ಈ ಸುರಂಗದ ವಿಶೇಷತೆ ಎಂದರೆ, ಆಪತ್ಕಾಲದ ಸಂದರ್ಭದಲ್ಲಿ ಪ್ರಯಾಣಿಕರ ರಕ್ಷಣೆಗೆ ತೆಗೆದುಕೊಂಡಿರುವ ಕ್ರಮಗಳು. ಈ ಸುರಂಗಕ್ಕೆ ಸಂವಾದಿಯಾಗಿ ಎಸ್ಕೇಪ್ ಟನಲ್‌ ನಿರ್ಮಾಣ ಮಾಡಲಾಗಿದ್ದು, ಪ್ರತಿ 375 ಮೀಟರ್‌ಗೆ ಒಂದರಂತೆ ಸುರಂಗ ಹಾಗೂ ಎಸ್ಕೇಪ್‌ ಟನಲ್‌ ನಡುವೆ ಸಂಪರ್ಕವಿದೆ. ತುರ್ತು ಸಂದರ್ಭಗಳಲ್ಲಿ ರೈಲಿನಿಂದ ಪ್ರಯಾಣಿಕರನ್ನು ರಕ್ಷಣೆ ಮಾಡಿ, ಎಸ್ಕೇಪ್‌ ಟನಲ್‌ಗೆ ತಂದು ವಾಹನಗಳ ಮೂಲಕ ಕರೆದೊಯ್ಯಬಹುದಾಗಿದೆ.

ಶ್ರೀನಗರ(ಫೆ.21):  ದೇಶದ ಅತ್ಯಂತ ಉದ್ದದ ರೈಲು ಸುರಂಗವೊಂದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಕಾಶ್ಮೀರದ ಉಧಮ್‌ಪುರ- ಶ್ರೀನಗರ- ಬಾರಾಮುಲ್ಲಾ ಮಾರ್ಗದಲ್ಲಿ ಉದ್ಘಾಟನೆ ಮಾಡಿದ್ದಾರೆ. ಇದೇ ವೇಳೆ ಕಾಶ್ಮೀರ ಕಣಿವೆಯ ಮೊದಲ ಎಲೆಕ್ಟ್ರಿಕ್‌ ರೈಲು ಸಂಚಾರಕ್ಕೂ ಹಸಿರು ನಿಶಾನೆ ತೋರಿದ್ದಾರೆ.

48.1 ಕಿ.ಮೀ. ಉದ್ದದ ಬನಿಹಾಲ್‌- ಖಾರಿ- ಸುಂಬೇರ್‌- ಸಂಗಲ್ಡಾನ್‌ ರೈಲು ಮಾರ್ಗವನ್ನು ಮೋದಿ ಲೋಕಾರ್ಪಣೆ ಮಾಡಿದ್ದು, ಈ ಮಾರ್ಗದಲ್ಲೇ ಖಾರಿ- ಸುಂಬೇರ್ ನಡುವೆ 12.77 ಕಿ.ಮೀ. ಉದ್ದದ ಸುರಂಗವನ್ನು ನಿರ್ಮಾಣ ಮಾಡಲಾಗಿದೆ. ಇದು ದೇಶದ ಅತ್ಯಂತ ಉದ್ದದ ರೈಲು ಸುರಂಗ ಎಂಬ ಅಭಿದಾನಕ್ಕೆ ಪಾತ್ರವಾಗಿದೆ.

ಪ್ರತಿ ಗಲ್ಲಿಯ ಪ್ರತಿ ಜನರ ವಿಶ್ವಾಸ ಗಳಿಸಬೇಕು, 100 ದಿನ ನಿರಂತರವಾಗಿ ಹೊಸ ಶಕ್ತಿಯೊಂದಿಗೆ ಕೆಲಸ ಮಾಡಬೇಕು

ಈ ಸುರಂಗವನ್ನು ‘ಟಿ-50’ ಎಂದು ಕರೆಯಲಾಗುತ್ತದೆ. ಇದು ಅತ್ಯಂತ ಸವಾಲಿನ ಸುರಂಗವಾಗಿದೆ. 2010ರಲ್ಲಿ ಇದರ ಕಾಮಗಾರಿ ಆರಂಭವಾಗಿದ್ದು, ಮುಗಿಸಲು 14 ವರ್ಷಗಳಷ್ಟು ಸುದೀರ್ಘ ಸಮಯ ಹಿಡಿದಿದೆ. ಈ ಸುರಂಗದ ವಿಶೇಷತೆ ಎಂದರೆ, ಆಪತ್ಕಾಲದ ಸಂದರ್ಭದಲ್ಲಿ ಪ್ರಯಾಣಿಕರ ರಕ್ಷಣೆಗೆ ತೆಗೆದುಕೊಂಡಿರುವ ಕ್ರಮಗಳು. ಈ ಸುರಂಗಕ್ಕೆ ಸಂವಾದಿಯಾಗಿ ಎಸ್ಕೇಪ್ ಟನಲ್‌ ನಿರ್ಮಾಣ ಮಾಡಲಾಗಿದ್ದು, ಪ್ರತಿ 375 ಮೀಟರ್‌ಗೆ ಒಂದರಂತೆ ಸುರಂಗ ಹಾಗೂ ಎಸ್ಕೇಪ್‌ ಟನಲ್‌ ನಡುವೆ ಸಂಪರ್ಕವಿದೆ. ತುರ್ತು ಸಂದರ್ಭಗಳಲ್ಲಿ ರೈಲಿನಿಂದ ಪ್ರಯಾಣಿಕರನ್ನು ರಕ್ಷಣೆ ಮಾಡಿ, ಎಸ್ಕೇಪ್‌ ಟನಲ್‌ಗೆ ತಂದು ವಾಹನಗಳ ಮೂಲಕ ಕರೆದೊಯ್ಯಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಯಾಣದ ಸಂದರ್ಭದಲ್ಲಿ ರೈಲಿಗೆ ಬೆಂಕಿ ಹೊತ್ತಿಕೊಂಡರೆ, ಅಂತಹ ಪರಿಸ್ಥಿತಿಯನ್ನು ನಿಭಾಯಿಸಲು ಸುರಂಗದ ಎರಡೂ ಬದಿಯಲ್ಲಿ ನೀರಿನ ಪೈಪ್‌ಗಳನ್ನು ಅಳವಡಿಸಲಾಗಿದೆ. ಪ್ರತಿ 375 ಮೀಟರ್‌ಗೆ ಒಂದು ವಾಲ್ವ್‌ ಇಡಲಾಗಿದೆ. ಇದನ್ನು ಬಳಸಿ ಬೆಂಕಿ ನಂದಿಸಬಹುದು.

ಸಮತೋಲಿತ ಅಭಿವೃದ್ಧಿ:

32 ಸಾವಿರ ಕೋಟಿ ರು. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಒದಗಿಸುತ್ತಿದ್ದ ಸಂವಿಧಾನದ 370ನೇ ವಿಧಿ ಕಣಿವೆ ರಾಜ್ಯದ ಅಭಿವೃದ್ಧಿಗೆ ತೊಡಕಾಗಿತ್ತು. ಅದು ರದ್ದಾದ ಬಳಿಕ ಜಮ್ಮು-ಕಾಶ್ಮೀರ ಸಮತೋಲಿತ ಅಭಿವೃದ್ಧಿಯನ್ನು ಕಾಣುತ್ತಿದೆ. ಇದೇ ಮೊದಲ ಬಾರಿಗೆ ಜಮ್ಮು-ಕಾಶ್ಮೀರ ಜನರ ಮನೆಬಾಗಿಲಿಗೆ ಅಭಿವೃದ್ಧಿ ತಲುಪಿದೆ. ಇದು ಮೋದಿ ಗ್ಯಾರಂಟಿಯಾಗಿದ್ದು ನಿರಂತರವಾಗಿ ಮುಂದುವರಿಯುತ್ತದೆ ಎಂದು ಹೇಳಿದರು.