ನವದೆಹಲಿ(ಅ.03): ಸಮುದ್ರಮಟ್ಟದಿಂದ 10 ಸಾವಿರ ಅಡಿ ಎತ್ತರದಲ್ಲಿ ನಿರ್ಮಾಣವಾಗಿರುವ, ‘ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗ’ ಎಂಬ ಹಿರಿಮೆಗೆ ಪಾತ್ರವಾಗಿರುವ 9.02 ಕಿ.ಮೀ ಉದ್ದದ ಮನಾಲಿ-ಲೇಹ್‌ ನಡುವಿನ ಸುರಂಗ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಉದ್ಘಾಟಿಸಲಿದ್ದಾರೆ.

"

ಹಿಮಾಚಲಪ್ರದೇಶದಲ್ಲಿರುವ ಈ ಸುರಂಗಕ್ಕೆ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಹೆಸರಿಡಲಾಗಿದ್ದು, ಈ ಸುರಂಗದಿಂದ ಮನಾಲಿ ಹಾಗೂ ಲೇಹ್‌ ನಗರಗಳ ನಡುವಣ ಅಂತರ 46 ಕಿ.ಮೀ.ಯಷ್ಟುತಗ್ಗಲಿದೆ. ಪ್ರಯಾಣ ಅವಧಿ 4ರಿಂದ 5 ತಾಸಿನಷ್ಟುಉಳಿತಾಯವಾಗಲಿದೆ.

ವ್ಯೂಹಾತ್ಮಕವಾಗಿ ಮಹತ್ವವಾಗಿರುವ ಈ ಯೋಜನೆಗೆ 2002ರಲ್ಲಿ ಆಗಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ನೇತೃತ್ವದ ಸರ್ಕಾರ ಚಾಲನೆ ನೀಡಿತ್ತು. 2002ರಲ್ಲಿ ಅಡಿಗಲ್ಲು ಹಾಕಲಾಗಿದ್ದ ಈ ಕಾಮಗಾರಿ 3300 ಕೋಟಿ ರು. ವೆಚ್ಚದಲ್ಲಿ ಪೂರ್ಣಗೊಂಡಿದೆ. ಶುಕ್ರವಾರ ಮನಾಲಿಗೆ ಭೇಟಿ ನೀಡಿದ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಉದ್ಘಾಟನೆಗೆ ಸಜ್ಜಾಗಿರುವ ಸುರಂಗವನ್ನು ಪರಿಶೀಲನೆ ನಡೆಸಿದರು.

9.02 ಕಿ.ಮೀ.: ಸುರಂಗದ ಉದ್ದ

5 ತಾಸು: ಸುರಂಗದಿಂದ ಅವಧಿ ಉಳಿತಾಯ

46 ಕಿ.ಮೀ.: ಮನಾಲಿ, ಲೇಹ್‌ ನಡುವಣ ಅಂತರ ಇಳಿಕೆ

2002ರಲ್ಲಿ ಅಟಲ್‌ರಿಂದ ಶಂಕುಸ್ಥಾಪನೆ

2020ರಲ್ಲಿ ಮೋದಿಯಿಂದ ಉದ್ಘಾಟನೆ

3300 ಕೋಟಿ ರು. ವೆಚ್ಚದ ಸುರಂಗ

4500 ವಾಹನಗಳಿಗೆ ನಿತ್ಯ ಸಂಚಾರಕ್ಕೆ ಅವಕಾಶ

ವಿಶೇಷತೆಗಳು

- ಕುದುರೆ ಲಾಳಾಕೃತಿಯ ದ್ವಿಪಥ ಮಾರ್ಗವನ್ನು ಸುರಂಗ ಹೊಂದಿದೆ

- 8 ಮೀ. ಅಗಲದ ರಸ್ತೆ. 5.525 ಮೀ. ಎತ್ತರದ ವಾಹನ ಚಲಿಸಬಹುದು

- ನಿತ್ಯ 3000 ಕಾರು, 1500 ಲಾರಿಗಳ ಸಂಚಾರಕ್ಕೆ ಅವಕಾಶ

- ಗರಿಷ್ಠ 80 ಕಿ.ಮೀ. ವೇಗದಲ್ಲಿ ಹೋಗಬಹುದು

- ಸರ್ವಋುತು ಸುರಂಗ. ಹಿಮಪಾತ ವೇಳೆಯೂ ವಾಹನ ಸಂಚಾರ

- 150 ಮೀಟರ್‌ಗಳಿಗೊಂದು ಟೆಲಿಫೋನ್‌ ವ್ಯವಸ್ಥೆ

- ಪ್ರತೀ 1 ಕಿ.ಮೀ.ಗೊಂದು ಗಾಳಿಯ ಶುದ್ಧತೆಯ ಪರೀಕ್ಷಾ ವ್ಯವಸ್ಥೆ

- ಪ್ರತೀ 250 ಮೀಟರ್‌ಗೊಂದು ಬ್ರಾಡ್‌ಕಾಸ್ಟ್‌ ವ್ಯವಸ್ಥೆ, ಸಿಸಿ ಕ್ಯಾಮೆರಾ, ಸ್ವಯಂಚಾಲಿತ ಅನಾಹುತ ಘಟನೆ ಪತ್ತೆ ವ್ಯವಸ್ಥೆ