ಪಂಚರಾಜ್ಯ ರಿಸಲ್ಟ್ ದೇಶದ ಮೂಡ್ ತೋರಿಸಿದೆ; ಸ್ಥಿರ, ಶಾಶ್ವತ, ಬದ್ಧತೆಯ ಸರ್ಕಾರಕ್ಕೆ ಜನರ ಮತ: ಮೋದಿ
2024ರ ಲೋಕಸಭೆ ಚುನಾವಣೆಯಲ್ಲೂ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಲಿದೆ. ಜನರು ತಮ್ಮನ್ನು ಏಕೆ ಒಪ್ಪಿಕೊಳ್ಳುತ್ತಿಲ್ಲ ಎಂಬ ಬಗ್ಗೆ ವಿಪಕ್ಷಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದೂ ನುಡಿದಿದ್ದಾರೆ.
ನವದೆಹಲಿ (ಡಿಸೆಂಬರ್ 18, 2023): ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆ ಫಲಿತಾಂಶವು ದೇಶದ ಮೂಡ್ ಏನಿದೆ ಎಂಬುದರ ಸುಳಿವು ನೀಡಿದೆ. ಜನರು ಸ್ಥಿರ, ಶಾಶ್ವತ ಹಾಗೂ ಬದ್ಧತೆಯ ಸರ್ಕಾರಕ್ಕೆ ಮತ ನೀಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಜೊತೆಗೆ, 2024ರ ಲೋಕಸಭೆ ಚುನಾವಣೆಯಲ್ಲೂ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಲಿದೆ. ಜನರು ತಮ್ಮನ್ನು ಏಕೆ ಒಪ್ಪಿಕೊಳ್ಳುತ್ತಿಲ್ಲ ಎಂಬ ಬಗ್ಗೆ ವಿಪಕ್ಷಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದೂ ನುಡಿದಿದ್ದಾರೆ.
ಇದನ್ನು ಓದಿ: ಕಾಶಿ ತಮಿಳ್ ಸಂಗಮಮ್ ಉದ್ಘಾಟಿಸಿದ ಮೋದಿ, ಪ್ರಧಾನಿ ಭಾಷಣ ಟ್ರಾನ್ಸ್‌ಲೇಟ್ ಮಾಡಿದ ಭಾಷಿಣಿ ಎಐ!
ಮಾಧ್ಯಮ ಸಂಸ್ಥೆಯೊಂದರ ಸಂದರ್ಶನದಲ್ಲಿ ಮಾತನಾಡಿದ ಅವರು, ‘ಕೆಲವರು ಬಿಜೆಪಿಗೆ ರಾಷ್ಟ್ರ ಮಟ್ಟದಲ್ಲಿ ಮಾತ್ರ ಜನಬೆಂಬಲವಿದೆ. ರಾಜ್ಯಗಳಲ್ಲಿ ಬೆಂಬಲ ಇಲ್ಲ ಎಂದು ಹೇಳುತ್ತಿದ್ದರು. ಆ ನಂಬಿಕೆಯನ್ನೂ ವಿಧಾನಸಭೆ ಚುನಾವಣೆಗಳ ಫಲಿತಾಂಶ ಸುಳ್ಳಾಗಿಸಿದೆ. ನಾವು ಮೂರು ರಾಜ್ಯಗಳಲ್ಲಿ ಸರ್ಕಾರ ರಚನೆ ಮಾಡಿದ್ದಷ್ಟೇ ಅಲ್ಲ, ತೆಲಂಗಾಣದಲ್ಲೂ ಬಿಜೆಪಿಯ ಮತಗಳಿಕೆ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸಿಕೊಂಡಿದ್ದೇವೆ’ ಎಂದು ಹೇಳಿದರು.
ಹೊಸ ಸಿಎಂಗಳು ಹೊಸಬರಲ್ಲ:
ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಹೊಸಬರನ್ನು ಮುಖ್ಯಮಂತ್ರಿ ಮಾಡಿರುವುದರ ಕುರಿತ ಪ್ರಶ್ನೆಗೆ ಉತ್ತರಿಸಿದ ಮೋದಿ, ‘ಆ ನಾಯಕರಾರೂ ಹೊಸಬರಲ್ಲ. ಅವರಿಗೆ ಅಪಾರ ಅನುಭವವಿದೆ. ಅವರ ಬೆನ್ನಿಗೆ ಅಪಾರ ಪರಿಶ್ರಮವಿದೆ. ಎಲ್ಲಾ ಕ್ಷೇತ್ರಗಳಲ್ಲೂ ಇದೊಂದು ಸಮಸ್ಯೆಯಿದೆ. ಕೆಲ ಹೆಸರು ಅಲ್ಲಿ ದೊಡ್ಡ ಬ್ರ್ಯಾಂಡ್ ಆಗಿ ಬೆಳೆದುಬಿಟ್ಟರೆ ಬೇರೆಯವರಿಗೆ ಗಮನವೇ ಸಿಗುವುದಿಲ್ಲ. ಅವರು ಎಷ್ಟೇ ಪ್ರತಿಭೆ ಹೊಂದಿದ್ದರೂ ನಿರ್ಲಕ್ಷ್ಯಕ್ಕೆ ಒಳಗಾಗುತ್ತಾರೆ. ರಾಜಕೀಯದಲ್ಲೂ ಹೀಗಾಗುತ್ತದೆ. ಬೇರೆಯವರ ಕೊಡುಗೆಯನ್ನು ಇಲ್ಲಿ ಚರ್ಚಿಸುವುದೇ ಇಲ್ಲ. ಆದ್ದರಿಂದಲೇ ಕೆಲವರು ಹೊಸಬರಂತೆ ಕಾಣಿಸುತ್ತಾರೆ. ಆದರೆ ನಿಜವಾಗಿಯೂ ಅವರು ಹೊಸಬರಾಗಿರುವುದಿಲ್ಲ. ಬಹಳ ಕಷ್ಟಪಟ್ಟು, ತಮ್ಮದೇ ಅನುಭವದೊಂದಿಗೆ ಬೆಳೆದಿರುತ್ತಾರೆ’ ಎಂದು ಅಭಿಪ್ರಾಯಪಟ್ಟರು.
370ನೇ ವಿಧಿ ವಾಪಾಸ್ ತರುವ ಯಾವ ಶಕ್ತಿ ಕೂಡ ಜಗತ್ತಿನಲ್ಲಿಲ್ಲ, ಸಂಸತ್ತಿನಲ್ಲಾದ ಘಟನೆ ಕಳವಳಕಾರಿ: ಪ್ರಧಾನಿ ಮೋದಿ
ಕಾಶ್ಮೀರಕ್ಕಿನ್ನು ವಿಶೇಷ ಸ್ಥಾನ ಸಿಗದು:
ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ಹಿಂಪಡೆಯಲು ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿರುವುದರ ಬಗ್ಗೆ ಪ್ರತಿಕ್ರಿಯಿಸಿದ ಮೋದಿ, ‘ಜಗತ್ತಿನ ಯಾವುದೇ ಶಕ್ತಿಯೂ ಇನ್ನು ಅದನ್ನು ಮರಳಿ ತರಲು ಸಾಧ್ಯವಿಲ್ಲ’ ಎಂದು ಮೋದಿ ಹೇಳಿದರು.
ಮೋದಿ ಗ್ಯಾರಂಟಿ ಹಿಂದೆ 4 ಅಂಶ:
ಮೋದಿಯ ಗ್ಯಾರಂಟಿ ಎಂಬುದು ಕೇವಲ ಮೂರು ಅಕ್ಷರವಲ್ಲ. ಅದರಲ್ಲಿ ನಾಲ್ಕು ಅಂಶಗಳಿವೆ. ಅವು - ನೀತಿ, ಉದ್ದೇಶ, ನಾಯಕತ್ವ ಮತ್ತು ಹಿಂದಿನ ಸಾಧನೆ. ಆದ್ದರಿಂದಲೇ ನಾನು ಮೋದಿಯ ಗ್ಯಾರಂಟಿ ಎಂದು ಹೇಳಿದಾಗ ಜನರು ಇಡೀ ಇತಿಹಾಸವನ್ನು ನೋಡುತ್ತಾರೆ. ಜನರು ನಮ್ಮ ನೀತಿ, ನಮ್ಮ ಉದ್ದೇಶ ಹಾಗೂ ನಮ್ಮ ನಾಯಕತ್ವವನ್ನು ಒಪ್ಪಿಕೊಂಡಿದ್ದಾರೆ. ಅವರು ನಿರಂತರವಾಗಿ ನಮ್ಮ ಹಳೆಯ ಸಾಧನೆಗಳ ಮೇಲೆ ಕಣ್ಣಿಟ್ಟಿರುತ್ತಾರೆ ಎಂದು ಮೋದಿ ತಿಳಿಸಿದರು.
ಇಂಡಿಯಾ ಕೂಟದ ಷಡ್ಯಂತ್ರ ವಿಫಲ:
ವಿಪಕ್ಷಗಳ ಇಂಡಿಯಾ ಒಕ್ಕೂಟದ ಬಗ್ಗೆ ಪ್ರತಿಕ್ರಿಯಿಸಿದ ಮೋದಿ, ‘ಇದು ಎದುರಿಗೊಂದು ರೀತಿಯಲ್ಲಿ ಕಾಣಿಸಿದರೆ, ತೆರೆಮರೆಯಲ್ಲಿ ಇದರ ಉದ್ದೇಶ ಬೇರೆಯೇ ಇದೆ. ಬಿಜೆಪಿಯ ಮತ ಒಡೆಯಬೇಕು ಎಂಬ ಉದ್ದೇಶಕ್ಕಾಗಿ ಅವರು ಈ ಮೈತ್ರಿಕೂಟ ರಚಿಸಿಕೊಂಡಿದ್ದಾರೆ. ಆದರೆ ಜನರು ಅವರ ಷಡ್ಯಂತ್ರವನ್ನು ವಿಫಲಗೊಳಿಸಿದ್ದಾರೆ’ ಎಂದು ಹೇಳಿದರು.