ಬಿಬಿಸಿ ಸಾಕ್ಷ್ಯಚಿತ್ರ ನಿಷೇಧದ ಮೂಲ ದಾಖಲೆ ಸಲ್ಲಿಸಲು ಕೇಂದ್ರಕ್ಕೆ ನೋಟಿಸ್‌!

ಪ್ರಧಾನಿ ನರೇಂದ್ರ ಮೋದಿ ಅವರ ಕುರಿತಾಗಿ ಬಿಬಿಸಿ ನಿರ್ಮಾಣ ಮಾಡಿದ ಎರಡು ಸಿರೀಸ್‌ನ 'ಇಂಡಿಯಾ: ದ ಮೋದಿ ಕ್ವಶ್ಚೆನ್‌' ಸಾಕ್ಷ್ಯಚಿತ್ರಕ್ಕೆ ಕೇಂದ್ರ ಸರ್ಕಾರ ನಿಷೇಧ ಹೇರಿದೆ. ಈ ನಿಷೇಧದ ಮೂಲ ದಾಖಲೆ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ನೋಟಿಸ್‌ ನೀಡಿದೆ.
 

Supreme Court Notice To Centre Over Appeals Against Blocking controversial BBC documentary san

ನವದೆಹಲಿ (ಫೆ.4): 2002ರ ಗುಜರಾತ್‌ ಗಲಭೆಗಳಲ್ಲಿ ಅಂದಿನ ಗುಜರಾತ್‌ ಮುಖ್ಯಮಂತ್ರಿ ಹಾಗೂ ಹಾಲಿ ಪ್ರಧಾನಿ ನರೇಂದ್ರ ಮೋದಿ ಪಾತ್ರದ ಬಗ್ಗೆ ಬೆಳಕು ಚೆಲ್ಲುವ ಬಿಬಿಸಿಯ ‘ಇಂಡಿಯಾ: ದ ಮೋದಿ ಕ್ವಶ್ಚೆನ್‌’ ಸಾಕ್ಷ್ಯಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ನಿಷೇಧಿಸಿದ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್‌ ಶುಕ್ರವಾರ ನೋಟಿಸ್‌ ಜಾರಿ ಮಾಡಿದೆ. ಜೊತೆಗೆ ಪ್ರಕರಣದ ಮುಂದಿನ ವಿಚಾರಣೆ ವೇಳೆ ನಿಷೇಧಕ್ಕೆ ಹೊರಡಿಸಿದ ಮೂಲ ದಾಖಲೆಗಳನ್ನು ತನಗೆ ಸಲ್ಲಿಸುವಂತೆಯೂ ಸರ್ಕಾರಕ್ಕೆ ನ್ಯಾ.ಸಂಜೀವ್‌ ಖನ್ನಾ ಮತ್ತು ನ್ಯಾ.ಎಂ.ಎಂ.ಸುಂದರೇಶ್‌ ಅವರನ್ನೊಳಗೊಂಡ ನ್ಯಾಯಪೀಠ ಸೂಚಿಸಿದೆ. ಕೇಂದ್ರ ಸರ್ಕಾರ ಬಿಬಿಸಿಯ ಸಾಕ್ಷ್ಯಚಿತ್ರವನ್ನು ‘ಅಸಾಂವಿಧಾನಿಕ, ಏಕಪಕ್ಷೀಯ, ದುರುದ್ದೇಶದಿಂದ ನಿಷೇಧಿಸಿದೆ. ಜೊತೆಗೆ ಸಾಕ್ಷ್ಯಚಿತ್ರದ ಕುರಿತ ಅಂಶಗಳನ್ನು ಒಳಗೊಂಡ ಟ್ವೀಟ್‌ಗಳನ್ನೂ ಅಳಿಸಿಹಾಕಿದೆ’ ಎಂದು ಆರೋಪಿಸಿ ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌, ಪತ್ರಕರ್ತ ಎನ್‌.ರಾಮ್‌, ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, ವಕೀಲ ಎಂ.ಎಸ್‌. ಶರ್ಮಾ ಅರ್ಜಿ ಸಲ್ಲಿಸಿದ್ದರು.

ಇದನ್ನು ಓದಿ: ಮೋದಿ ವಿರುದ್ಧ ಬಿಬಿಸಿ ಸಾಕ್ಷ್ಯಚಿತ್ರ: ಕೇಂದ್ರದ ನಿಷೇಧ ಪ್ರಶ್ನಿಸಿ ಸುಪ್ರೀಕೋರ್ಟ್‌ಗೆ ಅರ್ಜಿ

ಈ ಅರ್ಜಿಗಳನ್ನು ಒಗ್ಗೂಡಿಸಿ ಶುಕ್ರವಾರ ವಿಚಾರಣೆ ನಡೆಸಿದ ನ್ಯಾಯಾಲಯ, ಕೇಂದ್ರ ಸರ್ಕಾರ ಮತ್ತು ಇತರರಿಗೆ ನೋಟಿಸ್‌ ಜಾರಿ ಮಾಡಿ, 3 ವಾರಗಳಲ್ಲಿ ಪ್ರತಿವಾದದ ಅಫಿಡವಿಟ್‌ ಸಲ್ಲಿಸುವಂತೆ ಸೂಚಿಸಿತು. ಜೊತೆಗೆ ವಿಚಾರಣೆಯನ್ನು ಏಪ್ರಿಲ್‌ಗೆ ಮುಂದೂಡಿ, ವಿಚಾರಣೆ ವೇಳೆ ಸಾಕ್ಷ್ಯಚಿತ್ರ ನಿಷೇಧಿಸಿದ ಮೂಲ ದಾಖಲೆಗಳನ್ನು ಸಲ್ಲಿಸುವಂತೆ ಸರ್ಕಾರಕ್ಕೆ ಸೂಚಿಸಿತು.

ಇದನ್ನೂ ಓದಿ: ಮೋದಿಯ ಬಿಬಿಸಿ ಸಾಕ್ಷ್ಯಚಿತ್ರ ವಿರೋಧಿಸಿದ ಬೆನ್ನಲ್ಲೇ ಕಾಂಗ್ರೆಸ್‌ ತೊರೆದ ಮಾಜಿ ಕೇಂದ್ರ ಸಚಿವ ಆಂಟನಿ ಪುತ್ರ

ಜ.17ರಂದು ಸಾಕ್ಷ್ಯಚಿತ್ರದ ಮೊದಲ ಭಾಗವನ್ನು ಮತ್ತು ಜ.24ರಂದು ಎರಡನೇ ಭಾಗವನ್ನು ಬಿಬಿಸಿ ಪ್ರಸಾರ ಮಾಡಿತ್ತು. ಈ ನಡುವೆ ಜ.21ರಂದು ಸಾಕ್ಷ್ಯಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ನಿಷೇಧಿಸಿದ ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು.

Latest Videos
Follow Us:
Download App:
  • android
  • ios