ಉಡುಪಿ [ಡಿ.29] : ನಾಡಿನ ಯತಿ ಶ್ರೇಷ್ಠ ಸಂತ  ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿಯವರು ದೈವಾಧೀನರಾಗಿದ್ದು, ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. 

ಪೇಜಾವರ ಶ್ರೀಗಳೊಂದಿಗೆ ಹೆಚ್ಚು ನಂಟು ಹೊಂದಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ. ಹಲವು ಬಾರಿ ಸ್ವಾಮೀಜಿಗಳನ್ನು ಭೇಟಿ ಮಾಡಿ ಆತ್ಮೀಯ ಬಂಧವನ್ನು ಹೊಂದಿದ್ದ ಮೋದಿ ಶ್ರೀಗಳ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. 

ಲಕ್ಷಾಂತರ ಜನರ ಮನಸ್ಸು ಹಾಗೂ ಹೃದಯದಲ್ಲಿ ನೆಲೆಸಿದ್ದ, ಸದಾ ಬೆಳಕಿನತ್ತ ದಾರಿ ತೋರಿಸುತ್ತಿದ್ದ ಆಧ್ಯಾತ್ಮಿಕತೆ ಮತ್ತು ಸೇವೆಯ ಮೂರ್ತಿಯಾಗಿದ್ದ ಸಮಾಜದ ಸರ್ವಶ್ರೇಷ್ಠ ಯತಿಗಳು ಅಗಲಿದ್ದು ಅತೀವ ದುಃಖವನ್ನುಂಟು ಮಾಡಿದೆ ಎಂದಿದ್ದಾರೆ. 

ಅವರ ಆಶೀರ್ವಾದ ಪಡೆಯಲು ಹಲವು ಬಾರಿ ಸುವರ್ಣಾವಕಾಶ ಒಲಿದಿತ್ತು. ಗುರುಪೂರ್ಣಿಮೆಯಂದು ಮಹಾನ್ ಯತಿಗಳ ದರ್ಶನ ಪಡೆದಿದ್ದೆ. ಇದೊಂದು ನೆನಪಿನಾಳದಲ್ಲಿ ಉಳಿದ ದಿನವಾಗಿದ್ದು, ಅವರೋರ್ವ ಮಹಾನ್ ಜ್ಞಾನಿ ಎಂದು ಸಂತಾಪ ಸೂಚಿಸಿದ್ದಾರೆ. 

 

ಶಾ ಸಂತಾಪ :  ಇನ್ನು ಗೃಹ ಸಚಿವ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷರಾದ ಅಮಿತ್ ಶಾ ಅವರು ಪೇಜಾವರ ಶ್ರೀಗಳ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. 

ಸಕಾರಾತ್ಮಕತೆಯ ಮೂರ್ತಿಯಾಗಿದ್ದ, ಸದಾ ನಮಗೆ ದಾರಿದೀಪವಾಗಿರುವ ವಿಚಾರಗಳನ್ನು ನೀಡಿದ ಮಹಾನ್ ಸಂತ ನಮ್ಮನ್ನಗಲಿದ್ದಾರೆ. ಅವರ ಅಗಲಿಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ. ಓಂ ಶಾಂತಿ ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.