು 1 ಲಕ್ಷ ಕೋಟಿ ರು. ನೆರವಿನಲ್ಲಿ ರಷ್ಯಾದ ದಾಳಿಯನ್ನು ಎದುರಿಸಲು ಉಕ್ರೇನ್‌ಗೆ ಸುಮರು 30 ಸಾವಿರ ಕೋಟಿ ರು. ಲಭಿಸಲಿದೆ. ಉಕ್ರೇನ್‌ನಲ್ಲಿ ನಿರಾಶ್ರಿತರಾಗಿರುವ 20 ಲಕ್ಷಕ್ಕೂ ಅಧಿಕ ಜನರಿಗೆ ಆಶ್ರಯ ನೀಡಲು ಮುಂದೆ ಬರುವ ಪೂರ್ವ ಯುರೋಪಿಯನ್‌ ರಾಷ್ಟ್ರಗಳಿಗೆ ಸುಮಾರು 50 ಸಾವಿರ ಕೋಟಿ ರು. ನೆರವು ಲಭಿಸಲಿದೆ. ಇನ್ನುಳಿದ ಹಣ ಉಕ್ರೇನ್‌ನ ಮರುನಿರ್ಮಾಣಕ್ಕೆ ಬಳಕೆಯಾಗಲಿದೆ ಎಂದು ಶ್ವೇತಭವನದ ಮೂಲಗಳು ಹೇಳಿವೆ.

ಉಕ್ರೇನ್‌ಗೆ ಅಮೆರಿಕದಿಂದ 10 ಬಿಲಿಯನ್‌ ಡಾಲರ್‌ ಮಾನವೀಯ ನೆರವು ನೀಡಲು ಅನುಮತಿ ನೀಡಬೇಕೆಂದು ಅಧ್ಯಕ್ಷ ಜೋ ಬೈಡನ್‌ ಕಳೆದ ವಾರ ಅಮೆರಿಕದ ಸಂಸತ್ತನ್ನು ಕೋರಿದ್ದರು. ಆ ಕೋರಿಕೆಯನ್ನು ಮೀರಿ ಅಮೆರಿಕದ ರಿಪಬ್ಲಿಕನ್‌ ಮತ್ತು ಡೆಮಾಕ್ರೆಟಿಕ್‌ ಪಕ್ಷಗಳ ಸಂಸದರು ಒಮ್ಮತದಿಂದ 13.6 ಬಿಲಿಯನ್‌ ಡಾಲರ್‌ ನೆರವು ನೀಡಲು ಬುಧವಾರ ಒಪ್ಪಿಗೆ ನೀಡಿದ್ದಾರೆ.

ಇದೇ ವೇಳೆ, ಕೊರೋನಾ ವಿರುದ್ಧ ಹೋರಾಡಲು ಇಡೀ ವರ್ಷ 115 ಲಕ್ಷ ಕೋಟಿ ರು. ಖರ್ಚು ಮಾಡುವುದಕ್ಕೂ ಸಂಸದರು ಅಮೆರಿಕದ ಸರ್ಕಾರಕ್ಕೆ ಒಪ್ಪಿಗೆ ನೀಡಿದ್ದಾರೆ.