ಭ್ರಷ್ಟಾಚಾರದ ವಿರುದ್ಧ ನಾವು ಅರೆಬರೆ ನಿರ್ಧಾರಗಳನ್ನು ಕೈಗೊಂಡಿಲ್ಲ. ಭ್ರಷ್ಟಚಾರವನ್ನು ಸಂಪೂರ್ಣವಾಗಿ ತೊಡೆದು ಹಾಕಲು ಸಂಘಟಿತವಾಗಿ ಮತ್ತು ಸಾಂಸ್ಥಿಕವಾಗಿ ನಿರ್ಧಾರಗಳನ್ನು ಕೈಗೊಂಡೆವು ಎಂದು ಮೋದಿ ಹೇಳಿದ್ದಾರೆ.
ನವದೆಹಲಿ (ಏಪ್ರಿಲ್ 27, 2023): ‘ದೇಶದಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರವನ್ನು ತಡೆಗಟ್ಟಿ, ಕೆಲವರು ಹಣ ಮಾಡಿಕೊಳ್ಳುವ ಅವಕಾಶವನ್ನು ಮುಚ್ಚಿಹಾಕಿದ್ದರಿಂದ ನನ್ನ ಮೇಲೆ ಕೆಲವರು ಕೋಪಗೊಂಡಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಪ್ರತಿಪಕ್ಷಗಳ ವಿರುದ್ಧ ಕಿಡಿಕಾರಿದ್ದಾರೆ. ಖಾಸಗಿ ಸುದ್ದಿ ವಾಹಿನಿ ‘ರಿಪಬ್ಲಿಕ್’ ಆಯೋಜಿಸಿದ್ದ ಶೃಂಗದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಹಲವರು ಭ್ರಷ್ಟಚಾರದಲ್ಲಿ ತೊಡಗಿದ್ದರು. ಆದರೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಇವುಗಳಿಗೆ ಕಡಿವಾಣ ಹಾಕಲಾಯಿತು ಎಂದು ಹೇಳಿದರು.
ಆದರೆ, ‘ಭ್ರಷ್ಟಾಚಾರದ ವಿರುದ್ಧ ನಾವು ಅರೆಬರೆ ನಿರ್ಧಾರಗಳನ್ನು ಕೈಗೊಂಡಿಲ್ಲ. ಭ್ರಷ್ಟಚಾರವನ್ನು ಸಂಪೂರ್ಣವಾಗಿ ತೊಡೆದು ಹಾಕಲು ಸಂಘಟಿತವಾಗಿ ಮತ್ತು ಸಾಂಸ್ಥಿಕವಾಗಿ ನಿರ್ಧಾರಗಳನ್ನು ಕೈಗೊಂಡೆವು. ಹಾಗಾಗಿ ಹಲವರು ನನ್ನ ವಿರುದ್ಧ ಮಾತನಾಡುತ್ತಿದ್ದಾರೆ, ನಿಂದಿಸುತ್ತಿದ್ದಾರೆ. ಹಣ ಮಾಡಿಕೊಳ್ಳುವ ಅವಕಾಶವನ್ನು ಕಿತ್ತುಕೊಂಡ ಕಾರಣ ನನ್ನ ಮೇಲೆ ಕೋಪಗೊಂಡಿದ್ದಾರೆ’ ಎಂದು ಅವರು ಹೇಳಿದರು.
ಇದನ್ನು ಓದಿ: ಮೋದಿ ಆಡಳಿತದಲ್ಲಿ 50000 ಕಿ.ಮೀ. ಹೆದ್ದಾರಿ ನಿರ್ಮಾಣ: ಅತಿ ಉದ್ದದ ರಸ್ತೆ ಜಾಲದಲ್ಲಿ ಭಾರತ ವಿಶ್ವಕ್ಕೇ ನಂ. 2!
‘ಈ ಭ್ರಷ್ಟರು ಎಷ್ಟೇ ದೊಡ್ಡ ಮೈತ್ರಿ ಮಾಡಿಕೊಂಡರೂ ಭ್ರಷ್ಟರೆಲ್ಲ ಒಂದೇ ವೇದಿಕೆಗೆ ಬರಬೇಕು, ಕುಟುಂಬದವರೆಲ್ಲ ಒಂದೇ ಕಡೆ ಬರಬೇಕು, ಆದರೆ ಮೋದಿ ಅವರ ಹಾದಿಯಿಂದ ಹಿಂದೆ ಸರಿಯುತ್ತಿಲ್ಲ. ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದ ವಿರುದ್ಧ ನನ್ನ ಹೋರಾಟ ಮುಂದುವರಿಯಲಿದೆ. ಇವುಗಳಿಂದ ದೇಶವನ್ನು ಮುಕ್ತಗೊಳಿಸುವ ಪ್ರತಿಜ್ಞೆಯೊಂದಿಗೆ ಹೊರಬಂದ ವ್ಯಕ್ತಿ ನಾನು’ ಎಂದು ಮೋದಿ ಹೇಳಿದ್ದಾರೆ.
ಭ್ರಷ್ಟಾಚಾರ ನಿರ್ಮೂಲನೆಯಿಂದ ಬಡವರ ಉನ್ನತಿ: ಪ್ರಧಾನಿ ಮೋದಿ
ಇನ್ನು, ಈ ಶೃಂಗಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಸಮಾಜದಲ್ಲಿನ ಭ್ರಷ್ಟಾಚಾರ ನಿರ್ಮೂಲನೆಯು ಬಡವರನ್ನು ಹೇಗೆ ಮೇಲಕ್ಕೆತ್ತಿದೆ ಎಂಬುದನ್ನು ಎತ್ತಿ ತೋರಿಸಿದರು. "ಕಳೆದ 9 ವರ್ಷಗಳಲ್ಲಿ, ಬಡವರು, ವಂಚಿತರು ಮತ್ತು ಮಧ್ಯಮ ವರ್ಗದವರು ಭ್ರಷ್ಟಾಚಾರವನ್ನು ತೊಡೆದುಹಾಕುವ ಪ್ರಯತ್ನಗಳಿಂದ ತಮ್ಮ ಜೀವನದಲ್ಲಿ ಬದಲಾವಣೆಯನ್ನು ಕಾಣಬಹುದಾಗಿದೆ. ಭಾರತದಲ್ಲಿ ಭ್ರಷ್ಟಾಚಾರದ ವಿರುದ್ಧದ ನನ್ನ ಹೋರಾಟಕ್ಕೆ ನಾನು ಬದ್ಧನಾಗಿದ್ದೇನೆ" ಎಂದೂ ಪ್ರಧಾನಿ ಮೋದಿ ಹೇಳಿದರು.
ಇದನ್ನೂ ಓದಿ: ಭ್ರಷ್ಟರು ಸರ್ಕಾರ, ವ್ಯವಸ್ಥೆಯ ಭಾಗವಾಗಿದ್ದರೂ ಯಾರನ್ನೂ ಬಿಡಬೇಡಿ: ಸಿಬಿಐಗೆ ಪ್ರಧಾನಿ ಮೋದಿ ಸಲಹೆ
ದೇಶ ಅಭಿವೃದ್ಧಿ ಪಥದಲ್ಲಿದೆ:
ಸರ್ಕಾರದ ಯೋಜನೆಗಳಾದ ನೇರ ಲಾಭ ವರ್ಗಾವಣೆ (ಡಿಬಿಟಿ) ಮತ್ತು ಬಡವರ ಸುರಕ್ಷತೆಗಾಗಿ ನೀಡಲಾದ ವಿದ್ಯುತ್ ಮತ್ತು ನೀರಿನ ಸಂಪರ್ಕಗಳು ಈಗ ದೇಶವನ್ನು ಅಭಿವೃದ್ಧಿ ಪಥದಲ್ಲಿ ವೇಗವಾಗಿ ಕೊಂಡೊಯ್ಯುತ್ತಿವೆ. ಅದೇ ರೀತಿ ಆರ್ಥಿಕತೆ 1 ಟ್ರಿಲಿಯನ್ ತಲುಪಲು 60 ವರ್ಷಗಳನ್ನು ತೆಗೆದುಕೊಂಡಿತ್ತು. ನಮ್ಮ ಆಡಳಿತದ 9 ವರ್ಷದ ಅವಧಿಯಲ್ಲಿ ಈಗ ಅದು 3 ಟ್ರಿಲಿಯನ್‌ಗೆ ತಲುಪಿದೆ. ಬಡತನದಲ್ಲೇ ಸಾಗುತ್ತಿದ್ದ ದೇಶ, ಇದೀಗ ಅಭಿವೃದ್ಧಿ ಪಥಕ್ಕೆ ಮರಳಿದೆ. ಸರ್ಕಾರ ಬಡವರಿಗೆ ಒದಗಿಸಿದ ವಿದ್ಯುತ್, ನೀರಿನ ಸಂಪರ್ಕ, ಶೌಚಾಲಯಗಳು ದೇಶದಲ್ಲಿ ಕ್ರಾಂತಿಯನ್ನೇ ಉಂಟು ಮಾಡಿದವು. ‘ಮುದ್ರಾ’ದಂತಹ ಯೋಜನೆಗಳು ಬಡವರಿಗೆ ಗೌರವ ಮತ್ತು ಸುರಕ್ಷತೆಯನ್ನು ಮೊದಲ ಬಾರಿಗೆ ನೀಡಿತು ಎಂದು ಅವರು ಹೇಳಿದರು.
ಇದನ್ನೂ ಓದಿ: ಸುಪ್ರೀಂಕೋರ್ಟ್ ವಿರೋಧ ಪಕ್ಷಗಳಿಗೆ ಹೊಡೆತ ನೀಡಿದೆ: ತನಿಖಾ ಸಂಸ್ಥೆಗಳ ದುರ್ಬಳಕೆ ಆರೋಪಕ್ಕೆ ಚಾಟಿ ಬೀಸಿದ ಮೋದಿ
