ಸುಪ್ರೀಂಕೋರ್ಟ್ ವಿರೋಧ ಪಕ್ಷಗಳಿಗೆ ಹೊಡೆತ ನೀಡಿದೆ: ತನಿಖಾ ಸಂಸ್ಥೆಗಳ ದುರ್ಬಳಕೆ ಆರೋಪಕ್ಕೆ ಚಾಟಿ ಬೀಸಿದ ಮೋದಿ
ಕೆಲವು ದಿನಗಳ ಹಿಂದೆ, ಕೆಲವು ರಾಜಕೀಯ ಪಕ್ಷಗಳು ಇತ್ತೀಚೆಗೆ ಸುಪ್ರೀಂಕೋರ್ಟ್ ಮೊರೆ ಹೋಗಿ, ಭ್ರಷ್ಟಾಚಾರದ ವಿವರ ಹೊಂದಿರುವ ತಮ್ಮ ಪುಸ್ತಕದ ಬಗ್ಗೆ ಯಾರೂ ತನಿಖೆ ಮಾಡಬಾರದು ಎಂದು ಕೋರಿದವು. ಆದರೆ ಇವುಗಳಿಗೆ ಕೋರ್ಟ್ ದೊಡ್ಡ ಹೊಡೆತವನ್ನೇ ನೀಡಿದೆ’ ಎಂದು ಮೋದಿ ಹೇಳಿದರು.
ಹೈದರಾಬಾದ್ (ಏಪ್ರಿಲ್ 9, 2023):‘ಕೇಂದ್ರ ಸರ್ಕಾರವು ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡುತ್ತಿದೆ. ಹೀಗಾಗಿ ದುರ್ಬಳಕೆ ತಡೆಗೆ ಮಾರ್ಗಸೂಚಿ ರೂಪಿಸಬೇಕು’ ಎಂದು ಆಗ್ರಹಿಸಿ ವಿಪಕ್ಷಗಳು ಸಲ್ಲಿಸಿದ್ದ ದೂರನ್ನು ಸುಪ್ರೀಂಕೋರ್ಟ್ ವಜಾ ಮಾಡಿದ ಬೆನ್ನಲ್ಲೇ, ಪ್ರತಿಪಕ್ಷಗಳಿಗೆ ಪ್ರಧಾನಿ ನರೇಂದ್ರ ಮೋದಿ ಚಾಟಿ ಬೀಸಿದ್ದಾರೆ. ‘ನ್ಯಾಯಾಲಯವೇ ವಿರೋಧ ಪಕ್ಷಗಳಿಗೆ ದೊಡ್ಡ ಹೊಡೆತ ನೀಡಿದೆ’ ಎಂದು ಎಂದಿದ್ದಾರೆ.
ಶನಿವಾರ ಇಲ್ಲಿ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ‘ಪ್ರತಿಯೊಂದು ವ್ಯವಸ್ಥೆಯನ್ನೂ ತಮ್ಮ ನಿಯಂತ್ರಣದಲ್ಲೇ ಇಟ್ಟುಕೊಳ್ಳಬಯಸುವ ವಂಶಪಾರಂಪರ್ಯ ಶಕ್ತಿಗಳ ಭ್ರಷ್ಟಾಚಾರ ಮೂಲಕ್ಕೇ ನಮ್ಮ ಸರ್ಕಾರ ಪೆಟ್ಟು ನೀಡಿದೆ. ನಾವು ಭ್ರಷ್ಟಾಚಾರದ ವಿರುದ್ಧ ಹೋರಾಡಬೇಕೇ, ಬೇಡವೇ? ಭ್ರಷ್ಟರ ವಿರುದ್ಧ ಹೋರಾಡಬೇಕೇ, ಬೇಡವೇ? ಈ ದೇಶವನ್ನು ನಾವು ಭ್ರಷ್ಟರಿಂದ ಮುಕ್ತಗೊಳಿಸಬೇಕೇ, ಬೇಡವೇ? ಇಂಥ ಭ್ರಷ್ಟರ ವಿರುದ್ಧ ಕಾನೂನು ತನ್ನ ಕ್ರಮ ಕೈಗೊಳ್ಳಬೇಕೇ, ಬೇಡವೇ? ಎಂದು ಪ್ರಶ್ನಿಸಿದ ಮೋದಿ, ಸರ್ಕಾರದ ಇಂಥ ಕ್ರಮಗಳಿಂದ ಭ್ರಷ್ಟರು ಅಸಮಾಧಾನಗೊಂಡಿದ್ದಾರೆ ಮತ್ತು ಆ ಸಿಟ್ಟಿನಿಂದಲೇ ಅವರು ಏನೇನೋ ಮಾಡುತ್ತಿದ್ದಾರೆ’ ಎಂದು ಹೆಸರು ಹೇಳದೆಯೇ ವಿಪಕ್ಷಗಳು ಇತ್ತೀಚೆಗೆ ಸುಪ್ರೀಂಕೋರ್ಟ್‌ಗೆ ಮೊರೆಹೋದ ವಿಷಯವನ್ನು ಪ್ರಸ್ತಾಪಿಸಿದರು.
ಇದನ್ನು ಓದಿ: ಜನ ಮೋದಿ ವರ್ಚಸ್ಸಿಗೆ ವೋಟ್ ಹಾಕಿದ್ದಾರೇ ಹೊರತು ಪದವಿ ನೋಡಲ್ಲ: ನಮೋ ಪರ ಬ್ಯಾಟ್ ಬೀಸಿದ ಎನ್‌ಸಿಪಿ ನಾಯಕ
ಜೊತೆಗೆ ‘ಕೆಲವು ದಿನಗಳ ಹಿಂದೆ, ಕೆಲವು ರಾಜಕೀಯ ಪಕ್ಷಗಳು ಇತ್ತೀಚೆಗೆ ಸುಪ್ರೀಂಕೋರ್ಟ್ ಮೊರೆ ಹೋಗಿ, ಭ್ರಷ್ಟಾಚಾರದ ವಿವರ ಹೊಂದಿರುವ ತಮ್ಮ ಪುಸ್ತಕದ ಬಗ್ಗೆ ಯಾರೂ ತನಿಖೆ ಮಾಡಬಾರದು ಎಂದು ಕೋರಿದವು. ಆದರೆ ಇವುಗಳಿಗೆ ಕೋರ್ಟ್ ದೊಡ್ಡ ಹೊಡೆತವನ್ನೇ ನೀಡಿದೆ’ ಎಂದರು.
ಇತ್ತೀಚೆಗೆ ಕಾಂಗ್ರೆಸ್ ಹಾಗೂ 14 ಪ್ರತಿಪಕ್ಷಗಳು, ‘ಇ.ಡಿ. ಹಾಗೂ ಸಿಬಿಐನಂಥ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ದುರುಪಯೋಗ ಮಾಡಿಕೊಂಡು ಪ್ರತಿಪಕ್ಷಗಳ ವಿರುದ್ಧ ಛೂ ಬಿಡುತ್ತಿವೆ’ ಎಂದು ಸುಪ್ರೀಂಕೋರ್ಟ್ ಕದ ಬಡಿದಿದ್ದವು.
ಇದನ್ನೂ ಓದಿ: ಭ್ರಷ್ಟರು ಸರ್ಕಾರ, ವ್ಯವಸ್ಥೆಯ ಭಾಗವಾಗಿದ್ದರೂ ಯಾರನ್ನೂ ಬಿಡಬೇಡಿ: ಸಿಬಿಐಗೆ ಪ್ರಧಾನಿ ಮೋದಿ ಸಲಹೆ
ಮೋದಿ ಹೇಳಿದ್ದೇನು?
- ನ್ಯಾಯಾಲಯವೇ ವಿರೋಧ ಪಕ್ಷಗಳಿಗೆ ದೊಡ್ಡ ಹೊಡೆತ ನೀಡಿದೆ
- ಎಲ್ಲವನ್ನೂ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಬಯಸುವವರಿಗೆ ನಮ್ಮ ಸರ್ಕಾರ ಪೆಟ್ಟು ನೀಡಿದೆ
- ನಾವು ಭ್ರಷ್ಟಾಚಾರದ ವಿರುದ್ಧ ಹೋರಾಡಬೇಕೇ, ಬೇಡವೇ?
- ಸರ್ಕಾರದ ಕ್ರಮದಿಂದ ಕಂಗೆಟ್ಟು ಭ್ರಷ್ಟರು ಸಿಟ್ಟಿನಲ್ಲಿ ಏನೇನೋ ಮಾತಾಡುತ್ತಿದ್ದಾರೆ
ಇದನ್ನೂ ಓದಿ: ಪ್ರಧಾನಿ ಮೋದಿ ಮತ್ತೆ ಜಗತ್ತಿನಲ್ಲೇ ನಂ. 1 ಜನಪ್ರಿಯ ನಾಯಕ