Farm Laws Repeal: ಕೃಷಿ ಕಾಯ್ದೆ ರದ್ದು ನಿರ್ಧಾರ ಸರಿ, ಮೋದಿ ಸರ್ಕಾರ ರೈತಪರ : ಸಮೀಕ್ಷೆ!
*ಕೃಷಿ ಕಾಯ್ದೆ ರದ್ದು ನಿರ್ಧಾರ ಸರಿ: ಸಿ- ವೋಟರ್ ಜನಮತ
*ಮೋದಿ ಸರ್ಕಾರ ನಿಜಕ್ಕೂ ರೈತ ಪರ: ಶೇ.58 ಮಂದಿಯಿಂದ ಅಭಿಪ್ರಾಯ
*ಕೇಂದ್ರ ಸರ್ಕಾರ ಮತ್ತೆ ಕಾಯ್ದೆ ಜಾರಿಗೆ ತರಬೇಕು: ಶೇ.48 ಜನರ ಸಲಹೆ
*ಕೃಷಿ ಕಾಯ್ದೆ ರದ್ದಾಗಲು ರೈತರ ಹೋರಾಟವಲ್ಲ, ಮೋದಿ ಕಾರಣ!
ನವದೆಹಲಿ(ನ.20): ಪ್ರಧಾನಿ ನರೇಂದ್ರ ಮೋದಿ (Narendra Modi) ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು ದಿಢೀರನೆ ಹಿಂಪಡೆದಿದ್ದರಿಂದ (Farm laws repealed) ಅವರ ವರ್ಚಸ್ಸಿಗೆ ಕೊಂಚ ಹಿನ್ನಡೆಯಾಗಿದೆ ಎಂಬ ವಿಶ್ಲೇಷಣೆಗಳು ಸುಳ್ಳು ಎಂದು ಸಮೀಕ್ಷೆಯೊಂದು (Survey) ಹೇಳಿದೆ. ನರೇಂದ್ರ ಮೋದಿ ಅವರು ರೈತಪರ ಪ್ರಧಾನಿ. ಕೃಷಿ ಕಾಯ್ದೆಯನ್ನು ಹಿಂಪಡೆದ ಅವರ ನಿರ್ಧಾರ ಸೂಕ್ತವಾಗಿಯೇ ಇದೆ ಎಂಬುದು ಬಹುತೇಕ ಮಂದಿಯ ಅಭಿಪ್ರಾಯವಾಗಿದೆ ಎಂದು ಸಮೀಕ್ಷೆಯೊಂದು ಹೇಳಿದೆ.
ಮೋದಿ ಸರ್ಕಾರ ರೈತಪರ!
ನ.19ರಂದು ಮೋದಿ ಅವರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆವ ಘೋಷಣೆ ಮಾಡಿದ ಕೆಲವೇ ತಾಸಿನ ಬೆನ್ನಲ್ಲೇ ಸಿ-ವೋಟರ್ ಸಂಸ್ಥೆ ದೇಶಾದ್ಯಂತ ಹಠಾತ್ ಸಮೀಕ್ಷೆಯೊಂದನ್ನು ನಡೆಸಿದೆ. ಅದರಲ್ಲಿ ಭಾಗಿಯಾದ ಶೇ.52 ಮಂದಿಯ ಪ್ರಕಾರ, ಕಾಯ್ದೆ ಹಿಂಪಡೆದ ಮೋದಿ ನಿರ್ಧಾರ ಸರಿಯಾಗಿಯೇ ಇದೆ. ಮತ್ತೊಂದೆಡೆ ಮೋದಿ ಸರ್ಕಾರ ರೈತಪರವಾಗಿದೆ ಎಂದು ಶೇ.58.6ರಷ್ಟುಮಂದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ. ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಕೃಷಿ ಕಾಯ್ದೆಗಳು ರೈತರಿಗೆ ಅನುಕೂಲಕರವೇ ಆಗಿದ್ದವು ಎಂದು ಶೇ.50ಕ್ಕಿಂತ ಅಧಿಕ ಜನರು ಹೇಳಿದ್ದರೆ, ಶೇ.30.6ರಷ್ಟುಮಂದಿ ಮಾತ್ರ ತದ್ವಿರುದ್ಧ ಅಭಿಪ್ರಾಯ ತಿಳಿಸಿದ್ದಾರೆ.
Farm Laws ಹಿಂಪಡೆಯುವ ಘೋಷಣೆ, ತಲೆಕೆಳಗಾದ ಚುನಾವಣಾ ಲೆಕ್ಕಾಚಾರ, ಗೊಂದಲದಲ್ಲಿ ಪಕ್ಷಗಳು!
ಕೃಷಿ ಕಾಯ್ದೆ ವಾಪಸಿಗೆ ರೈತರ ಹೋರಾಟವೇ ಕಾರಣ ಎಂಬ ಅಭಿಪ್ರಾಯ ಇದ್ದರೂ, ಸಮೀಕ್ಷೆಯಲ್ಲಿ ಬೇರೆಯದೇ ಅಂಶ ವ್ಯಕ್ತವಾಗಿದೆ. ಶೇ.40.7ರಷ್ಟುಮಂದಿ ಮೋದಿ ಅವರಿಂದಾಗಿ ಕೃಷಿ ಕಾಯ್ದೆ ರದ್ದಾಗಿದೆ ಎಂದಿದ್ದರೆ, ಶೇ.37ರಷ್ಟುಮಂದಿ ಪ್ರತಿಭಟನಾಕಾರರಿಗೆ ಇದರ ಶ್ರೇಯ ನೀಡಿದ್ದಾರೆ. ಶೇ.22.4ರಷ್ಟುಜನರು ಮಾತ್ರ ಪ್ರತಿಪಕ್ಷಗಳಿಗೆ ಶ್ರೇಯ ಕೊಟ್ಟಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ. ಕೃಷಿ ಕಾಯ್ದೆಗಳ ವಿರುದ್ಧ ನಡೆದ ಹೋರಾಟ ರಾಜಕೀಯ ಪ್ರೇರಿತ. ನರೇಂದ್ರ ಮೋದಿ ಸರ್ಕಾರವನ್ನು ದುರ್ಬಲಗೊಳಿಸುವ ಉದ್ದೇಶ ಹೊಂದಿತ್ತು ಎಂದು ಶೇ.56.7ರಷ್ಟುಮಂದಿ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಆದರೆ ಇದಕ್ಕೆ ಶೇ.35ರಷ್ಟುಮಂದಿ ತದ್ವಿರುದ್ಧ ಅಭಿಪ್ರಾಯ ಹೇಳಿದ್ದಾರೆ.
ಮತ್ತೆ ಜಾರಿಗೆ ತರಬೇಕು:
ಸಂಬಂಧಿಸಿದ ಎಲ್ಲರ ಜತೆ ಸಮಾಲೋಚನೆ ನಡೆಸಿ, ಸೂಕ್ತ ತಿದ್ದುಪಡಿಗಳೊಂದಿಗೆ ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ಮತ್ತೆ ಜಾರಿಗೆ ತರಬೇಕು ಎಂದು ಸಮೀಕ್ಷೆಯಲ್ಲಿ ಭಾಗಿಯಾದ ಶೇ.48ರಷ್ಟುಜನರು ಹೇಳಿದ್ದಾರೆ.
ಕೃಷಿ ಕಾಯ್ದೆ ವಾಪಸ್ ಸರಿಯೇ?
ಸರಿ 52.4% ತಪ್ಪು 30.7% ಗೊತ್ತಿಲ್ಲ 16.9%
ಕಾಯ್ದೆಯಿಂದ ಪ್ರಯೋಜನವಿತ್ತಾ?
ಹೌದು 50.8% ಇಲ್ಲ 30.6% ಗೊತ್ತಿಲ್ಲ 18.6%
PoK retrieve;ಪಾಕ್ ಆಕ್ರಮಿತ ಕಾಶ್ಮೀರ ಹಿಂಪಡೆಯುವುದೇ ಮುಂದಿನ ಅಜೆಂಡಾ; ಕೇಂದ್ರದ ಹೇಳಿಕೆಗೆ ಪಾಕಿಸ್ತಾನ ತಲ್ಲಣ!
3. ಮೋದಿ ಸರ್ಕಾರ ರೈತರ ಪರವೋ? ವಿರುದ್ಧವೋ?
ರೈತಪರ 58.6% ರೈತ ವಿರೋಧಿ 29% ಗೊತ್ತಿಲ್ಲ 12.4%
ಇನ್ನೂ ಮುಗಿಯದ ರೈತರ ಚಳವಳಿ!
ನವೆಂಬರ್ 19ರಂದು ಗುರುನಾನಕ್ ಜಯಂತಿಯ (Gurunank Jayanti) ದಿನದಂದೇ ಪ್ರಧಾನಿ ಮೋದಿ ದೇಶದ ಹಿತದೃಷ್ಟಿಯಿಂದ ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಘೋಷಿಸಿದ್ದರು. ಕೃಷಿ ಕಾನೂನುಗಳ ವಿರೋಧಿಸಿ ರೈತರು ಸುಮಾರು ಒಂದು ವರ್ಷದಿಂದ ಚಳವಳಿ ನಡೆಸುತ್ತಿದ್ದಾರೆ. ಇದುವರೆಗೂ ರೈತರು ಧರಣಿಯನ್ನು ಸಂಪೂರ್ಣವಾಗಿ ನಿಲ್ಲಿಸಿಲ್ಲ. ನಾವು ಎಲ್ಲಾ ಮೂರು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿದ್ದೇವೆ. ಈ ತಿಂಗಳ ಕೊನೆಯಲ್ಲಿ ಪ್ರಾರಂಭವಾಗುವ ಸಂಸತ್ ಅಧಿವೇಶನದಲ್ಲಿ, ಈ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಸಾಂವಿಧಾನಿಕ ಪ್ರಕ್ರಿಯೆಗಳನ್ನು ನಾವು ಪೂರ್ಣಗೊಳಿಸುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದರು. ಸರ್ಕಾರ ಅಂತಿಮವಾಗಿ ರೈತರ ಪ್ರತಿಭಟನೆಗೆ ತಲೆಬಾಗಿದ್ದಕ್ಕೆ ವಿರೋಧ ಪಕ್ಷಗಳು ಪ್ರತಿಕ್ರಿಯಿಸಿದ್ದು ಅಭಿನಂದನೆ ಕೂಡ ಸಲ್ಲಿಸಿವೆ. ಅಲ್ಲದೇ ರೈತರ ಹೋರಾಟಕ್ಕೆ ಸಿಕ್ಕ ಪ್ರತಿಫಲ ಎಂದು ಹಲವರು ಹೇಳಿದ್ದಾರೆ.