ನವದೆಹಲಿ/ವಾರಾಣಸಿ[ಫೆ .15]: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ತಮ್ಮ ಲೋಕಸಭಾ ಕ್ಷೇತ್ರವಾದ ವಾರಾಣಸಿಯಲ್ಲಿನ ಕಾಶಿ ಜಂಗಮವಾಡಿ ಮಠದಲ್ಲಿರುವ ವೀರಶೈವ ಧರ್ಮದ ಶ್ರೀ ಜಗದ್ಗುರು ವಿಶ್ವಾರಾಧ್ಯ ಗುರುಕುಲ ಶತಮಾನೋತ್ಸವದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಮೋದಿಯವರ ಜತೆ ಕರ್ನಾಟಕ ಮುಖ್ಯಮಂತ್ರಿ ಯಡಿಯೂರಪ್ಪ ಅವರೂ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಕಾಶಿ-ಮಥುರಾ ಬೇಡಿಕೆ ಘೋಷಣೆ: ಅಂತರ ಕಾಯ್ದುಕೊಂಡ RSS!

ಮೋದಿಯವರು ವೀರಶೈವ ಧರ್ಮದ ಧರ್ಮಗ್ರಂಥವಾದ ‘ಶ್ರೀ ಸಿದ್ಧಾಂತ ಶಿಖಾಮಣಿ’ಯ 19 ಭಾಷೆಗಳ ಭಾಷಾಂತರ ಕೃತಿಗಳನ್ನು ಬಿಡುಗಡೆಗೊಳಿಸಲಿದ್ದಾರೆ. ಗ್ರಂಥವನ್ನು ಮೊಬೈಲ್‌ ಆ್ಯಪ್‌ ರೂಪದಲ್ಲಿ ಕೂಡ ಹೊರತಂದಿದ್ದು ಇದನ್ನೂ ಕೂಡ ಮೋದಿ ಅವರು ಬಿಡುಗಡೆ ಮಾಡಲಿದ್ದಾರೆ ಎಂದು ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾದ ಕಾಶಿ ಪೀಠದ ಡಾ. ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಹೇಳಿದರು. 

ಕಾಶಿ ವಿಶ್ವನಾಥನ ಸ್ಪರ್ಶ ದರ್ಶನಕ್ಕೆ ಧೋತಿ-ಕುರ್ತಾ, ಸೀರೆ ಕಡ್ಡಾಯ?

ಸಿದ್ಧಾಂತ ಶಿಖಾಮಣಿಯನ್ನು ಶಿವಯೋಗಿ ಶಿವಾಚಾರ‍್ಯರು ಸಂಪಾದಿಸಿದ್ದು, ಜಗದ್ಗುರು ರೇಣುಕಾಚಾರ್ಯರ ಬೋಧನೆಗಳನ್ನು ಒಳಗೊಂಡಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಲು ಯಡಿಯೂರಪ್ಪನವರು ಶನಿವಾರ ಸಂಜೆ ಬೆಂಗಳೂರಿನಿಂದ ವಾರಾಣಸಿಗೆ ತೆರಳಲಿದ್ದಾರೆ.

ಜ್ಯೋತಿರ್ಲಿಂಗ ದರ್ಶನ ರೈಲು:

ಕಾಶಿ ಭೇಟಿಯ ವೇಳೆ ಪ್ರಧಾನಿಯವರು 30 ವಿವಿಧ ಯೋಜನೆಗಳನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಇದೇ ವೇಳೆ ‘ಮಹಾಕಾಲ ಎಕ್ಸ್‌ಪ್ರೆಸ್‌’ ಪ್ರವಾಸಿ ರೈಲಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ. ಈ ರೈಲು ಶಿವನ ಜ್ಯೋತಿರ್ಲಿಂಗ ಕ್ಷೇತ್ರಗಳಾದ ವಾರಾಣಸಿ, ಮಧ್ಯಪ್ರದೇಶದ ಉಜ್ಜಯಿನಿ ಹಾಗೂ ಓಂಕಾರೇಶ್ವರಗಳನ್ನು ಸಂಪರ್ಕಿಸಲಿದೆ.