Asianet Suvarna News Asianet Suvarna News

ಜಿ20ಗೆ ಗೈರು ಚೀನಾದ ಎಡವಟ್ಟು, ಜಿನ್‌ಪಿಂಗ್‌ಗಿಂತ ಮೋದಿ ದೂರದೃಷ್ಟಿ ನಾಯಕ; ಯುಕೆ ಮಾಜಿ ಸಚಿವ!

ಭಾರತದ ಅಧ್ಯಕ್ಷತೆಯಲ್ಲಿ ನಡೆದ ಜಿ20 ಶೃಂಗಸಭೆ ಇದುವರೆಗಿನ ಎಲ್ಲಾ ಶೃಂಗಸಭೆಗೆ ಹೋಲಿಸಿದರೆ ಅತ್ಯಂತ ಯಶಸ್ವಿ ಸಮ್ಮೇಳನವಾಗಿದೆ. ಚೀನಾ ಗೈರಾಗುವ ಮೂಲಕ ಎಡವಟ್ಟು ಮಾಡಿದೆ. ಇಲ್ಲಿ  ಕ್ಸಿ ಜಿನ್‌ಪಿಂಗ್‌ಗಿಂತ ಪ್ರಧಾನಿ ಮೋದಿ ದೂರದೃಷ್ಟಿ ನಾಯಕನಂತೆ ಕಾಣುತ್ತಿದ್ದಾರೆ. ಜಿ20, ಮೋದಿ ಹಾಗೂ ಚೀನಾ ಕುರಿತು ಯುಕೆ  ಮಾಜಿ ಸಚಿವರ ವಿಶ್ಲೇಷಣೆ ಇಲ್ಲಿದೆ. 

PM Modi looks more visionary statesmen than Xi Jinping UK former minister Jim O Neill ckm
Author
First Published Sep 14, 2023, 7:39 PM IST

ಲಂಡನ್(ಸೆ.14) ಬ್ರಿಕ್ಸ್, ಜಿ7 ಶೃಂಗಸಭೆಗಳು ಜಾಗತಿಕ ಸಮಸ್ಯೆ ಬಗೆಹರಿಸುವ ಪ್ರಯತ್ನಗಳು ಮಾಡಿದೆ. ಆದರೆ ಭಾರತದ ಅಧ್ಯಕ್ಷತೆಯಲ್ಲಿ ನಡೆದ ಜಿ20 ಶೃಂಗಸಭೆ ವಿಶ್ವಕ್ಕೆ ಹೊಸ ಆಶಾಕಿರಣ ಮೂಡಿಸಿದೆ.  ಜಾಗತಿಕ ಸಮಸ್ಯೆಗಳಿಗೆ ಪರಿಹಾರ ನೀಡುವ ಹಾಗೂ ನ್ಯಾಯಸಮ್ಮತವಾಗಿ ಮುನ್ನಡೆಯ ಏಕೈಕ ಶೃಂಗವಾಗಿ ಗೋಚರಿಸುತ್ತಿದೆ ಎಂದು ಯುನೈಟೆಡ್ ಕಿಂಗ್‌ಡಮ್‌ನ  ಮಾಜಿ ಸಚಿವ, ಯುರೋಪಿಯನ್ ಯೂನಿಯನ್ ಸದಸ್ಯ ಜಿಮ್ ಒ ನೈಲ್ ಹೇಳಿದ್ದಾರೆ.

ಸೆಪ್ಟೆಂಬರ್ 9 ಹಾಗೂ 10 ರಂದು ದೆಹಲಿಯಲ್ಲಿ ಶೃಂಗಸಭೆ ಆಯೋಜನೆಗೊಂಡಿತ್ತು. ಭಾರತ ಅಧ್ಯಕ್ಷತೆಯಲ್ಲಿ ನಡೆದ ಈ ಶೃಂಗಸಭೆ ಅತ್ಯಂತ ಯಶಸ್ವಿ ಶೃಂಗಸಭೆ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಜಿ20 ಸಮಿತಿ ಸದಸ್ಯರು  ಮಾತ್ರವಲ್ಲ, ವಿಶ್ವದ ಹಲವು ರಾಷ್ಟ್ರಗಳು ಪ್ರಧಾನಿ ಮೋದಿಯನ್ನು ಕೊಂಡಾಡಿದೆ. ಅತ್ಯಂತ ಯಶಸ್ವಿಯಾಗಿ ಜಿ20 ಆಯೋಜಿಸಿದ್ದು ಮಾತ್ರವಲ್ಲ, ಘೋಷಣೆಗಳನ್ನು ಸಂಪೂರ್ಣವಾಗಿ ಅಂಗೀಕಾರಗೊಳಿಸಿದ ಹೆಗ್ಗಳಿಕೆಯೂ ಮೋದಿ ಬೆನ್ನಿಗಿದೆ. ಈ ಕುರಿತು ಜಿಮ್ ಒ ನೈಲ್ ವಿಶ್ಲೇಷಣೆಯಲ್ಲಿ ಹಲವು ಸೂಕ್ಷ್ಮತೆಯನ್ನು ಹೇಳಿದ್ದಾರೆ.

ಜಗತ್ತಿಗೆ ಈಗ ಭಾರತ ಬೇಕು, ನಾವು ಬೇಡ; ಜಿ20 ಶೃಂಗಸಭೆ ಯಶಸ್ಸಿಗೆ ಭಾರತವನ್ನು ಶ್ಲಾಘಿಸಿದ ಪಾಕಿಸ್ತಾನದ ನಾಗರಿಕರು

ಪ್ರಧಾನಿ ಮೋದಿ ಅತ್ಯಂತ ನಾಜೂಕಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜತಾಂತ್ರಿಕತೆ ಸಾಧಿಸಿದ್ದಾರೆ.  ಜಿ20 ಮುಂದೆ ಜಿ7, ಬ್ರಿಕ್ಸ್ ಪರ್ಯಾಯ ಗುಂಪುಗಳು ಸೈಡ್ ಶೋಗಳಾಗಿ ಕಾಣುತ್ತಿದೆ ಎಂದು ಜಿಮ್ ಒ ನೈಲ್ ಹೇಳಿದ್ದಾರೆ.  ಭಾರತದ ಪ್ರತಿಸ್ಪರ್ಧಿ, ಗಡಿ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳನ್ನು ಸೃಷ್ಟಿಸಿರುವ ಚೀನಾ  ಜೊತೆಗಿನ ಸಂಬಂಧ ಉತ್ತಮವಾಗಿಲ್ಲ. ಇದು ಜಿ20 ಶೃಂಗಸಭೆಯಲ್ಲಿ ಗೋಚರಿಸಿತು. ಮೋದಿ ಮಣಿಸಲು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಜಿ20ಗೆ ಗೈರಾಗಿ ಪಾಠ ಕಲಿಸಲು ಮುಂದಾಗಿದ್ದರು. ಇದನ್ನು ಚೀನಾ ತನ್ನ ಗೆಲುವು ಎಂದು ಬಿಂಬಿಸಿಕೊಂಡಿತ್ತು. ಅಸಲಿಗೆ  ಭಾರತ ಗೆದ್ದಿದೆ. ಚೀನಾ ಸಂಪೂರ್ಣ ನೆಲಕಚ್ಚಿದೆ ಎಂದು ತಮ್ಮ ವಿಶ್ಲೇಷಣೆಯಲ್ಲಿ ಜಿಮ್ ಒ ನೈಲ್ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ಗಿಂತ ದೂರದೃಷ್ಟಿ ನಾಯಕನಾಗಿ ಕಾಣುತ್ತಾರೆ. ಎಲ್ಲಾ ಅಡೆತಡೆಗಳ ನಡುವೆ ಪ್ರಧಾನಿ ಮೋದಿ ಆಫ್ರಿಕನ್ ಯೂನಿಯನ್ ರಾಷ್ಟ್ರಗಳನ್ನು ಜಿ20ಯಲ್ಲಿ ಸೇರಿಸಿದ್ದಾರೆ. ಮೋದಿ ಪ್ರಸ್ತಾವನೆಯನ್ನು ಎಲ್ಲಾ ಸದಸ್ಯ ರಾಷ್ಟ್ರಗಳು ಮರುಮಾತಿಲ್ಲದ ಒಪ್ಪಿಕೊಂಡಿದ್ದಾರೆ. ಇದು ಮೋದಿಗೆ ಜಾಗತಿಕ ಮಟ್ಟದಲ್ಲಿರುವ ಹಿಡಿತವನ್ನು ಹೇಳುತ್ತಿದೆ. ಇದು ಮೋದಿಯ ರಾಜತಾಂತ್ರಿಕ ಗೆಲುವಾಗಿದೆ.  

ಜಿ20 ವೇಳೆ ಚೀನಾದಿಂದ ಗೂಢಚಾರಿಕೆ ಯತ್ನ: ಬ್ಯಾಗ್‌ಗಳ ಸ್ಕ್ಯಾನ್ ಮಾಡಲು ಚೀನಾ ನಕಾರ

ಜಿ20 ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳು, ಘೋಷಣೆಗಳ ಅಂಗೀಕಾರದ ಕುರಿತು ಸದಸ್ಯ ರಾಷ್ಟ್ರಗಳು ಮಾತನಾಡಿದೆ. ಈ ಘೋಷಣೆಗಳ ಪ್ರಗತಿಗೆ ಪ್ರಧಾನಿ ಮೋದಿ ನವೆಂಬರ್ ತಿಂಗಳಲ್ಲಿ ವರ್ಚುವಲ್ ಸಭೆ ನಡೆಸುವ ಪ್ರಸ್ತಾವನೆ ಮುಂದಿಟ್ಟಿದ್ದಾರೆ. ಇದನ್ನೂ ಸದಸ್ಯರು ಒಪ್ಪಿಕೊಂಡಿದ್ದಾರೆ. ಈ ಮೂಲಕ ಜಿ20 ಶೃಂಗಸಭೆ ಮೂಲಕ ಜಾಗತಿಕ ಸಮಸ್ಯೆಗಳಿಗೆ ಸಂಪೂರ್ಣ ಪರಿಹಾರ ನೀಡಲು ಮೋದಿ ಕಟಿಬದ್ಧರಾಗಿದ್ದಾರೆ.  ರಷ್ಯಾ-ಉಕ್ರೇನ್ ನಡುವಿನ ಯುದ್ಧದಂತ ಅತ್ಯಂತ ಕ್ಲಿಷ್ಟಕರ ವಿಷಯದಲ್ಲೂ ಮೋದಿ ಜಾಣ್ಮೆ ಪ್ರದರ್ಶಿಸಿದ್ದಾರೆ. ಈ ಮೂಲಕ ವಿರುದ್ಧ ದಿಕ್ಕಿನಲ್ಲಿದ್ದ ಜಿ20 ರಾಷ್ಟ್ರಗಳನ್ನು ಒಗ್ಗಟ್ಟಿನ ಹೇಳಿಕೆ ಕೊಡಿಸುವಲ್ಲಿ ಮೋದಿ ಯಶಸ್ವಿಯಾಗಿದ್ದಾರೆ. ಈ ಎಲ್ಲಾ ಕಾರಣಗಳಿಂದ ಇದು ಭಾರತದ ಗೆಲುವಾಗಿದೆ. ಇಲ್ಲಿ ಚೀನಾ ಸೋತು ಜಗತ್ತಿನ ಮುಂದೆ ಬತ್ತಲಾಗಿದೆ ಎಂದು  ಜಿಮ್ ಒ ನೈಲ್ ತಮ್ಮ ಸುದೀರ್ಘ ವಿಶ್ಲೇಷಣೆಯಲ್ಲಿ ಹೇಳಿದ್ದಾರೆ.

Follow Us:
Download App:
  • android
  • ios