ಭಾರತದ ಕಾರ್ಯತಂತ್ರದ ಪೆಟ್ರೋಲಿಯಂ ಸಂಗ್ರಹದಲ್ಲಿ ಯುಎಇಯ ಕೊಡುಗೆ 30 ಮಿಲಿಯನ್ ಬ್ಯಾರಲ್‌ಗಳಷ್ಟು ಹೆಚ್ಚಾಗಲಿದೆ. ಸಾಮಾನ್ಯ ಭಾರತೀಯರಿಗೆ ವಾಹನಗಳು ಇಂಧನ ಕೊರತೆಯಿಲ್ಲದೆ ಚಲಿಸಲಿವೆ, ದೂರ ದೇಶದಲ್ಲಿ ತೊಂದರೆ ಉಂಟಾದರೂ ನಮ್ಮ ಅಡುಗೆ ಮನೆಯ ಒಲೆ ತಡೆಯಿಲ್ಲದೆ ಉರಿಯಲಿದೆ ಎನ್ನುವ ಭರವಸೆ ಲಭಿಸಿದೆ.

ಗಿರೀಶ್ ಲಿಂಗಣ್ಣ

Add Asianetnews Kannada as a Preferred SourcegooglePreferred

(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಭಾರತ ಮತ್ತು ಯುಎಇ ಒಂದು ಸ್ಮಾರ್ಟ್ ಸಹಯೋಗವನ್ನು ಏರ್ಪಡಿಸಿಕೊಂಡಿದ್ದು, ಇದು ಭಾರತದ ಇಂಧನ ಭದ್ರತೆಯನ್ನು ಇನ್ನಷ್ಟು ಬಲಪಡಿಸಲಿದೆ. ಮೇ 15, 2026ರಂದು, ಪ್ರಧಾನಿ ನರೇಂದ್ರ ಮೋದಿಯವರ ಯುಎಇ ಭೇಟಿಯ ಸಂದರ್ಭದಲ್ಲಿ, ಉಭಯ ದೇಶಗಳು ಒಂದು ದೊಡ್ಡ ಕಾರ್ಯತಂತ್ರದ ಸಹಕಾರ ಒಪ್ಪಂದಕ್ಕೆ ಸಹಿ ಹಾಕಿದವು. ಇಂಡಿಯನ್ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ಸ್ ಲಿಮಿಟೆಡ್ (ಐಎಸ್‌ಪಿಆರ್‌ಎಲ್) ಮತ್ತು ಅಬು ಧಾಬಿ ನ್ಯಾಷನಲ್ ಆಯಿಲ್ ಕಂಪನಿ (ಎಡಿಎನ್ಒಸಿ) ನಡುವೆ ಈ ಒಪ್ಪಂದ ಏರ್ಪಟ್ಟಿದೆ. ಪ್ರಸ್ತುತ ಒಪ್ಪಂದದ ಪರಿಣಾಮವಾಗಿ, ಭಾರತದ ಕಾರ್ಯತಂತ್ರದ ಪೆಟ್ರೋಲಿಯಂ ಸಂಗ್ರಹದಲ್ಲಿ ಯುಎಇಯ ಕೊಡುಗೆ 30 ಮಿಲಿಯನ್ ಬ್ಯಾರಲ್‌ಗಳಷ್ಟು ಹೆಚ್ಚಾಗಲಿದೆ. ಸಾಮಾನ್ಯ ಭಾರತೀಯರಿಗೆ ಇದರಿಂದ ನಮ್ಮ ವಾಹನಗಳು ಇಂಧನ ಕೊರತೆಯಿಲ್ಲದೆ ಚಲಿಸಲಿವೆ, ದೂರ ದೇಶದಲ್ಲಿ ತೊಂದರೆ ಉಂಟಾದರೂ ನಮ್ಮ ಅಡುಗೆ ಮನೆಯ ಒಲೆ ತಡೆಯಿಲ್ಲದೆ ಉರಿಯಲಿದೆ ಎನ್ನುವ ಭರವಸೆ ಲಭಿಸಿದೆ.

ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ (ಎಸ್‌ಪಿಆರ್) ಎಂದರೆ ಕಚ್ಚಾ ತೈಲ ಸಂಗ್ರಹಣೆಗೆ ಇರುವ ಭಾರೀ ಭೂಗರ್ಭ ಸುರಕ್ಷಾ ಬ್ಯಾಂಕ್ ರೀತಿಯಲ್ಲಿ ಭಾವಿಸಿಕೊಳ್ಳಿ. ಸಮುದ್ರಕ್ಕೆ ಸನಿಹವಿರುವ ನೆಲದಾಳದಲ್ಲಿ ಈ ಬೃಹತ್ ಸಂಗ್ರಹಾಗಾರಗಳನ್ನು ನಿರ್ಮಿಸಿ, ತುರ್ತು ಪರಿಸ್ಥಿತಿಗಾಗಿ ಹೆಚ್ಚುವರಿ ಕಚ್ಚಾ ತೈಲವನ್ನು ಸಂಗ್ರಹಿಸಿ ಇಡಲಾಗುತ್ತದೆ. ಭಾರತ ತನ್ನ ತೈಲ ಅವಶ್ಯಕತೆಯ ಬಹುಪಾಲನ್ನು ಆಮದಿನ ಮೂಲಕವೇ ಹೊಂದುತ್ತದೆ. ಕೊಲ್ಲಿ ಪ್ರದೇಶದಲ್ಲಿರುವ ಹೊರ್ಮುಸ್ ಜಲಸಂಧಿಯಲ್ಲಿ ಯುದ್ಧವೋ, ನಿರ್ಬಂಧವೋ, ಅಥವಾ ಇನ್ನೇನಾದರು ತೊಂದರೆಗಳು ಜರುಗಿದರೆ, ತೈಲ ಸಾಗಿಸುವ ಹಡಗುಗಳ ಆಗಮನ ವಿಳಂಬಗೊಳ್ಳುತ್ತದೆ. ಇಂತಹ ಸಮಯದಲ್ಲಿ, ಈ ಸಂಗ್ರಹಣಾ ವ್ಯವಸ್ಥೆಗಳು ರಾಷ್ಟ್ರೀಯ ಇಂಧನ ಬ್ಯಾಂಕ್ ರೀತಿಯಲ್ಲಿ ಕಾರ್ಯಾಚರಿಸುತ್ತವೆ. ಸರ್ಕಾರ ಈ ತೈಲವನ್ನು ಸಂಸ್ಕರಣಾಗಾರಗಳಿಗೆ ಬಿಡುಗಡೆಗೊಳಿಸಿ, ಪೆಟ್ರೋಲ್, ಡೀಸೆಲ್, ಮತ್ತಿತರ ಇಂಧನಗಳು ತಕ್ಷಣವೇ ಮಾರುಕಟ್ಟೆಯಿಂದ ಮಾಯವಾಗದಂತೆ ತಡೆಯುತ್ತದೆ.

ಭಾರತ ಈಗ ಕಾರ್ಯಾಚರಿಸುತ್ತಿರುವ ಎಸ್‌ಪಿಆರ್ ಘಟಕಗಳನ್ನು ಆಂಧ್ರ ಪ್ರದೇಶದ ವಿಶಾಖಪಟ್ಟಣಂ, ಕರ್ನಾಟಕದ ಪಾದೂರು ಮತ್ತು ಮಂಗಳೂರಿನಲ್ಲಿ ಹೊಂದಿದೆ. ವಿಶಾಖಪಟ್ಟಣಂ 1.33 ಮಿಲಿಯನ್ ಮೆಟ್ರಿಕ್ ಟನ್, ಅಂದರೆ ಅಂದಾಜು 9.7 ಮಿಲಿಯನ್ ಬ್ಯಾರಲ್ ಕಚ್ಚಾ ತೈಲ ಹೊಂದಿದೆ. ಇನ್ನು ಪಾದೂರು 2.5 ಮಿಲಿಯನ್ ಮೆಟ್ರಿಕ್ ಟನ್, ಅಂದರೆ ಸುಮಾರು 18.3 ಮಿಲಿಯನ್ ಬ್ಯಾರಲ್ ಸಂಗ್ರಹ ಹೊಂದಿದೆ. ಮಂಗಳೂರಿನಲ್ಲಿ 1.5 ಮಿಲಿಯನ್ ಮೆಟ್ರಿಕ್ ಟನ್, ಅಂದರೆ ಅಂದಾಜು 11 ಮಿಲಿಯನ್ ಬ್ಯಾರಲ್‌ಗಳ ಸಂಗ್ರಹವಿದೆ. ಈ ಮೂರೂ ಘಟಕಗಳು ಜೊತೆಯಾಗಿ, ಭಾರತಕ್ಕೆ 5.33 ಮಿಲಿಯನ್ ಮೆಟ್ರಿಕ್ ಟನ್ ಅಥವಾ 36ರಿಂದ 39 ಮಿಲಿಯನ್ ಬ್ಯಾರಲ್‌ಗಳಷ್ಟು ಕಾರ್ಯಾಚರಣಾ ಸಂಗ್ರಹವನ್ನು ಒದಗಿಸುತ್ತವೆ. ಒಡಿಶಾದ ಚಂಡಿಖೋಲ್ ಪ್ರದೇಶದಲ್ಲಿ 4 ಮಿಲಿಯನ್ ಮೆಟ್ರಿಕ್ ಟನ್ ಸಾಮರ್ಥ್ಯದ ಘಟಕವನ್ನು ಯೋಜಿಸಲಾಗಿದ್ದು, ಅದು ಇನ್ನೂ ಅಭಿವೃದ್ಧಿ ಹಂತದಲ್ಲಿದೆ.

ಇದು ಯಾಕೆ ಮುಖ್ಯ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕಾದರೆ, ಭಾರತದ ಪ್ರತಿದಿನದ ಭಾರೀ ತೈಲ ಅವಶ್ಯಕತೆಯನ್ನು ಗಮನಿಸಬೇಕಾಗುತ್ತದೆ. ಭಾರತ ಪ್ರತಿದಿನವೂ 5.6 ಮಿಲಿಯನ್ ಬ್ಯಾರಲ್‌ಗಳಷ್ಟು ಕಚ್ಚಾ ತೈಲವನ್ನು ಬಳಸುತ್ತದೆ. ಇದು ಒಂದು ತಿಂಗಳಿಗೆ 168 ಮಿಲಿಯನ್ ಬ್ಯಾರಲ್‌ಗಳಷ್ಟಾಗುತ್ತದೆ (5.6 ಮಿಲಿಯನ್ × 30 ದಿನ). ಒಂದು ಪೂರ್ಣ ವರ್ಷದಲ್ಲಿ ಈ ಅವಶ್ಯಕತೆ ಬಹುತೇಕ 2,044 ಮಿಲಿಯನ್ ಬ್ಯಾರಲ್‌ಗಳಾಗುತ್ತವೆ (5.6 ಮಿಲಿಯನ್ × 365 ದಿನ). ಇದರಲ್ಲಿ ಬಹುಪಾಲು ಆಮದು ಮಾಡಿಕೊಳ್ಳುವುದಾಗಿದ್ದು, ಪೂರೈಕೆಯಲ್ಲಿನ ಯಾವುದೇ ವ್ಯತ್ಯಯ ದರದ ಮೇಲೆ ಮತ್ತು ದೇಶಾದ್ಯಂತ ಇಂಧನ ಲಭ್ಯತೆಯ ಮೇಲೆ ಪರಿಣಾಮ ಬೀರುತ್ತದೆ.

ಮಂಗಳೂರಿನಲ್ಲಿ ಯುಎಇ ತೈಲ ಸಂಗ್ರಹ

ಭಾರತದ ಎಸ್‌ಪಿಆರ್ ಘಟಕಗಳಲ್ಲಿ ತನ್ನ ಕಚ್ಚಾ ತೈಲವನ್ನು ಸಂಗ್ರಹಿಸಲು ಒಪ್ಪಂದ ಮಾಡಿಕೊಂಡಿರುವ ಏಕೈಕ ವಿದೇಶವೆಂದರೆ ಅದು ಯುಎಇ ಮಾತ್ರ. ಎಡಿಎನ್ಒಸಿ ದಾಸ್ ಕ್ರೂಡ್ (ಅತ್ಯುತ್ತಮ ಗುಣಮಟ್ಟದ, ಯುಎಇ ತೈಲಾಗಾರದ ಹಗುರವಾದ, ಕಡಿಮೆ ಗಂಧಕದ ಅಂಶವಿರುವ ಕಚ್ಚಾ ತೈಲವಾಗಿದ್ದು, ಇದನ್ನು ಸುಲಭವಾಗಿ ಸಂಸ್ಕರಿಸಿ ಪೆಟ್ರೋಲ್, ಡೀಸೆಲ್ ಪಡೆಯಬಹುದು) ರೀತಿಯ ತೈಲವನ್ನು 2018ರಿಂದ ಮಂಗಳೂರಿನಲ್ಲಿ ಸಂಗ್ರಹಿಸಲು ಆರಂಭಿಸಿತು. ಆರಂಭದಲ್ಲಿ ಯುಎಇ 5.86 ಮಿಲಿಯನ್ ಬ್ಯಾರಲ್ ತೈಲವನ್ನು ಅಲ್ಲಿ ಸಂಗ್ರಹಿಸಿತು. ಮಂಗಳೂರಿನ ಸಾಮರ್ಥ್ಯದ ಒಂದು ಪಾಲನ್ನು ಯುಎಇಗೆ ಗುತ್ತಿಗೆಗೆ ನೀಡಲಾಗಿದೆ. ಪಾದೂರು ಮತ್ತು ಇತರ ಘಟಕಗಳಲ್ಲೂ ಇಂತಹ ಕ್ರಮ ಕೈಗೊಳ್ಳುವ ಯೋಜನೆಗಳಿದ್ದವು. ಹಾಗೆಂದು ಇದೇನು ದಾನ - ದತ್ತಿಯಲ್ಲ. ಇದು ಉಭಯ ದೇಶಗಳಿಗೂ ಲಾಭದಾಯಕವಾದ ಕಾರ್ಯತಂತ್ರದ ಸಹಭಾಗಿತ್ವವಾಗಿದೆ.

ಭಾರತಕ್ಕೆ ಇದರ ಪ್ರಯೋಜನಗಳು ಸ್ಪಷ್ಟ. ನಮಗೆ ತುರ್ತು ಸಮಯದಲ್ಲಿ ಇಂಧನ ಭದ್ರತೆ ಲಭಿಸುತ್ತದೆ. ಸಂಗ್ರಹಿಸಿದ ತೈಲ ನಮ್ಮ ಭೂಗರ್ಭ ವ್ಯವಸ್ಥೆಗಳಲ್ಲಿ ಸುರಕ್ಷಿತವಾಗಿರುತ್ತದೆ. ಬಿಕ್ಕಟ್ಟಿನ ಸಮಯದಲ್ಲಿ ಭಾರತಕ್ಕೆ ಅದನ್ನು ಬಳಸುವ ಮೊದಲ ಹಕ್ಕಿದೆ. ಇದು ಸಂಸ್ಕರಣಾಗಾರಗಳು ಕಾರ್ಯಾಚರಿಸುವಂತೆ ಮಾಡಿ, ಇದ್ದಕ್ಕಿದ್ದಂತೆ ತೈಲ ಬೆಲೆ ಏರಿಕೆ ಮತ್ತು ತೈಲ ಕೊರತೆಯನ್ನು ನಿಯಂತ್ರಿಸುತ್ತದೆ. ಇನ್ನು ಯುಎಇಗೆ ತನ್ನ ತೈಲವನ್ನು ಭಾರತದಲ್ಲಿ ಸಂಗ್ರಹಿಸುವುದರಿಂದ ನಮ್ಮ ದೊಡ್ಡದಾದ ಮತ್ತು ಬೆಳೆಯುತ್ತಿರುವ ಮಾರುಕಟ್ಟೆಗೆ ಬೇಗನೆ ತೈಲ ಪೂರೈಸಲು ಸಾಧ್ಯವಾಗುತ್ತದೆ. ಯುಎಇಗೆ ಗ್ಯಾರಂಟಿಯಾಗಿ ದೀರ್ಘಾವಧಿಯ ಗ್ರಾಹಕ ಲಭಿಸಿದಂತಾಗುತ್ತದೆ. ಇದು ಸಾಗಾಣಿಕಾ ಮಾರ್ಗಗಳಿಗೆ ವ್ಯತ್ಯಯವಾದರೂ ಯುಎಇಗೆ ರಕ್ಷಣೆ ಒದಗಿಸುತ್ತದೆ. ಈಗಾಗಲೇ ರಕ್ಷಣೆ, ವ್ಯಾಪಾರ, ಹೂಡಿಕೆ, ಮತ್ತಿತರ ಸಂಬಂಧ ಹೊಂದಿರುವ ಉಭಯ ದೇಶಗಳ ಸ್ನೇಹವನ್ನು ಇನ್ನಷ್ಟು ಗಾಢವಾಗಿಸುತ್ತದೆ.

ಇನ್ನು ನೂತನ ಒಪ್ಪಂದ ಈ ಸಹಕಾರವನ್ನು ಇನ್ನಷ್ಟು ಮೇಲಿನ ಹಂತಕ್ಕೆ ಒಯ್ದಿದೆ. ಎಡಿಎನ್ಒಸಿ ಈಗ ಭಾರತದ ಸಂಗ್ರಹಾಗಾರಗಳಲ್ಲಿ 30 ಮಿಲಿಯನ್ ಬ್ಯಾರಲ್‌ಗಳನ್ನು ಸಂಗ್ರಹಿಸಲಿದೆ. ಭವಿಷ್ಯದ ಯೋಜನೆಗಳಲ್ಲಿ ಎಲ್ಎನ್‌ಜಿ ಮತ್ತು ಎಲ್‌ಪಿಜಿ ಸಂಗ್ರಹಣೆಯೂ ಇರಬಹುದು. ಐಒಸಿಎಲ್ ಮತ್ತು ಎಡಿಎನ್ಒಸಿ ನಡುವಿನ ಪ್ರತ್ಯೇಕ ಒಪ್ಪಂದ ನಮ್ಮ ಅಡುಗೆ ಅನಿಲ ಅವಶ್ಯಕತೆಗಳಿಗೆ ದೀರ್ಘಾವಧಿಯ ಎಲ್‌ಪಿಜಿ ಪೂರೈಸಲಿದೆ. ಇದು ಸಾಮಾನ್ಯ ಕುಟುಂಬಗಳಿಗೆ ನಿಜಕ್ಕೂ ವರದಾನವಾಗಲಿದೆ.

ಈ ಮಾದರಿಯ ಕಾರ್ಯಾಚರಣೆ ಪ್ರಾಯೋಗಿಕವೂ, ಸ್ಮಾರ್ಟ್ ಸಹ ಹೌದು. ತೈಲವಂತೂ ಸಂಪೂರ್ಣವಾಗಿ ಭಾರತದಲ್ಲೇ ಇರಲಿದೆ. ಎಡಿಎನ್ಒಸಿ ಒಂದಷ್ಟು ತೈಲವನ್ನು ಮಾರುಕಟ್ಟೆ ಪರಿಸ್ಥಿತಿಯ ಆಧಾರದಲ್ಲಿ ಭಾರತೀಯ ಸಂಗ್ರಹಾಗಾರಗಳಿಗೆ ಮಾರಾಟ ಮಾಡಬಬಹುದು. ಆದರೆ, ರಾಷ್ಟ್ರೀಯ ತುರ್ತು ಸಂದರ್ಭಗಳಲ್ಲಿ ನಮ್ಮ ಸರ್ಕಾರಕ್ಕೆ ಆದ್ಯತೆ ಲಭಿಸುತ್ತದೆ. ಇದು ಒಂದು ರೀತಿಯಲ್ಲಿ ಸಾಮಾನ್ಯ ಪೂರೈಕೆ ಸಮಸ್ಯೆಗೆ ಸೀಲುಕಿದಾಗ ಇಂಧನದ ಮೀಸಲು ಪಡೆ ತಯಾರಾಗಿಟ್ಟಂತೆ ಇರಲಿದೆ.

ಸಾಮಾನ್ಯ ಭಾರತೀಯರಿಗೆ ಈ ಸಹಭಾಗಿತ್ವ ಮನಸ್ಸಿಗೆ ಸಮಾಧಾನ, ನೆಮ್ಮದಿ ತರಲಿದೆ. ಜಾಗತಿಕ ತೈಲ ಬೆಲೆಗಳು ಏರಿಕೆಯಾದಾಗ, ಅಥವಾ ಪೂರೈಕೆ ಸರಪಳಿಗಳು ಸಮಸ್ಯೆಗೆ ಸಿಲುಕಿದಾಗ, ಈ ಸಂಗ್ರಹಗಳು ಮಾರುಕಟ್ಟೆಯನ್ನು ಸ್ಥಿರಗೊಳಿಸುತ್ತವೆ. ಇದು ಇಂಧನ ರಾಜತಾಂತ್ರಿಕತೆ ಕಾರ್ಯಾಚರಿಸುವುದಕ್ಕೆ ಸಾಕ್ಷಿಯಾಗಿದೆ. ಭಾರತ ಈಗ ತನ್ನ ಭವಿಷ್ಯದ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವ ನಿಟ್ಟಿನಲ್ಲಿ ಯುಎಇಯಂತಹ ನಂಬಿಕಾರ್ಹ ಸಹಯೋಗಿಗಳೊಡನೆ ಬಲವಾದ ಬಾಂಧವ್ಯ ವೃದ್ಧಿಸುತ್ತಿದೆ. ಈ ಸಂಬಂಧ ತೈಲದಿಂದಾಚೆಗೆ, ಹಲವಾರು ಕ್ಷೇತ್ರಗಳಿಗೆ ವಿಸ್ತರಿಸುತ್ತಿದ್ದು, ಉಭಯ ದೇಶಗಳನ್ನು ಹೆಚ್ಚು ಸುಭದ್ರ ಮತ್ತು ಸಮೃದ್ಧಗೊಳಿಸುತ್ತದೆ.

ಸರಳವಾಗಿ ಹೇಳುವುದಾದರೆ, ಈ ಯುಎಇ ಒಪ್ಪಂದ ಭಾರತ ಇಂಧನ ವ್ಯವಸ್ಥೆಗೆ ಒಂದು ಪ್ರಬಲ ಹೆಚ್ಚುವರಿ ಜನರೇಟರ್ ಅಳವಡಿಸಿದಂತಾಗುತ್ತದೆ. ಇದು ನಮ್ಮಲ್ಲಿ ಕಷ್ಟದ ಸಮಯದಲ್ಲೂ ಬೆಳಕು ಉರಿಯುವಂತೆ, ವಾಹನಗಳು ಚಲಿಸುವಂತೆ, ಮತ್ತು ದೈನಂದಿನ ಬದುಕು ಸುಗಮವಾಗಿ ಮುಂದುವರಿಯುವಂತೆ ಖಾತ್ರಿಪಡಿಸುತ್ತದೆ. ಮೋದಿಯವರ ಇತ್ತೀಚಿನ ಯುಎಇ ಭೇಟಿಯ ವೇಳೆ ಏರ್ಪಟ್ಟ ಈ ಕಾರ್ಯತಂತ್ರದ ಹೆಜ್ಜೆ ಭಾರತದ ಇಂಧನ ಸ್ವಾಯತ್ತತೆ ಮತ್ತು ರಾಷ್ಟ್ರೀಯ ಭದ್ರತೆಗೆ ಭಾರೀ ಉತ್ತೇಜನ ನೀಡಲಿದೆ.

(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)