ನವದೆಹಲಿ [ಜ.20]: ವಿದ್ಯಾರ್ಥಿಗಳಲ್ಲಿ ಪರೀಕ್ಷೆ ಭಯ ನಿವಾರಿಸಿ ಆತ್ಮ ಸ್ಥೈರ್ಯ ತುಂಬುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಇಂದು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರ ಜೊತೆ ಸಂವಾದ ನಡೆಸಲಿದ್ದಾರೆ. ದೆಹಲಿಯ ತಾಲ್ಕತೋರಾ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಮೂರನೇ ಆವೃತ್ತಿಯ ‘ಪರೀಕ್ಷಾ ಪೇ ಚರ್ಚಾ’ ಕಾರ್ಯಕ್ರಮದ ವೇಳೆ ಮೋದಿ ಅವರು ವಿದ್ಯಾರ್ಥಿಗಳು ಕೇಳುವ ಪ್ರಶ್ನೆಗೆ ಉತ್ತರಿಸುವುದರ ಜೊತೆಗೆ ಪರೀಕ್ಷೆಗೆ ಸಜ್ಜಾಗಲು ಕೆಲವೊಂದು ಉಪಯುಕ್ತ ಸಲಹೆಗಳನ್ನು ನೀಡಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ವಿವಿಧ ರಾಜ್ಯಗಳ 2000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮ ಬೆಳಗ್ಗೆ 11 ಗಂಟೆಗೆ ಆರಂಭವಾಗಲಿದ್ದು, ಯೂಟ್ಯೂಬ್ ಹಾಗೂ ಡಿಡಿ ನ್ಯಾಷನಲ್‌ನಲ್ಲಿ ನೇರ ಪ್ರಸಾರ ಆಗಲಿದೆ. ಆನ್‌ಲೈನ್‌ನಲ್ಲಿ ಕಿರು ಪ್ರಬಂಧ ಸ್ಪರ್ಧೆ ಏರ್ಪಡಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವ 1050  ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ. 

ಐದು ವಿಷಯಗಳ ಬಗ್ಗೆ ವಿದ್ಯಾರ್ಥಿಗಳು ಬರೆದ ಪ್ರಬಂಧವನ್ನು ಆಧರಿಸಿ ಸಂವಾದದ ವೇಳೆ ಮೋದಿ ಅವರಿಗೆ ಪ್ರಶ್ನೆಗಳನ್ನು ಕೇಳಲಿರುವ ವಿದ್ಯಾರ್ಥಿಗಳನ್ನು ಪಟ್ಟಿ ಮಾಡಲಾಗಿದೆ. ಕಾರ್ಯಕ್ರಮದ ವೇಳೆ ಸಮಯಾವಕಾಶಕ್ಕೆ ತಕ್ಕಂತೆ ವಿದ್ಯಾರ್ಥಿಗಳು ಕೇಳುವ ಪ್ರಶ್ನೆಗಳಿಗೆ ಮೋದಿ ಉತ್ತರ ನೀಡಲಿದ್ದಾರೆ. ಈ ಬಾರಿ ಕಾರ್ಯಕ್ರಮಕ್ಕೆ ಪ್ರವೇಶ ಪಡೆಯಲು ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 

ಕಳೆದ ವರ್ಷ 1.4 ಲಕ್ಷ ಆಕಾಂಕ್ಷಿತ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಆದರೆ, ಈ ವರ್ಷ 2.6 ಲಕ್ಷ ಆಕಾಂಕ್ಷಿತರು ಪ್ರಬಂಧಗಳನ್ನು ಕಳುಹಿಸಿಕೊಟ್ಟಿದ್ದರು ಎಂದು ಮಾನವ ಸಂಪನ್ಮೂಲ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಬಳ್ಳಾರಿ ಹಳ್ಳಿ ಪ್ರತಿಭೆ 'ಪರೀಕ್ಷಾ ಪೇ ಚರ್ಚಾ'ಗೆ ದೆಹಲಿಗೆ ತೆರಳಿದ ರೋಚಕ ಕಥೆಯಿದು...
 
ಇದೇ ವೇಳೆ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸರಣಿ ಟ್ವೀಟ್‌ಗಳನ್ನು ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ‘ಪರೀಕ್ಷೆಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ನಾವು ಮತ್ತೊಮ್ಮೆ ವಿಸ್ತೃತ ಮತ್ತು ಗಹನವಾದ ಚರ್ಚೆ ನಡೆಸಲಿದ್ದೇವೆ. ಪರೀಕ್ಷೆಯ ವೇಳೆ ಒತ್ತಡ ರಹಿತವಾಗಿ ಮತ್ತು ಸಂತೋಷದಿಂದ ಇರುವುದು ಹೇಗೆ ಎಂಬುದನ್ನು ಚರ್ಚಿಸಲಿದ್ದೇವೆ. ಪರೀಕ್ಷಾ ಪೇ ಚರ್ಚಾ 2020 ರಲ್ಲಿ ಪಾಲ್ಗೊಳ್ಳುವಂತೆ ನಿಮ್ಮೆಲ್ಲರನ್ನೂ ಆಹ್ವಾನಿಸುತ್ತಿದ್ದೇನೆ’ ಎಂದು ಹೇಳಿದ್ದಾರೆ.

ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರು ತಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ನೀಡಿದ್ದಾರೆ. ಈ ಸಲಹೆಗಳು ಅತ್ಯಂತ ಅಮೂಲ್ಯ ಎಂದು ಮೋದಿ ಶ್ಲಾಘಿಸಿದ್ದಾರೆ. ಮೋದಿ ಅವರು ನಡೆಸಿಕೊಡುತ್ತಿರುವ 3ನೇ ಆವೃತ್ತಿಯ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮ ಇದಾಗಿದ್ದು, 2018 ರ ಪರೀಕ್ಷಾ ಪೇ ಚರ್ಚಾ ಆವೃತ್ತಿಯ ವೇಳೆ ಮೋದಿ ಅವರು 10 ಪ್ರಶ್ನೆಗಳಿಗೆ ಉತ್ತರಿಸಿದ್ದರು.

ಕಳೆದ ವರ್ಷ 16 ಪ್ರಶ್ನೆಗಳಿಗೆ ಉತ್ತರ ನೀಡಿದ್ದರು. 1.8 ಕೋಟಿ ವಿದ್ಯಾರ್ಥಿಗಳು ಟೀವಿಯಲ್ಲಿ ಈ ಕಾರ್ಯಕ್ರಮ ವೀಕ್ಷಿಸಿದ್ದರು. ಕರ್ನಾಟಕದ 30 ವಿದ್ಯಾರ್ಥಿಗಳು ಭಾಗಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜತೆ ನಡೆಯಲಿರುವ ‘ಪರೀಕ್ಷಾ ಪೇ ಚರ್ಚಾ-2020 ’ ಸಂವಾದ ಕಾರ್ಯಕ್ರಮದಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳ ೩೦ಕ್ಕೂ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಆನ್‌ಲೈನ್ ಮೂಲಕ ಇವರು ಸಲ್ಲಿಸಿದ್ದ ಪ್ರಬಂಧದ  ಆಧಾರದ ಮೇಲೆ ಸಂವಾದಕ್ಕೆ ಆಯ್ಕೆ ಮಾಡಲಾಗಿದ್ದು ಇವರಲ್ಲಿ ಕೆಲವರಿಗೆ ಪ್ರಧಾನಿಗೆ ನೇರವಾಗಿ ಪ್ರಶ್ನೆ ಕೇಳುವ ಅವಕಾಶ ದೊರೆಯಲಿದೆ. 

"