ನವದೆಹಲಿ(ಜ.21): ಪ್ರಧಾನಿ ಮೋದಿ ಅವರ ವಿದ್ಯಾರ್ಥಿಗಳೊಂದಿಗಿನ 'ಪರೀಕ್ಷಾ ಪೇ ಚರ್ಚಾ' ಕಾರ್ಯಕ್ರಮವನ್ನು ಟೀಕಿಸಿರುವ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ, ಇದರ ಬದಲು ಪ್ರಧಾನಿ 'ನೌಕರಿ ಪೇ ಚರ್ಚಾ' ಮಾಡಲಿ ಎಂದು ವ್ಯಂಗ್ಯವಾಡಿದ್ದಾರೆ.

ದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿದ್ದು, ಪರೀಕ್ಷೆ ಬರೆದು ನೌಕರಿಗೆ ಸಜ್ಜಾಗುವ ಯುವಕರಿಗೆ ಉದ್ಯೋಗ ಕೊಡುವತ್ತ ಮೋದಿ ಸರ್ಕಾರ ಮೊದಲು ಗಮನಹರಿಸಲಿ ಎಂದು ಸೀತಾರಾಮ್ ಯೆಚೂರಿ ಹೇಳಿದ್ದಾರೆ.

ಪ್ರಧಾನಿ ಮೋದಿಯೊಂದಿಗೆ ವಿದ್ಯಾರ್ಥಿಗಳ ಪರೀಕ್ಷಾ ಪೇ ಚರ್ಚಾ

ಉದ್ಯೋಗದ ಪ್ರಮಾಣ ಕ್ಷೀಣಿಸುತ್ತಿರುವುದಕ್ಕೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಯೆಚೂರಿ, ಸ್ವಾತಂತ್ರ್ಯ ನಂತರ ದೇಶದಲ್ಲಿ ನಿರುದ್ಯೋಗ ಪ್ರಮಾಣ ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿದೆ ಎಂದು ಹರಿಹಾಯ್ದರು.

ಈ ಕುರಿತು ಟ್ವೀಟ್ ಮಾಡಿರುವ ಯೆಚೂರಿ, ಅಪನಗದೀಕರಣ ಹಾಗೂ ಜಿಎಸ್'ಟಿ ಜಾರಿಯ ಬಳಿಕ ಲಕ್ಷಾಂತರ ಸಂಖ್ಯೆಯಲ್ಲಿ ಉದ್ಯೋಗ ನಷ್ಟವಾಗಿದ್ದು, ಮೋದಿ ಮೊದಲು 'ನೌಕರಿ ಪೇ ಚರ್ಚಾ' ಮಾಡಲಿ ಎಂದು ಸಲಹೆ ನೀಡಿದ್ದಾರೆ.

15-19 ವರ್ಷ ನಡುವಿನ ಶೇ. 45, 20-24 ವರ್ಷದೊಳಗಿನ ಶೇ. 37ರಷ್ಟು ಯುವಕರಿಗೆ ಉದ್ಯೋಗವಿಲ್ಲವಾಗಿದ್ದು, ನಗರ ಪ್ರದೇಶದಲ್ಲಿ ನಿರುದ್ಯೋಗ ಪ್ರಮಾಣ ಶೇ.44ರಷ್ಟಿದೆ ಎಂಬುದನ್ನು ಮೋದಿ ಮರೆಯಬಾರದು ಎಂದು ಯೆಚೂರಿ ಕಿಡಿಕಾರಿದ್ದಾರೆ.