Asianet Suvarna News Asianet Suvarna News

ಮೋದಿ ಮೈತ್ರಿ ನಿರಾಕರಿಸಿದ್ದೆ: ಪವಾರ್ ಹೇಳಿಕೆಯಿಂದ ಭಾರೀ ಸಂಚಲನ!

* ಹಿಡಿದ ಕೆಲಸ ಬಿಡದ ಛಲಗಾರ ಮೋದಿ: ಪವಾರ್‌

* ಎನ್‌ಸಿಪಿ-ಬಿಜೆಪಿ ಮೈತ್ರಿ ಬಯಸಿದ್ದ ಪ್ರಧಾನಿ

* ಮೋದಿ ವಿರುದ್ಧ ಸೇಡಿನ ರಾಜಕೀಯ ವಿರೋಧಿಸಿದ್ದೆ

PM Modi Said Think Over It When I Said Alliance Not Possible Sharad Pawar pod
Author
Bangalore, First Published Dec 31, 2021, 7:20 AM IST
  • Facebook
  • Twitter
  • Whatsapp

ಪುಣೆ(ಡಿ.31): ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಎನ್‌ಸಿಪಿ ಅಧ್ಯಕ್ಷ ಶರದ್‌ ಪವಾರ್‌ ಅವರು, ಹಿಡಿದ ಕೆಲಸವನ್ನು ಪಟ್ಟುಬಿಡದೆ ಮಾಡಿ ಮುಗಿಸುವ ಎದೆಗಾರಿಕೆ ಮೋದಿ ಅವರದ್ದು ಎಂದು ಬಣ್ಣಿಸಿದ್ದಾರೆ.

ಮರಾಠಿ ದಿನಪತ್ರಿಕೆ ಲೋಕಸತ್ತಾ ಪುಣೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಪವಾರ್‌ ಅವರು, ‘ಆಡಳಿತದ ಮೇಲೆ ಬಿಗಿ ಹಿಡಿತ ಸಾಧಿಸಿರುವ ಮೋದಿ ಅವರು, ತಾವು ಹಿಡಿದ ಕೆಲಸ ಕೊನೇ ಘಟ್ಟತಲುಪುವವರೆಗೆ ವಿರಮಿಸುವುದಿಲ್ಲ. ಮೋದಿ ಅವರು ತಮ್ಮ ಸಂಪುಟ ಸದಸ್ಯರನ್ನು ವಿಭಿನ್ನ ಶೈಲಿಯಲ್ಲಿ ತಮ್ಮೊಂದಿಗೆ ಕರೆದೊಯ್ಯುತ್ತಾರೆ. ಹಿಂದಿನ ಪ್ರಧಾನಿ ಮನಮೋಹನ ಸಿಂಗ್‌ ಅವರಿಂದ ಇದು ಸಾಧ್ಯವಾಗಲಿಲ್ಲ’ ಎಂದು ಹೇಳಿದರು.

ಎನ್‌ಸಿಪಿ-ಬಿಜೆಪಿ ಮೈತ್ರಿ ಬಯಸಿದ್ದ ಪ್ರಧಾನಿ

2019ರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಬಳಿಕ ರಾಜ್ಯದಲ್ಲಿ ಸರ್ಕಾರ ರಚನೆಗಾಗಿ ಎನ್‌ಸಿಪಿ ಮತ್ತು ಬಿಜೆಪಿ ಮೈತ್ರಿ ಮಾಡಿಕೊಳ್ಳಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಅಪೇಕ್ಷೆಯಾಗಿತ್ತು. ಆದರೆ ನಾನು ಅದಕ್ಕೆ ನಿರಾಕರಿಸಿದ್ದೆ ಎಂದು ಎನ್‌ಸಿಪಿ ನಾಯಕ ಶರದ್‌ ಪವಾರ್‌ ಹೇಳಿದ್ದಾರೆ.

2019ರಲ್ಲಿ ಪ್ರಧಾನಿ ಕಚೇರಿಯಲ್ಲಿ ನಮ್ಮ ಭೇಟಿ ನಡೆದಿತ್ತು. ಆಗ ಮೋದಿ ಅವರು, ‘ಬಿಜೆಪಿ-ಎನ್‌ಸಿಪಿ ಮೈತ್ರಿ ಮಾಡಿಕೊಳ್ಳೋಣ’ ಎಂದರು. ಆದರೆ. ‘ನಮ್ಮ ನಿಲುವುಗಳು ನಿಮ್ಮೊಂದಿಗೆ ಸರಿಹೊಂದುವುದಿಲ್ಲ. ಹೀಗಾಗಿ ರಾಜ್ಯದಲ್ಲಿ ಬಿಜೆಪಿ ಮತ್ತು ಎನ್‌ಸಿಪಿ ಮೈತ್ರಿ ಸಾಧ್ಯವೇ ಇಲ್ಲ ಎಂಬ ಮಾತನ್ನು ಹೇಳಿದ್ದೆ. ಇದಕ್ಕೆ ಈ ಬಗ್ಗೆ ಮತ್ತೊಮ್ಮೆ ಚಿಂತನೆ ಮಾಡಿ ಎಂದು ನನಗೆ ಮೋದಿ ಅವರು ಸಲಹೆ ನೀಡಿದ್ದರು’ ಎಂದು ಪವಾರ್‌ ಹೇಳಿದರು.

ಮೋದಿ ವಿರುದ್ಧ ಸೇಡಿನ ರಾಜಕೀಯ ವಿರೋಧಿಸಿದ್ದೆ: ಪವಾರ್‌

‘2004ರಿಂದ 2014ರ ವೇಳೆ ಕೇಂದ್ರದಲ್ಲಿ ಯುಪಿಎ ಮೈತ್ರಿ ಸರ್ಕಾರವಿದ್ದ ಅವಧಿಯಲ್ಲಿ ಆಗ ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರ ವಿರುದ್ಧದ ಸೇಡಿನ ರಾಜಕಾರಣಕ್ಕೆ ನಾನು ಮತ್ತು ಆಗಿನ ಪ್ರಧಾನಿ ಡಾ. ಮನಮೋಹನ್‌ ಸಿಂಗ್‌ ವಿರೋಧಿಸಿದ್ದೆವು’ ಎಂದು ಶರದ್‌ ಪವಾರ್‌ ಬಹಿರಂಗಪಡಿಸಿದ್ದಾರೆ.

:ಡಾ. ಸಿಂಗ್‌ ಅವರು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿ ಸಭೆ ಕರೆದಾಗ, ಮುಖ್ಯಮಂತ್ರಿಯಾಗಿದ್ದ ಮೋದಿ ಅವರು ಬಿಜೆಪಿ ಮುಖ್ಯಮಂತ್ರಿಗಳ ನೇತೃತ್ವ ವಹಿಸುತ್ತಿದ್ದರು. ಕೇಂದ್ರದ ವಿರುದ್ಧ ಕಟು ಟೀಕಾಪ್ರಹಾರ ನಡೆಸುತ್ತಿದ್ದರು. ಈ ವೇಳೆ ನನ್ನನ್ನು ಹೊರತುಪಡಿಸಿ ಯುಪಿಎ ಸರ್ಕಾರದ ಯಾವುದೇ ಸಚಿವರು ಮೋದಿ ಅವರ ಜತೆ ಮಾತನಾಡುವ ಅಥವಾ ಸಭೆ ನಡೆಸುವ ಧೈರ್ಯ ಪ್ರದರ್ಶಿಸುತ್ತಿರಲಿಲ್ಲ’ ಎಂದಿದ್ದಾರೆ.

Follow Us:
Download App:
  • android
  • ios